ADVERTISEMENT

ಕಲೆಯನ್ನು ಒಲಿಸಿಕೊಂಡ ಆಳ್ವಾಸ್ ಮಕ್ಕಳು

ಕುಳಿತಲ್ಲಿಂದ ಕದಲದೇ ಎರಡೂವರೆ ತಾಸಿನ ಪ್ರದರ್ಶನದ ವೀಕ್ಷಿಸಿದ ಪ್ರೇಕ್ಷಕರು

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 13:50 IST
Last Updated 18 ಜನವರಿ 2019, 13:50 IST
ಬಾಲಕರು ಪ್ರದರ್ಶಿಸಿದ ಮಲ್ಲಕಂಬ ಕಸರತ್ತು
ಬಾಲಕರು ಪ್ರದರ್ಶಿಸಿದ ಮಲ್ಲಕಂಬ ಕಸರತ್ತು   

ಶಿರಸಿ: ಮೈನವಿರೇಳಿಸುವ ಮಲ್ಲಕಂಬ, ಹಗ್ಗದ ಮೇಲೆ ಹುಡುಗಿಯರ ಕಸರತ್ತು, ನವಿರಾದ ಭರತನಾಟ್ಯ, ಕಥಕ್, ಬಣ್ಣದೋಕುಳಿ ಬಂಜಾರ ನೃತ್ಯ, ಮಣಿಪುರಿ ಸ್ಟಿಕ್ ಡಾನ್ಸ್, ಕೇರಳದ ಮೋಹಿನಿಅಟ್ಟಮ್ ಹೀಗೆ ಹಲವಾರು ಕಲಾ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಅಪೂರ್ವ ಅವಕಾಶ ಕಲ್ಪಿಸಿದ್ದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಕ್ಕಳು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಆಳ್ವಾಸ್ ನುಡಿಸಿರಿ ಘಟಕ ಜಂಟಿಯಾಗಿ ಗುರುವಾರ ಸಂಜೆಯನ್ನು ಕಲೆಯ ಬೆರಗಿನೊಂದಿಗೆ ಸಮ್ಮಿಳಿತಗೊಳಿಸಿದವು. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ 350ಕ್ಕೂ ಅಧಿಕ ಮಕ್ಕಳು ಎರಡೂವರೆ ತಾಸು ನೀಡಿದ ಕಲಾ ಪ್ರದರ್ಶನದ ಯಶಸ್ಸಿಗೆ ಕಿಕ್ಕಿರಿದು ಸೇರಿದ್ದ ಜನರು ಸಾಕ್ಷಿಯಾದರು.

ಶ್ವೇತ ವಸ್ತ್ರಧಾರಿಗಳಾಗಿ ಬಂದಿದ್ದ ಅಷ್ಟಲಕ್ಷ್ಮಿಯರು ಮೋಹಿನಿಅಟ್ಟಮ್‌ನಲ್ಲಿ ಪ್ರೌಢಿಮೆ ಮೆರೆದರು. ರಾಮಾಯಣದ ಕತೆಯನ್ನು ಬಡಗುತಿಟ್ಟಿನ ಯಕ್ಷಗಾನ ಶೈಲಿಯಲ್ಲಿ ಹಾಗೂ ‘ಅಗ್ರಪೂಜೆ’ಯನ್ನು ತೆಂಕುತಿಟ್ಟಿನ ಶೈಲಿಯಲ್ಲಿ ಮಕ್ಕಳು ನಿರೂಪಿಸಿದರು. ಹಿಮ್ಮೇಳದ ಚಂಡೆ, ಮದ್ದಳೆ, ಭಾಗವತಿಕೆ ಎಲ್ಲವನ್ನೂ ವಿದ್ಯಾರ್ಥಿಗಳೇ ಶಿಸ್ತುಬದ್ಧವಾಗಿ ನಡೆಸಿಕೊಟ್ಟರು.

ADVERTISEMENT

ಮಣಿಪುರದ ಸ್ಟಿಕ್ ಡಾನ್ಸ್, ದೋಲ್ ಚಲಮ್, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ನವದುರ್ಗೆಯರ ಭರತನಾಟ್ಯ, ಗುಜರಾತಿನ ಗರ್ಭಾ, ದಾಂಡಿಯಾ, ಇವೆಲ್ಲಕ್ಕಿಂತ ಭಿನ್ನವಾದ ಪುರುಲಿಯ ಸಿಂಹ ನೃತ್ಯಕ್ಕೆ ನೋಡಗರು ಚಪ್ಪಾಳೆ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು. ಮೆಟ್ಟಿಲಿಳಿದು ಬಂದ ಸಿಂಹವೊಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮೋಹನ ಆಳ್ವ ಎದುರು ಹೋಗಿ ತಲೆಬಾಗಿ, ಅಕ್ಕಪಕ್ಕದಲ್ಲಿದ್ದ ಮಕ್ಕಳು ಸಮೀಪ ಹಾದು ಮುದ ನೀಡಿತು. ಪಂಜಾಬಿನ ಬಾಂಗ್ರಾ ನೃತ್ಯ ತರುಣ–ತರುಣಿಯಲ್ಲಿ ಸಂಚಲನ ಮೂಡಿಸಿತು. ವೇಗದ ಕುಣಿತ, ಅಬ್ಬರದ ಸಂಗೀತಕ್ಕೆ ಕುಳಿತಲ್ಲೇ ಹೆಜ್ಜೆ ಹಾಕಿದರು.

ಬಾಲಕರ ಮಲ್ಲಕಂಬದ ಕಸರತ್ತು, ಹಗ್ಗದ ಮೇಲಿನ ಸರ್ಕಸ್‌ ಅನ್ನು ಪ್ರೇಕ್ಷಕರು ತುದಿಗಾಲಿನಲ್ಲಿ ಕುಳಿತು, ಕಣ್ಣರೆಪ್ಪೆ ಮಿಟುಕಿದೇ ನೋಡುತ್ತಿದ್ದರು, ಹಗ್ಗದ ಮೇಲೆ ಬಾಲೆಯರು ಸರಸರನೆ ಹತ್ತುತ್ತಿದ್ದರೆ, ಕುಳಿತು ನೋಡುತ್ತಿದ್ದವರ ಮೈ ಜುಮ್ಮೆನ್ನುತ್ತಿತ್ತು. ಹೊಸತನ ಹೊಂದಿದ್ದ ಪ್ರತಿ ಪ್ರದರ್ಶನವೂ ಪ್ರೇಕ್ಷಕರಲ್ಲಿ ಮೂಡಿಸಿದ ಕುತೂಹಲವನ್ನುಕೊನೆಯ ತನಕವೂ ಕಾದುಕೊಂಡಿತು.

ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ, ನುಡಿಸಿರಿ ಘಟಕದ ಅಧ್ಯಕ್ಷ ಪ್ರಕಾಶ ಭಾಗವತ, ಪ್ರಮುಖರಾದ ದೀಪಕ ದೊಡ್ಡೂರ, ಭೀಮಣ್ಣ ನಾಯ್ಕ, ಶಶಿಭೂಷಣ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.