ADVERTISEMENT

‘ಮೂಲಸೌಕರ್ಯ ಕೆಲಸಕ್ಕೆ ಅನುಮತಿ ನೀಡಿ’

ಜೊಯಿಡಾ: ಅರಣ್ಯ ಪ್ರದೇಶದಲ್ಲಿ ಕೈಗೊಂಡ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 14:13 IST
Last Updated 19 ಜೂನ್ 2019, 14:13 IST

ಜೊಯಿಡಾ: ತಾಲ್ಲೂಕಿನ ತೇರಾಳಿ, ಮಾಸೆತ, ಗುಂಡಾಳಿ, ನಿಗುಂಡಿ ರಸ್ತೆಯ ಹಾಗೂ ಡಿಗ್ಗಿ ಸೇತುವೆಯ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಾಮಗಾರಿಗಳನ್ನು ಪೂರ್ಣಗೊಳಿಸಲು ಅರಣ್ಯ ಇಲಾಖೆ ಅನುಮತಿ ನೀಡಬೇಕು ಎಂದು ಜನಪ್ರತಿನಿಧಿಗಳು ಅರಣ್ಯಾಧಿಕಾರಿಗಳನ್ನು ಒಕ್ಕೊರಲಿನಿಂದ ಆಗ್ರಹಿಸಿದರು.

ತಾಲ್ಲೂಕಿನ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳು ಕೈಗೊಂಡಿರುವ ಕಾಮಗಾರಿಗಳ ಪ್ರಗತಿಯ ಬಗ್ಗೆ ಬುಧವಾರ ನಡೆದ ಸಭೆಯಲ್ಲಿ ಈ ಕೂಗು ಕೇಳಿಬಂತು.

ಕುಂಬಾರವಾಡ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪುರುಷೋತ್ತಮ ಕಾಮತ್ ಮಾತನಾಡಿ, ರಸ್ತೆ, ನೀರು ಹಾಗೂ ವಿದ್ಯುತ್ ಕಾಮಗಾರಿಗಳಿಗೆ ಮಾನವೀಯ ದೃಷ್ಟಿಯಿಂದ ಅನುಮತಿ ನೀಡುವಂತೆ ಒತ್ತಾಯಿಸಿದರು.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ತೋಡ್ಕರ, ಆಯಾಪ್ರದೇಶಗಳಿಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ಆ ಭಾಗದ ವಲಯ ಅರಣ್ಯಾಧಿಕಾರಿಗಳು, ವನಪಾಲಕರು ಹಾಗೂ ಅರಣ್ಯ ರಕ್ಷಕರ ಜೊತೆ ಸೇರಿ ಖುದ್ದು ಭೇಟಿ ನೀಡಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪುರುಷೋತ್ತಮ ಮಲ್ಯ ಮಾತನಾಡಿ, ‘ಸುಳಾವಲಿ, ಮಾಸೆತ, ದಿಗಾಳಿ ಹಾಗೂ ಗುಂದ ಭಾಗದ 25 ಮನೆಗಳಿಗೆ ಬಿಟ್ಟು ತಾಲ್ಲೂಕಿನ ಎಲ್ಲ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ನೀಡಲಾಗಿದೆ. ಉಳಿದ ಭಾಗಗಳಲ್ಲಿ ಕಾಮಗಾರಿ ಹಮ್ಮಿಕೊಳ್ಳಲು ಅರಣ್ಯ ಇಲಾಖೆಯ ಅನುಮತಿ ದೊರೆತಿಲ್ಲ’ ಎಂದು ತಿಳಿಸಿದರು.

ಹಸ್ತಕ್ಷೇಪಕ್ಕೆ ಆಕ್ಷೇಪ:ಪ್ರತಿಯೊಂದು ಅಭಿವೃದ್ದಿ ಕಾಮಗಾರಿಗಳಿಗೆ ಅರಣ್ಯ ಇಲಾಖೆ ಹಸ್ತಕ್ಷೇಪ ಮಾಡುತ್ತಿದೆ. ಇದು ಮುಂದುವರಿದರೆ ಅರಣ್ಯ ಇಲಾಖೆಯ ಸಿಬ್ಬಂದಿಯ ನಿವಾಸಗಳಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಜನಪ್ರತಿನಿಧಿಗಳು ಸಭೆಯಲ್ಲಿಎಚ್ಚರಿಕೆ ನೀಡಿದರು.

ಜೊಯಿಡಾ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಶ್ಯಾಮ ಪೋಕಳೆ ಮಾತನಾಡಿ, ‘ಕಾಳಿ ನದಿಯ ಹಿನ್ನೀರನ್ನು ಬಳಸಿ ಜೊಯಿಡಾ ಭಾಗದ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲುಶಾಶ್ವತ ಕಾಮಗಾರಿಯ ಯೋಜನೆ ರೂಪಿಸಲಾಗಿದೆ. ಈ ಬಗ್ಗೆತಾಲ್ಲೂಕು ಮಟ್ಟದಲ್ಲಿಕೈಗೊಂಡ ಕ್ರಮಗಳೇನು’ ಎಂದು ಪ್ರಶ್ನಿಸಿದರು.ಯೋಜನೆಯ ಜಾರಿಗೆ ಪ್ರಯತ್ನಿಸುವುದಾಗಿ ಅಧಿಕಾರಿಗಳು ಹೇಳಿದರು.

ಆಕ್ರೋಶಕ್ಕೆ ಕಾರಣವಾದ ಚಪ್ಪಾಳೆ: ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿಮಟ್ಟದಲ್ಲಿ ಗಿಡ ನೆಡುವ ಕಾರ್ಯಕ್ರಮವಿದೆ ಎಂದು ತಾಲ್ಲೂಕು ಪಂಚಾಯ್ತಿಯಿಂದ ಸಭೆಗೆ ಮಾಹಿತಿ ನೀಡಲಾಯಿತು. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಚಪ್ಪಾಳೆ ತಟ್ಟಿದರು. ಇದರಿಂದ ಸಭೆಯಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಇಲಾಖೆಯ ವಿರುದ್ಧ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿ ಕ್ಷಮೆ ಕೋರುವಂತೆ ಒತ್ತಾಯಿಸಿದರು.

ಆಗ ಕುಂಬಾರವಾಡಾ ಎ.ಸಿ.ಎಫ್ ಶಿವಾನಂದ ತೋಡ್ಕರ ಮತ್ತು ಇತರ ಅಧಿಕಾರಿಗಳು ಮಧ್ಯಪ್ರವೇಶಿಸಿ, ‘ಹೊಸದಾಗಿ ಬಂದಿರುವ ಸಿಬ್ಬಂದಿಯಿಂದ ತಪ್ಪಾಗಿರಬಹುದು. ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ’ಎಂದು ಸಮಾಧಾನ ಪಡಿಸಿದರು.

ಕಾತೆಲಿ ಅಂಗನವಾಡಿ ಹಾಗೂ ಆವೆಡಾ ಗ್ರಾಮದ ಬಾಡಗುಂದದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆಯೂ ಚರ್ಚೆಯಾಯಿತು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನರ್ಮದಾ ಪಾಟ್ನೇಕರ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪಂಚಾಯ್ತಿ ಸದಸ್ಯರಾದ ರಮೇಶ ನಾಯ್ಕ, ತಾಲ್ಲೂಕುಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಹಾಲಮ್ಮನ್ನವರ, ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.