ADVERTISEMENT

ಶ್ರಾವಣಕ್ಕೆ ಏರದ ಅಡಿಕೆ ದರ

ಎರಡು ವರ್ಷದಿಂದ ಏರಿಕೆ ಕಾಣದ ಅಡಿಕೆ ದರ: ದಾಸ್ತಾನಿಟ್ಟ ರೈತರಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 7:12 IST
Last Updated 5 ಆಗಸ್ಟ್ 2025, 7:12 IST
ಶಿರಸಿಯ ಟಿಎಂಎಸ್ ಸಹಕಾರ ಸಂಘದಲ್ಲಿ ಮಾರಾಟಕ್ಕೆ ಬಂದಿರುವ ಚಾಲಿ ಅಡಿಕೆ 
ಶಿರಸಿಯ ಟಿಎಂಎಸ್ ಸಹಕಾರ ಸಂಘದಲ್ಲಿ ಮಾರಾಟಕ್ಕೆ ಬಂದಿರುವ ಚಾಲಿ ಅಡಿಕೆ    

ಶಿರಸಿ: ಶ್ರಾವಣ ಮಾಸದ ವೇಳೆ ಪ್ರತಿ ವರ್ಷ ಅಡಿಕೆ ದರ ಏರಿಕೆ ಕಾಣುವುದು ವಾಡಿಕೆ. ಆದರೆ ಕಳೆದ ಎರಡು ವರ್ಷಗಳಿಂದ ದರ ಏರಿಕೆ ಆಗದಿರುವುದು ಅಡಿಕೆ ದಾಸ್ತಾನಿಟ್ಟ ಬೆಳೆಗಾರರ ನಿರೀಕ್ಷೆಗೆ ತಣ್ಣೀರೆರಚಿದೆ.

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯ ಧಾರಣೆ ಏರಿಕೆಯತ್ತ ಸಾಗುತ್ತಿಲ್ಲ. ಹಂಗಾಮಿನಲ್ಲಿ ಇರುವ ದರವೇ ಇಡೀ ವರ್ಷದುದ್ದಕ್ಕೂ ಮುಂದುವರಿಯುತ್ತಿದ್ದು, ಹೆಚ್ಚಿನ ದರ ನಿರೀಕ್ಷಿಸಿ ದಾಸ್ತಾನಿಡುವ ಬೆಳೆಗಾರರಿಗೆ ನಿರಾಸೆಗೆ ಕಾರಣವಾಗುತ್ತಿದೆ. ಚಾಲಿ ಅಡಿಕೆ ಕ್ವಿಂಟಲ್‍ಗೆ ಸರಾಸರಿ ₹40 ಸಾವಿರ ಹಾಗೂ ಕೆಂಪಡಿಕೆ ₹46 ಸಾವಿರ ದರ ಲಭಿಸುತ್ತಿದೆ.

ಏಪ್ರಿಲ್, ಮೇ ತಿಂಗಳಲ್ಲಿ ಶೇ 50ರಷ್ಟು ಬೆಳೆಗಾರರು ಅಡಿಕೆ ಮಹಸೂಲು ಮಾರುತ್ತಾರೆ. ಶೇ 15ರಷ್ಟು ಮಂದಿ ಮಳೆಗಾಲದಲ್ಲಿ ಅಡಿಕೆ ಮಾರುತ್ತಾರೆ. ಆರ್ಥಿಕವಾಗಿ ಸಬಲರಾಗಿರುವ ಹಾಗೂ ಇನ್ನಷ್ಟು ಉತ್ತಮ ದರ ನಿರೀಕ್ಷೆ ಹೊಂದಿರುವ ಉಳಿದ ಬೆಳೆಗಾರರು ಶ್ರಾವಣ ಮಾಸದವರೆಗೆ ಕಾಯುತ್ತಾರೆ. ದಶಕಗಳಿಂದ ಶ್ರಾವಣದ ವೇಳೆ ಬೇಡಿಕೆ ಹೆಚ್ಚುತ್ತಿದ್ದ ಕಾರಣ ಹಂಗಾಮಿನ ದರಕ್ಕಿಂತ ₹6 ಸಾವಿರದಿಂದ ₹10 ಸಾವಿರದವರೆಗೆ ಹೆಚ್ಚಿನ ದರ ಪ್ರತಿ ಕ್ವಿಂಟಲ್‍ಗೆ ಲಭಿಸುತ್ತಿದ್ದುದು ಇದಕ್ಕೆ ಕಾರಣವಾಗಿತ್ತು. ಆದರೆ ಎರಡು ವರ್ಷಗಳಿಂದ ದರ ಏರಿಕೆಯಾಗದ ಕಾರಣ ಬೆಳೆಗಾರರು ಶ್ರಾವಣಕ್ಕೆ ಕಾಯುವುದನ್ನು ಬಿಡುವ ಇಚ್ಛೆ ತೋರುತ್ತಿದ್ದಾರೆ. ಆದರೆ ಈ ಬಾರಿ ನಿರೀಕ್ಷೆಯಂತೆ ದರ ಏರಿಕೆಯಾಗಿಲ್ಲ. ಇದು ಬೆಳೆಗಾರರ ನಿರಾಸೆಗೆ ಕಾರಣವಾಗಿದೆ. 

