ADVERTISEMENT

ಯಕ್ಷಗಾನದ ದಿರಿಸಿನಲ್ಲೇ ದೋಸೆ ವಿತರಣೆ: ಕಲಾವಿದರ ವಿಷಾದ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 2:35 IST
Last Updated 7 ಡಿಸೆಂಬರ್ 2021, 2:35 IST
ಯಕ್ಷಗಾನದ ದಿರಿಸಿನಲ್ಲೇ ದೋಸೆ ವಿತರಣೆ
ಯಕ್ಷಗಾನದ ದಿರಿಸಿನಲ್ಲೇ ದೋಸೆ ವಿತರಣೆ   

ಯಲ್ಲಾಪುರ: ಕಲಾವಿದರಿಬ್ಬರು ಯಕ್ಷಗಾನ ದಿರಿಸಿನಲ್ಲಿಯೇ ಹೋಟೆಲ್‌ನಲ್ಲಿ ದೋಸೆ ವಿತರಣೆ ಮಾಡಿದ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. ಈ ಬಗ್ಗೆ ಕಲಾವಿದರೂವಿಷಾದ ವ್ಯಕ್ತಪಡಿಸಿದ್ದು, ನಡೆದ ತಪ್ಪು, ಸರಿಗಳನ್ನು ಪ್ರಾಜ್ಞರು ನಿರ್ಧರಿಸಲಿ ಎಂದು ಪ್ರತಿಕ್ರಿಯಿಸಿದ್ದಾರೆ.

ಕಲಾವಿದರಾದ ಭಾಸ್ಕರ ಗಾಂವ್ಕರ್ ಹಾಗೂ ಸದಾಶಿವ ಭಟ್ಟ ಅವರು, ನ.24ರಿಂದ 26ರವರೆಗೆ ಮಹಾರಾಷ್ಟ್ರದ ನಾಗಪುರದಲ್ಲಿ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ನಿಗದಿಯಾಗಿದ್ದ ಸ್ಥಳವು ಹೋಟೆಲ್ ಒಂದರ ಪಕ್ಕದಲ್ಲಿತ್ತು. ಅಲ್ಲಿ ಅವರಿಬ್ಬರು ಪ್ಲೇಟ್‌ಗಳಲ್ಲಿ ಮಸಾಲೆ ದೋಸೆಯನ್ನು ಗ್ರಾಹಕರಿಗೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಇದರ ವಿಡಿಯೊ ತುಣಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಯಕ್ಷಗಾನದ ವೇಷಭೂಷಣದಲ್ಲಿ ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಯಲ್ಲಾಪುರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾಸ್ಕರ ಗಾಂವ್ಕರ್ ಹಾಗೂ ಸದಾಶಿವ ಭಟ್ಟ, ‘ಯಕ್ಷಗಾನ ಕಾರ್ಯಕ್ರಮ ಮುಗಿಸಿ ಹೋಟೆಲ್ ಉದ್ಘಾಟನಾ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದೆವು. ಹೋಟೆಲ್ ಮಾಲೀಕರು ನಮ್ಮನ್ನು ಸತ್ಕರಿಸಿ ಉಪಾಹಾರ ನೀಡಿದ್ದರು. ಆ ವೇಳೆ ಕಾರ್ಯಕ್ರಮಕ್ಕೆ ಬಂದಿದ್ದ ಇತರ ಗಣ್ಯರಿಗೆ ಅನಿರೀಕ್ಷಿತವಾಗಿ ನಮ್ಮ ಕೈಯಿಂದ ಒಂದು ಮಸಾಲೆ ದೋಸೆ ತಟ್ಟೆಯನ್ನು ಕೊಡಿಸಿದ್ದಾರೆ. ಆ ಸಂದರ್ಭದಲ್ಲಿ ನಾವು ಯಕ್ಷಗಾನದ ಉಡುಪಿನಲ್ಲೇ ಇದ್ದೆವು’ ಎಂದು ತಿಳಿಸಿದರು.

ADVERTISEMENT

‘ಇದನ್ನು ಕೆಲವರು ವಿಡಿಯೊ ರೆಕಾರ್ಡ್ ಮಾಡಿದ್ದರು. ಇದರಿಂದ ತಪ್ಪು ಸಂದೇಶ ರವಾನೆ ಆಗಬಹುದೆಂಬ ಭಯದಲ್ಲೇ ತಕ್ಷಣ ಸ್ಥಳಕ್ಕೆ ತೆರಳಿ ವಿಡಿಯೊ ಅಥವಾ ಫೋಟೊ ಇದ್ದರೆ ಡಿಲೀಟ್ ಮಾಡಲು ಕೋರಿದ್ದೇವೆ. ಆದರೆ, ಅದಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿದಾಡಿತ್ತು. ಅದನ್ನು ನೋಡಿದ ಹಲವರು ತಮಗೆ ಬೇಕಾದಂತೆ ಇಲ್ಲಸಲ್ಲದ ಪದಗಳನ್ನೆಲ್ಲಾ ಬರೆಯುತ್ತಿದ್ದಾರೆ. ಒಂದರ್ಥದಲ್ಲಿ ಹೋಟೆಲ್ ಮಾಲೀಕರು ಮತ್ತು ನಮ್ಮಿಂದ ಅಚಾತುರ್ಯ ಆಗಿರುವುದು ಸತ್ಯ. ಇದಕ್ಕಾಗಿ ಯಕ್ಷಗಾನ ಪ್ರೇಮಿಗಳಲ್ಲಿ ವಿಷಾದ ವ್ಯಕ್ತಪಡಿಸುತ್ತೇವೆ’ ಎಂದು ಹೇಳಿದರು.

ಅಚಾತುರ್ಯದಿಂದಾದ ಸಣ್ಣ ವಿಚಾರವನ್ನು ದೊಡ್ಡ ಮಾಡುತ್ತಿರುವ ಕೆಲವರು, ಯಕ್ಷಗಾನ ರಂಗದಲ್ಲಿ ಆಗುತ್ತಿರುವ ಅಪಸವ್ಯದ ಕುರಿತು ಚಕಾರವೇಕೆ ಎತ್ತುತ್ತಿಲ್ಲ ಎಂದೂ ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.