ADVERTISEMENT

ಕೊರೊನಾ: ಬಾಳೆಕಾಯಿ ದರ ಕುಸಿತ

ಭಯವನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಿಗಳು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2020, 13:59 IST
Last Updated 15 ಮಾರ್ಚ್ 2020, 13:59 IST
ಬಾಳೆಗೊನೆ ವಾಹನಕ್ಕೆ ತುಂಬಿಸಿದ ವ್ಯಾಪಾರಸ್ಥರು
ಬಾಳೆಗೊನೆ ವಾಹನಕ್ಕೆ ತುಂಬಿಸಿದ ವ್ಯಾಪಾರಸ್ಥರು   

ಶಿರಸಿ: ಜನರಲ್ಲಿ ಮೂಡಿರುವ ಕೊರೊನಾ ವೈರಸ್ ಸೋಂಕಿನ ಭಯವನ್ನೇ ಬಂಡವಾಳ ಮಾಡಿಕೊಂಡಿರುವ ಬಾಳೆಕಾಯಿ ವ್ಯಾಪಾರಿಗಳು, ಕೃತಕ ಸಮಸ್ಯೆ ಸೃಷ್ಟಿಸಿ, ಬಾಳೆಕಾಯಿ ದರವನ್ನು ಪಾತಾಳಕ್ಕೆ ಇಳಿಸಿದ್ದಾರೆ.

ತಾಲ್ಲೂಕಿನ ದಾಸನಕೊಪ್ಪದಲ್ಲಿ ಭಾನುವಾರ ನಡೆದ ಬಾಳೆಕಾಯಿ ಸಂತೆ, ಬೆಳೆಗಾರರಿಗೆ ತೀವ್ರ ನಷ್ಟವನ್ನುಂಟು ಮಾಡಿತು. ಬೆಳಗಿನ ಜಾವ 5 ಗಂಟೆಗೆ ಪ್ರಾರಂಭವಾಗುವ ಸಂತೆಯಲ್ಲಿ ಸ್ಥಳೀಯ, ಹೊರ ಊರುಗಳ 50ಕ್ಕೂ ಹೆಚ್ಚು ಖರೀದಿದಾರರು ಭಾಗವಹಿಸುತ್ತಾರೆ. 500ಕ್ಕೂ ಹೆಚ್ಚು ರೈತರು ಸೇರುತ್ತಾರೆ.

‘ಬಾಳೆಕಾಯಿ ಕೆ.ಜಿ.ಯೊಂದಕ್ಕೆ ₹ 15ರಿಂದ 20 ದರದಲ್ಲಿ ಮಾರಾಟವಾಗುತ್ತಿತ್ತು. ಆದರೆ, ಭಾನುವಾರದ ಸಂತೆಯಲ್ಲಿ ವ್ಯಾಪಾರಸ್ಥರು ತೂಕದ ಲೆಕ್ಕವೂ ಇಲ್ಲದೇ, ಗೊನೆ ನೋಡಿ ಅಂದಾಜಿಗೆ ದರ ಹೇಳಿ ಖರೀದಿಸಿದರು. ಕೆ.ಜಿ.ಗೆ ಏಳೆಂಟು ರೂಪಾಯಿ ಕೂಡ ಸಿಗಲಿಲ್ಲ. ಅಧಿಕೃತ ಸಂತೆ ಇಲ್ಲದ ಕಾರಣ ಬೆಳೆಗಾರರು ಕಡಿಮೆ ಸಂಖ್ಯೆಯಲ್ಲಿದ್ದರು. ರಸ್ತೆ ಮಧ್ಯ ನಿಂತು, ಹೇಳಿದ ದರಕ್ಕೆ ಖರೀದಿಸಿ, ವಾಹನಕ್ಕೆ ತುಂಬಿಕೊಂಡು ಹೋದರು’ ಎನ್ನುತ್ತಾರೆ ಬೆಳೆಗಾರ ಆನಂದ ಗೌಡ.

ADVERTISEMENT

ದಾಸನಕೊಪ್ಪ ಸುತ್ತಮುತ್ತ ಸಾವಿರಾರು ಎಕರೆಯಲ್ಲಿ ಬಾಳೆ ಬೆಳೆಯುತ್ತಾರೆ. ವಾರದ ಸಂತೆಯ ದಿನ 1000ದಷ್ಟು ಕ್ವಿಂಟಲ್ ಬಾಳೆ ಮಾರಾಟಕ್ಕೆ ಬರುತ್ತದೆ. ಕೊರೊನಾ ಭಯದಿಂದ ಈ ವಾರ 500 ಕ್ವಿಂಟಲ್‌ನಷ್ಟು ಉತ್ಪನ್ನ ಮಾತ್ರ ಮಾರಾಟಕ್ಕೆ ಬಂದಿತ್ತು. ತಂದಿರುವ ಉತ್ಪನ್ನಕ್ಕೂ ದರ ಸಿಗದೇ, ಬೆಳೆಗಾರರು ನಷ್ಟ ಅನುಭವಿಸಿದ್ದಾರೆ ಎಂದು ಅವರು ಹೇಳಿದರು.

ಸಂತೆ ರದ್ದು:

ಜನದಟ್ಟಣಿ ನಿರ್ಬಂಧಿಸುವ ಕಾರಣ ವಾರದ ಸಂತೆಯನ್ನು ಬಂದ್ ಮಾಡಲಾಗಿತ್ತು. ಜನರಿಂದ ಗಿಜಿಗುಡುತ್ತಿದ್ದ ಸಂತೆ ಮಾರುಕಟ್ಟೆ ಬಿಕೋ ಎನ್ನುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.