ADVERTISEMENT

‘ಪ್ರಸ್ತುತ ಶಿರಸಿ ಅಡಿಕೆಯ ಪ್ರಮುಖ ಮಾರುಕಟ್ಟೆ ಕೇಂದ್ರವಾಗಿರುವ ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶಗಳಿಂದ ಶ್ರಾವಣದ ಬೇಡಿಕೆ ತಗ್ಗಿದೆ. ಆ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಿರುವ ಕಾರಣಕ್ಕೆ ಖರೀದಿಗೆ ಆ ಭಾಗದ ವರ್ತಕರು ಹಿಂದೇಟು ಹಾಕುತ್ತಿದ್ದಾರೆ. ಜತೆಗೆ, ಕಳಪೆ ಅಡಿಕೆ ಆ ಭಾಗದಲ್ಲಿ ಲಭ್ಯವಾದರೆ ಅವರಿಂದ ಇಲ್ಲಿನ ಅಡಿಕೆಗೆ ಬೇಡಿಕೆ ಕಡಿಮೆಯಾಗುತ್ತದೆ. ಹೀಗಾಗಿ ಸ್ಥಳೀಯವಾಗಿ ಅಡಿಕೆ ಮಾರುಕಟ್ಟೆಗೆ ಬಂದರೂ ದರ ಏರಿಕೆ ಆಗುತ್ತಿಲ್ಲ' ಎಂಬುದು ಸಹಕಾರ ಸಂಘದ ಪ್ರಮುಖರ ಮಾತು. 

‘ಕಳೆದ ವರ್ಷದ ಹವಾಮಾನ ವೈಪರೀತ್ಯ, ವಿಪರೀತ ಮಳೆ, ಕೊಳೆರೋಗ ಇತ್ಯಾದಿ ಕಾರಣದಿಂದ ಬೆಳೆ ನಷ್ಟ ಉಂಟಾಗಿತ್ತು. ಫಸಲು ಕಡಿಮೆಯಾದ ಕಾರಣ ರೈತರು ಉತ್ತಮ ದರದ ನಿರೀಕ್ಷೆ ಹೊಂದಿದ್ದರು. ಆದರೆ ಮಾರುಕಟ್ಟೆ ಕಳೆದ ಎರಡು ವರ್ಷಗಳಿಂದ ಒಂದೇ ರೀತಿಯಲ್ಲಿ ಮುಂದುವರಿಯುತ್ತಿದ್ದು, ಏರಿಕೆ ಹಾದಿ ಕಂಡಿಲ್ಲ. ಉತ್ತಮ ದರಕ್ಕಾಗಿ ದಾಸ್ತಾನಿಟ್ಟು ನಷ್ಟವೇ ಆಗಿದೆ’ ಎಂದು ಬೆಳೆಗಾರ ನರಸಿಂಹ ಹೆಗಡೆ ಹೇಳಿದರು. 

