ADVERTISEMENT

‘ಧರ್ಮಾ’ ನೀರಿಗೆ ಕಾಯುತ್ತಿರುವ ಬದನಗೋಡ

ಸಮಸ್ಯೆ ಹೊತ್ತ ದೊಡ್ಡ ಗ್ರಾ.ಪಂ. ವಿಭಜನೆಗೆ ಜನರ ಒತ್ತಾಯ

ಗಣಪತಿ ಹೆಗಡೆ
Published 23 ನವೆಂಬರ್ 2022, 5:36 IST
Last Updated 23 ನವೆಂಬರ್ 2022, 5:36 IST
ಶಿರಸಿ ತಾಲ್ಲೂಕಿನ ಬದನಗೋಡ ಗ್ರಾಮ ಪಂಚಾಯ್ತಿಯ ಸಭಾಭವನವನ್ನು ತಾತ್ಕಾಲಿಕವಾಗಿ ಘನ ತ್ಯಾಜ್ಯ ವಿಲೇವಾರಿ ಘಟಕವಾಗಿ ಮಾರ್ಪಡಿಸಿರುವುದು
ಶಿರಸಿ ತಾಲ್ಲೂಕಿನ ಬದನಗೋಡ ಗ್ರಾಮ ಪಂಚಾಯ್ತಿಯ ಸಭಾಭವನವನ್ನು ತಾತ್ಕಾಲಿಕವಾಗಿ ಘನ ತ್ಯಾಜ್ಯ ವಿಲೇವಾರಿ ಘಟಕವಾಗಿ ಮಾರ್ಪಡಿಸಿರುವುದು   

ಶಿರಸಿ: ತಾಲ್ಲೂಕಿನ ಅತಿದೊಡ್ಡ ಗ್ರಾಮ ಪಂಚಾಯ್ತಿ ಎನಿಸಿರುವ ಬದನಗೋಡದಲ್ಲಿ ಹತ್ತಾರು ಸಮಸ್ಯೆಗಳು ಜ್ವಲಂತವಾಗುಳಿದಿವೆ. ಇವುಗಳನ್ನು ಪರಿಹರಿಸಲು ಆಡಳಿತ ವ್ಯವಸ್ಥೆ ಹೈರಾಣಾಗುತ್ತಿದೆ.

ಬಯಲು ಸೀಮೆ ವಾತಾವರಣ ಹೊಂದಿರುವ ಈ ಭಾಗದಲ್ಲಿ ಕುಡಿಯುವ ನೀರು, ಹಲವು ಗ್ರಾಮಗಳಿಗೆ ರಸ್ತೆ ಸೌಕರ್ಯ, ಸಾರಿಗೆ ಸಂಪರ್ಕ, ಸ್ವಚ್ಛತೆ ಇಂದಿಗೂ ಮರೀಚಿಕೆಯಾಗಿದೆ. ಇದು ಗ್ರಾಮಸ್ಥರಲ್ಲಿ ಸಹಜವಾಗಿ ಅಸಮಾಧಾನ ಹುಟ್ಟುಹಾಕುತ್ತಿದೆ.

ಬದನಗೋಡ, ಬೆಳ್ಳನಕೇರಿ, ದನಗನಹಳ್ಳಿ, ಕಾಳಂಗಿ, ಕುಪಗಡ್ಡೆ, ಸಂತೊಳ್ಳಿ, ವದ್ದಲ ಸೇರಿ ಏಳು ಗ್ರಾಮಗಳನ್ನೊಳಗೊಂಡ 11,500 ರಷ್ಟು ಜನಸಂಖ್ಯೆ ಹೊಂದಿದೆ. 21 ಸದಸ್ಯ ಬಲದ ಗ್ರಾಮ ಪಂಚಾಯ್ತಿ ಇದಾಗಿದೆ.

ADVERTISEMENT

‘ದಾಸನಕೊಪ್ಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ಕೊರತೆ ಇದೆ. ಆವರಣಗೋಡೆಯೂ ಇಲ್ಲದೆ ಜಾಗ ದುರ್ಬಳಕೆಯಾಗುತ್ತಿದೆ. ಸಂತೊಳ್ಳಿ ಭಾಗದಲ್ಲಿ ರಸ್ತೆಗಳು ಹಾಳಾಗಿವೆ. ಗ್ರಾಮದ ಹಿಂದೂ ರುದ್ರಭೂಮಿಗೆ ರಸ್ತೆ ಇಲ್ಲದೆ ಜನರು ಪರದಾಡುತ್ತಿದ್ದಾರೆ’ ಎನ್ನುತ್ತಾರೆ ಗ್ರಾಮದ ಪ್ರಮುಖ ಯುವರಾಜ ಗೌಡರ್.

