ಕಾರವಾರ: ತಾಲ್ಲೂಕಿನಲ್ಲಿ ವಾರ್ಷಿಕವಾಗಿ ನಡೆಯುವ ಪ್ರಸಿದ್ಧ ಆಚರಣೆಗಳಲ್ಲಿ ಒಂದೆನಿಸಿದ ಬಾಡ ಗ್ರಾಮದ ಬಂಡಿ ಹಬ್ಬವು ಶುಕ್ರವಾರ ರಾತ್ರಿ ಅದ್ದೂರಿಯಾಗಿ ನಡೆಯಿತು.
ಇಲ್ಲಿನ ಬಾಂಡಿಶಿಟ್ಟಾದಲ್ಲಿನ ರಾಟೆ ಕಟ್ಟೆಗೆ ಕಳಸ ಹೊತ್ತು ತರುತ್ತಿದ್ದಂತೆ ನೆರೆದಿದ್ದ ನೂರಾರು ಜನರು ಶೃದ್ಧಾಭಕ್ತಿಯಿಂದ ಉದ್ಘೋಷ ಮೊಳಗಿಸಿದರು.
ರಾಟೆ ಕಟ್ಟೆಯಲ್ಲಿ ಕಳಸ ಹೊತ್ತ ಗುನಗರು ಕುಳಿತ ಬಳಿಕ ರಾಟೆ ತಿರುಗಿಸುವುದನ್ನು ಕಣ್ತುಂಬಿಕೊಳ್ಳಲು ಜನರು ಮುಗಿಬಿದ್ದಿದ್ದರು. ಕಳಸಕ್ಕೆ ಪೂಜೆ ಸಲ್ಲಿಸಿ ಕೃತಾರ್ಥರಾದರು.
ಬಂಡಿ ಹಬ್ಬದಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದರೆ ಸಂಕಷ್ಟಗಳು ಪರಿಹಾರ ಕಾಣುತ್ತವೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ನಗರ ವ್ಯಾಪ್ತಿಯ 18 ಗ್ರಾಮಗಳ ಜನರು ನೂರಾರು ವರ್ಷಗಳಿಂದ ಬಂಡಿ ಹಬ್ಬ ಆಚರಿಸಿಕೊಂಡು ಬಂದಿದ್ದಾರೆ. ಪೂರ್ವಜರ ಯಶೋಗಾಥೆಯನ್ನು ನೆನಪಿಸುವ ಜತೆಗೆ ಜನಪದ ಶೈಲಿಯ ಜೀವನಗಾಥೆಯನ್ನು ಈ ಹಬ್ಬದ ಆಚರಣೆಗಳು ಸಾರಿ ಹೇಳುತ್ತವೆ.
ಏ.30 ರಂದು ಅಕ್ಷಯ ತೃತೀಯ ಹಬ್ಬದ ದಿನ ಕಳಸ ದೇವಸ್ಥಾನದಿಂದ ಕಳಸ ಹೊರ ತೆಗೆಯುವ ಮೂಲಕ ಹಬ್ಬದ ಆಚರಣೆಗೆ ಚಾಲನೆ ನೀಡಲಾಗಿತ್ತು. ಎಂಟು ದಿನಗಳವರೆಗೂ ಕಳಸ ಹೊತ್ತ ಗುನಗರು ಗ್ರಾಮದ ವ್ಯಾಪ್ತಿಯ ಎಲ್ಲ 18 ಪರಿವಾರ ದೇವಸ್ಥಾನಗಳಿಗೂ ತೆರಳಿದ್ದರು. ಅಲ್ಲಿ ಭಕ್ತರು ಕಳಸಕ್ಕೆ ಪೂಜೆ ಸಲ್ಲಿಸಿದ್ದರು.
ಗ್ರಾಮಗಳ ಸಂಚಾರ ಮುಕ್ತಾಯಗೊಂಡ ಬಳಿಕ ಬುಧವಾರ ರಾತ್ರಿ ಕಳಸವನ್ನು ಬಾಂಡಿಶಿಟ್ಟಾದಲ್ಲಿರುವ ರಾಟೆ ಕಟ್ಟೆಗೆ ಮೆರವಣಿಗೆ ಮೂಲಕ ಕರೆತರಲಾಗಿತ್ತು.
ಪುನಃ ಕಳಸವನ್ನು ಶನಿವಾರ ಕಳಸ ದೇವಸ್ಥಾನಕ್ಕೆ ತಂದು ದೇವಿಗೆ ಉಡಿ ಹಾಗೂ ಗಿಂಡಿ ತುಂಬುವ ಮೂಲಕ ಬಂಡಿ ಹಬ್ಬಕ್ಕೆ ತೆರೆಬಿದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.