‘ಅಡಿಕೆ ಬೆಳೆಯ ಖರ್ಚು ವೆಚ್ಚಗಳನ್ನು ಸರಿದೂಗಿಸಿ ಜೀವನ ನಿರ್ವಹಣೆ ಮಾಡಬೇಕಾದರೆ ಸದ್ಯದ ಸ್ಥಿತಿಯಲ್ಲಿ ಕ್ವಿಂಟಲ್ ಚಾಲಿ ಅಡಿಕೆಗೆ ಸರಾಸರಿ ₹50 ಸಾವಿರ ದರವಾದರೂ ಸಿಗಬೇಕು. ಕೂಲಿ ವೆಚ್ಚವೂ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಔಷಧ ಸಿಂಪಡಣೆ, ಕೊಯ್ಲಿಗೆ ನುರಿತ ಕೆಲಸಗಾರರು ಲಭಿಸುತ್ತಿಲ್ಲ. ಅಲ್ಲದೇ ಎಲೆಚುಕ್ಕಿಯಂತಹ ರೋಗಗಳು ಮಾರಕವಾಗುತ್ತಿವೆ. ಇಳುವರಿಯಂತೂ ಅರ್ಧದಷ್ಟು ಇಳಿದಿದೆ. ಇಂಥ ಕಾಲಘಟ್ಟದಲ್ಲಿ ದರ ಏರದಿದ್ದರೆ ರೈತರ ಜೀವನ ಕಷ್ಟವಾಗಲಿದೆ’ ಎಂಬುದು ಬಹುತೇಕ ಅಡಿಕೆ ಬೆಳೆಗಾರರ ಅಭಿಪ್ರಾಯ.

Highlights - ಚಾಲಿ ಅಡಿಕೆ ಕ್ವಿಂಟಲ್‍ಗೆ ಸರಾಸರಿ ₹40 ಸಾವಿರ ಕೆಂಪಡಿಕೆ ಕ್ವಿಂಟಲ್‍ಗೆ ಸರಾಸರಿ ₹46 ಸಾವಿರ ಶ್ರಾವಣದಲ್ಲಿ 2 ವರ್ಷದಿಂದ ಏರದ ಅಡಿಕೆ ಧಾರಣೆ 

Quote - ಅಡಿಕೆ ದರ ಹೆಚ್ಚಳವಾಗದಿದ್ದರೂ ಸ್ಥಿರವಾಗಿದೆ. ಮುಂದಿನ ಇಳುವರಿಯೇ ಕಡಿಮೆಯಿದ್ದು ಆಗ ಬೇಡಿಕೆ ಹೆಚ್ಚಿದರೆ ದರ ಹೆಚ್ಚಾಗುವ ಸಾಧ್ಯತೆಯಿದೆ  ವಿನಯ ಹೆಗಡೆ ಟಿಎಂಎಸ್ ಮುಖ್ಯ ಕಾರ್ಯನಿರ್ವಾಹಕ

Cut-off box - ದರ ಏರಿಸಿದರೆ ಬೇಡಿಕೆ ಕಡಿಮೆ ಸಾಧ್ಯತೆ ಸ್ಥಳೀಯ ಮಾರುಕಟ್ಟೆಯಲ್ಲಿ ಇಲ್ಲಿನ ವರ್ತಕರು ಸಹಕಾರ ಸಂಘಗಳು ಅಡಿಕೆಯ ದರ ಏರಿಸಬಹುದು. ಇದರಿಂದ ಹೊರ ರಾಜ್ಯದ ವರ್ತಕರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಇಲ್ಲವೇ ಇಲ್ಲಿನ ಅಡಿಕೆ ಖರೀದಿಸುವುದಕ್ಕೆ ಹಿಂದೇಟು ಹಾಕುತ್ತಾರೆ. ಜತೆಗೆ ಕಡಿಮೆ ದರದ ಕಳಪೆ ದರ್ಜೆಯ ಹೊರ ಪ್ರದೇಶದ ಅಡಿಕೆ ಮಾರುಕಟ್ಟೆಗೆ ಬರುತ್ತದೆ. ಬರ್ಮಾ ಮಯನ್ಮಾರ್ ಸೇರಿದಂತೆ ನಾನಾ ದೇಶಗಳಿಂದ ಅಡಿಕೆ ಭಾರತಕ್ಕೆ ಬಂದು ಇಲ್ಲಿನ ಅಡಿಕೆ ದರಕ್ಕೆ ಮತ್ತಷ್ಟು ಹೊಡೆತ ನೀಡುತ್ತಿದೆ. ಸದ್ಯ ಅಡಿಕೆ ಬೆಳೆಗೆ ಸ್ಥಿರ ಧಾರಣೆ ಲಭಿಸುತ್ತಿದ್ದು ಅದೇ ದರ ಮುಂದುವರಿಯುವ ಸಾಧ್ಯತೆಯಿದೆ' ಎಂಬುದು ಸಹಕಾರ ಸಂಘಗಳ ಮುಖ್ಯಸ್ಥರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.