
ಮುಂಡಗೋಡ: ಜೋಡಿ ಕುಡಿ ಬಾಳೆ ಎಲೆಯ ಮೇಲೆ ಮಕ್ಕಳನ್ನು ಮಲಗಿಸಿ, ಕ್ಷಣ ಕಾಲ ನೀರಿನಲ್ಲಿ ಮುಳುಗಿಸಿ, ಮೇಲಕ್ಕೆತ್ತುವ ಪದ್ಧತಿ ನಡೆದುಕೊಂಡು ಬಂದಿರುವ, ತಾಲ್ಲೂಕಿನ ಸಾಲಗಾಂವ ಗ್ರಾಮದ ಬಾಣಂತಿದೇವಿ ಜಾತ್ರೆ ಜ.14ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಹತ್ತಾರು ಹಳ್ಳಿಗರ ಆರಾಧ್ಯ ದೇವಿ, ಭಕ್ತರ ಬೇಡಿಕೆಗಳನ್ನು ಈಡೇರಿಸುವ ಶಕ್ತಿದೇವತೆ ಎಂತಲೂ ಕರೆಯುತ್ತಾರೆ.
ಜ.14ರಂದು ಬೆಳಿಗ್ಗೆ 5ಗಂಟೆಯಿಂದ ಪ್ರಥಮ ಪೂಜೆ, ಅಭಿಷೇಕ ನಂತರ, ಪ್ರಣಮ ಪಂಚಾಕ್ಷರಿ ಮಂತ್ರ ಘೋಷದೊಂದಿಗೆ ಸಪ್ತಾಹ ಪ್ರಾರಂಭ. ಜ.15ರಂದು ಬೆಳಿಗ್ಗೆ ಪ್ರಣಮ ಪಂಚಾಕ್ಷರಿ ಸಪ್ತಾಹ ಮಂಗಲಗೊಳ್ಳುವುದು. ಸಂಜೆ 4ಗಂಟೆಯಿಂದ ದೇವಿಯ ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವ ಜರುಗಲಿದೆ. ಜ್ಯೋತಿ ಪೂಜೆಯೊಂದಿಗೆ ಕೆರೆಯಲ್ಲಿ ಬಿಡಲಾಗುತ್ತದೆ. ಹರಕೆ ಈಡೇರಿದ ತಾಯಂದಿಯರು ಮಕ್ಕಳನ್ನು ಕುಡಿಬಾಳೆ ಎಲೆಯ ಮೇಲಿಟ್ಟು ನೀರಿನಲ್ಲಿ ಕ್ಷಣ ಮುಳುಗಿಸುವ ದೃಶ್ಯವನ್ನು ನೂರಾರು ಭಕ್ತರು ಕೆರೆಯ ಪಡಭಾಗದಲ್ಲಿ ನಿಂತು ಕಣ್ಣುಂಬಿಕೊಳ್ಳುತ್ತಾರೆ.