‘ಜಿಲ್ಲೆಯ ಗಡಿಭಾಗವಾಗಿರುವ ಸಂತೊಳ್ಳಿ, ವದ್ದಲ ಗ್ರಾಮಕ್ಕೆ ಸರಿಯಾದ ಬಸ್ ಸಂಪರ್ಕವಿಲ್ಲ. ಈ ಭಾಗದ ವಿದ್ಯಾರ್ಥಿಗಳು ಶಾಲೆ–ಕಾಲೇಜುಗಳಿಗೆ ತೆರಳಲು ತೊಂದರೆ ಪಡುತ್ತಿದ್ದಾರೆ. ಗ್ರಾಮದ ಸೌಕರ್ಯಗಳ ಕೊರತೆ ಕುರಿತು ಗಮನಸೆಳೆಯಬೇಕೆಂದರೂ ಗ್ರಾಮ ಸಭೆಗಳನ್ನು ಸಕಾಲಕ್ಕೆ ನಡೆಸುತ್ತಿಲ್ಲ. ಅಧಿಕಾರಿಗಳು ಹಾಜರಾಗುತ್ತಿಲ್ಲ’ ಎಂದು ದೂರಿದರು.

‘ವಿಸ್ತಾರವಾಗಿರುವ ಗ್ರಾಮ ಪಂಚಾಯ್ತಿಯನ್ನು ಇಬ್ಭಾಗಿಸುವ ಸಂಬಂಧ 2005ರಲ್ಲಿ ಸರ್ಕಾರ ಸಮಿತಿ ರಚಿಸಿತ್ತು. ಅಭಿವೃದ್ಧಿ ದೃಷ್ಟಿಯಿಂದ ಗ್ರಾಮ ಪಂಚಾಯ್ತಿಯನ್ನು ವಿಭಜಿಸುವುದು ಸೂಕ್ತವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ’ ಎಂದರು.

‘ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ. ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಅಗತ್ಯವಿರುವ ಕಡೆಗಳಲ್ಲಿ ಆದ್ಯತೆ ಮೇಲೆ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೀತಾ ಆಲೂರ.

‘ಜಲಜೀವನ್ ಮಿಷನ್ ಅಡಿ ₹3.5 ಕೋಟಿ ಅನುದಾನ ಮಂಜೂರಾಗಿದೆ. ನಾಲ್ಕು ಗ್ರಾಮಗಳ ವ್ಯಾಪ್ತಿಯಲ್ಲಿ ಪೈಪ್‍ಲೈನ್ ಸಂಪರ್ಕ ಪೂರ್ಣಗೊಂಡಿದೆ. ನಿರಂತರ ನೀರು ಒದಗಿಸಲು ಮಳಗಿಯ ಧರ್ಮಾ ಜಲಾಶಯದಿಂದ ನೀರು ಸಾಗಿಸಲು ವ್ಯವಸ್ಥೆ ಇನ್ನಷ್ಟೆ ಆಗಬೇಕಿದೆ’ ಎಂದು ಪಿಡಿಒ ಜಯಲಕ್ಷ್ಮೀ ತಿಳಿಸಿದರು.

ತಾತ್ಕಾಲಿಕ ಘಟಕ:

‘ಬದನಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಗೊಂಡಿಲ್ಲ. ದಾಸನಕೊಪ್ಪದಲ್ಲಿ ನಡೆಯುವ ಸಂತೆ ವೇಳೆ ಹೆಚ್ಚಿನ ಪ್ರಮಾನದಲ್ಲಿ ಕಸ ಸಂಗ್ರಹಗೊಳ್ಳುತ್ತಿದೆ. ಇವುಗಳ ವಿಲೇವಾರಿ ಸರಿಯಾಗುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಸತೀಶ ಕಲ್ಮಟ್ಲೇರ್.

‘ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಜಾಗ ಹುಡುಕಲಾಗುತ್ತಿದೆ. ತಾತ್ಕಾಲಿಕವಾಗಿ ಗ್ರಾಮ ಪಂಚಾಯ್ತಿ ಪಕ್ಕದ ಸಭಾಭವನ ಬಳಸಿಕೊಳ್ಳಲಾಗುತ್ತಿದೆ. ವಾರದ ಸಂತೆಯ ಕಸವನ್ನು ಸಂಗ್ರಹಿಸಿ ಗೊಬ್ಬರ ತಯಾರಿಕೆಗೆ ನೀಡಲಾಗುತ್ತಿದೆ. ಶೀಘ್ರವೇ ಮನೆ ಮನೆಗೆ ಕಸ ಸಂಗ್ರಹಿಸಲು ಡಬ್ಬಿ ನೀಡಲಾಗುವುದು’ ಎಂದು ಪಿಡಿಒ ಜಯಲಕ್ಷ್ಮೀ ಪ್ರತಿಕ್ರಿಯಿಸಿದರು.

-------------------

ವಿಸ್ತೀರ್ಣದಲ್ಲಿ ದೊಡ್ಡದಾಗಿರುವ ಕಾರಣ ಗ್ರಾಮ ಪಂಚಾಯ್ತಿ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ಕಾರ್ಮಿಕ ಸಚಿವರು ಗ್ರಾಮದ ಹಲವೆಡೆ ಅಭಿವೃದ್ಧಿಗೆ ಅನುದಾನ ಒದಗಿಸಿದ್ದಾರೆ.

ಗೀತಾ ಆಲೂರ

ಬದನಗೋಡ ಗ್ರಾಮ ಪಂಚಾಯ್ತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.