ತಾಲ್ಲೂಕಿನಲ್ಲಿಯೇ ವರ್ಷದಾರಂಭದ ಮೊದಲ ಜಾತ್ರೆ ಎಂಬ ಹೆಗ್ಗಳಿಕೆಯ ಜೊತೆಗೆ, ಸಂತಾನ ಭಾಗ್ಯ ಕರುಣಿಸುವ ತಾಯಿ ಎಂದೇ ಭಕ್ತರಿಂದ ಕರೆಯಿಸಿಕೊಳ್ಳುವ ದೇವಿ ಜಾತ್ರೆ ಇದಾಗಿದೆ. ಸಾಲಗಾಂವ, ತುಂಬರಗಿ, ಚಿಗಳ್ಳಿ, ಅಜ್ಜಳ್ಳಿ, ಕಾವಲಕೊಪ್ಪ, ಹಿರೇಹಳ್ಳಿ, ಮುಂಡಗೋಡ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ಹಿನ್ನೆಲೆ: 'ದೇವಸ್ಥಾನಕ್ಕೆ ತಾಗಿಯೇ ಇರುವ ಕೆರೆಯನ್ನು ಬಾಣಂತಿದೇವಿ ಕೆರೆ ಎಂದು ಕರೆಯುತ್ತಾರೆ. ಇದನ್ನು ನಿರ್ಮಿಸುವಾಗ, ಎಷ್ಟೇ ಆಳವಾಗಿ ಅಗೆದರೂ ನೀರು ಬರದಿದ್ದಾಗ ಗ್ರಾಮಸ್ಥರು ಚರ್ಚೆಯಲ್ಲಿ ತೊಡಗಿದ್ದರಂತೆ. ಆಗ ತವರುಮನೆಗೆ ಬಾಣಂತನಕ್ಕೆ ಬಂದಿದ್ದ, ಊರ ಮನೆಮಗಳು ದಡದಲ್ಲಿ ನಿಂತು ನೋಡುತ್ತಿರುವಾಗ, ಒಮ್ಮೆಲೆ ಕೆರೆಯಲ್ಲಿ ನೀರು ಉಕ್ಕಿ ಬಾಣಂತಿಯನ್ನು ಬಲಿ ತೆಗೆದುಕೊಂಡಿತು. ಈ ಹಿನ್ನೆಲೆಯಲ್ಲಿ ಬಾಣಂತಿದೇವಿ ಕೆರೆ ಎಂಬ ಹೆಸರು ಬಂದಿದೆ' ಎನ್ನುತ್ತಾರೆ ಸಾಲಗಾಂವ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟಪ್ಪ ಗುಲ್ಯಾನವರ.
'ಬಾಣಂತಿದೇವಿಗೆ ಹರಕೆ ಹೊತ್ತರೆ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತವೆ ಎಂಬ ನಂಬಿಕೆಯಿದೆ. ಈಗಲೂ ಸಹ ಹರಕೆ ಈಡೇರಿದ ಹಾಗೂ ಪ್ರಾರ್ಥಿಸಿದ ಭಕ್ತರು ತೆಪ್ಪೋತ್ಸವದಂದು ಮಕ್ಕಳನ್ನು ತಣ್ಣೀರಲ್ಲಿ ಮೀಯಿಸುತ್ತಾರೆ. ಹಿಂದೆ ತಿಂಗಳ ಕಾಲ ಜಾನುವಾರುಗಳ ಜಾತ್ರೆ ಸಹ ನಡೆಯುತ್ತಿತ್ತು. ಅದರಿಂದ ಜಾತ್ರೆಯ ಸಡಗರ ಇಮ್ಮಡಿಯಾಗುತ್ತಿತ್ತು. ಜಾನುವಾರು ಸಾಕುವವರ, ಕೊಳ್ಳುವರ ಸಂಖ್ಯೆ ಕಡಿಮೆಯಾಗಿರುವುದರಿಂದ ಜಾನುವಾರು ಜಾತ್ರೆ ಮೊದಲಿನಂತೆ ನಡೆಯುವುದಿಲ್ಲ' ಎಂದು ಗ್ರಾಮಸ್ಥರೂ ಆಗಿರುವ ವಕೀಲ ಗುಡ್ಡಪ್ಪ ಕಾತೂರ ಹೇಳಿದರು.
ಕಾರ್ಯಕ್ರಮಗಳು: ಜ.15ರಂದು ರಾತ್ರಿ 8ಗಂಟೆಗೆ ರವಿ ಮೆಲೋಡಿಯಸ್ ಅವರಿಂದ ರಸಮಂಜರಿ, ಜ.16ರಂದು ರಾತ್ರಿ ನವದೃಷ್ಠಿ ಮೆಲೋಡಿಯಸ್ ಅವರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಯುವಮುಖಂಡ ಸಂತೋಷ ತಳವಾರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.