ADVERTISEMENT

ಮುಂಡಗೋಡ | ಸೀಮೋಲ್ಲಂಘನ: ಬನ್ನಿ ವಿನಿಮಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 4:31 IST
Last Updated 3 ಅಕ್ಟೋಬರ್ 2025, 4:31 IST
ಮುಂಡಗೋಡ ಪಟ್ಟಣದ ಬನ್ನಿಕಟ್ಟೆ ಸನಿಹದ ಮೂಲಗಣಪತಿ ದೇವಸ್ಥಾನದಲ್ಲಿ ಅರ್ಚಕ ರಾಮಚಂದ್ರ ಜೋಶಿ ನೇತೃತ್ವದಲ್ಲಿ ಸೀಮೋಲ್ಲಂಘನ ಕಾರ್ಯಕ್ರಮ ಜರುಗಿತು
ಮುಂಡಗೋಡ ಪಟ್ಟಣದ ಬನ್ನಿಕಟ್ಟೆ ಸನಿಹದ ಮೂಲಗಣಪತಿ ದೇವಸ್ಥಾನದಲ್ಲಿ ಅರ್ಚಕ ರಾಮಚಂದ್ರ ಜೋಶಿ ನೇತೃತ್ವದಲ್ಲಿ ಸೀಮೋಲ್ಲಂಘನ ಕಾರ್ಯಕ್ರಮ ಜರುಗಿತು   

ಮುಂಡಗೋಡ: ವಿಜಯದಶಮಿ ಹಬ್ಬವನ್ನು ತಾಲ್ಲೂಕಿನಲ್ಲಿ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣ ಹಾಗೂ ಗ್ರಾಮೀಣ ಭಾಗದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಂಜೆ ವೇಳೆಗೆ ಪಲ್ಲಕ್ಕಿ ಮೆರವಣಿಗೆ ಮೂಲಕ ಸೀಮೋಲ್ಲಂಘನ ಕಾರ್ಯಕ್ರಮ ನಡೆಸಲಾಯಿತು. ಪತ್ರಿಕಾ ಪೂಜೆ, ಶಮಿ ಪೂಜೆಯ ನಂತರ, ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು, ಶುಭಾಶಯ ಕೋರಿದರು.

ಪಟ್ಟಣದ ಹಳೂರಿನ ಆಂಜನೇಯ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ಜಿನ ಮಂದಿರ ಸೇರಿದಂತೆ ವಿವಿಧ ದೇವಸ್ಥಾನಗಳಿಂದ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು.

ADVERTISEMENT

ಇಲ್ಲಿನ ಬನ್ನಿಕಟ್ಟೆಯ ಬನ್ನಿಮಹಾಂಕಾಳಿ ದೇವರಿಗೆ ಪೂಜೆ ಸಲ್ಲಿಸಿ, ಪಲ್ಲಕ್ಕಿ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಜಿನ ಮಂದಿರದಿಂದ ಹೊರಟ ಪಲ್ಲಕ್ಕಿ ಮೆರವಣಿಗೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಬನ್ನಿಕಟ್ಟೆ ಸನಿಹದ ಮೂಲಗಣಪತಿ ದೇವಸ್ಥಾನದಲ್ಲಿ ಅರ್ಚಕ ರಾಮಚಂದ್ರ ಜೋಶಿ ನೇತೃತ್ವದಲ್ಲಿ ಪತ್ರಿಕಾ ಪೂಜನ, ಶಮಿ ಪೂಜನ ನೆರವೇರಿತು. ನಂತರ ದಕ್ಷಿಣ ದಿಕ್ಕು ಹೊರತುಪಡಿಸಿ, ಇನ್ನುಳಿದ ಮೂರು ದಿಕ್ಕುಗಳಲ್ಲಿ ಬಾಣ ಬಿಡುವ ಮೂಲಕ, ಸೀಮೋಲ್ಲಂಘನ ಮಾಡಲಾಯಿತು. 

ಬನ್ನಿ ಗಿಡಕ್ಕೆ ಪೂಜೆ: ನವರಾತ್ರಿಯ ಅಂಗವಾಗಿ ಪ್ರತಿದಿನ ನಸುಕಿನಲ್ಲಿ ಮಹಿಳೆಯರು ಬನ್ನಿ ಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದರು. ಗುರುವಾರ ನಸುಕಿನಲ್ಲಿಯೇ ತಂಡೋಪತಂಡವಾಗಿ ಮಹಿಳೆಯರು ಬನ್ನಿಗಿಡಕ್ಕೆ ಹಸಿರು ಬಟ್ಟೆ ಅರ್ಪಿಸಿ, ಹಣತೆ ಬೆಳಗಿಸಿ, ನವರಾತ್ರಿ ಕೊನೆಯ ದಿನದ ಪೂಜೆ ಸಲ್ಲಿಸಿದರು.

ಮಹಾಬಲೇಶ್ವರ ಸಿಮೋಲ್ಲಂಘನ: ನವರಾತ್ರಿ ಸಂಪನ್ನ

ಗೋಕರ್ಣ: ಪುಣ್ಯ ಕ್ಷೇತ್ರ ಗೋಕರ್ಣ ದಲ್ಲಿ 9 ದಿನಗಳ ನವರಾತ್ರಿ ಉತ್ಸವ ವಿಜೃಂಭಣೆಯಿಂದ ಸಾಗಿ ವಿಜಯದಶಮಿಯ ದಿನವಾದ ಗುರುವಾರ ಕ್ಷೇತ್ರನಾಥ ಮಹಾಬಲೇಶ್ವರ ದೇವರು ಊರ ಗಡಿದಾಟಿ ಸಿಮೋಲಂಘನ ಮಾಡುವುದರೊಂದಿಗೆ ನವರಾತ್ರಿ ಹಬ್ಬ ಮುಕ್ತಾಯವಾಯಿತು.

10 ದಿನಗಳ ಕಾಲ ಭದ್ರಕಾಳಿ, ಶೃಂಗೇರಿ ಶಾರದಾಂಬ, ದುರ್ಗಾಪರಮೇಶ್ವರಿ, ಪಾರ್ವತಿ ಹಾಗೂ ಸ್ಮಶಾನಕಾಳಿಯಲ್ಲಿ ವಿವಿಧ ರೀತಿಯ ಅಲಂಕಾರ ಮಾಡಿ, ಬೇರೆ ಬೇರೆ ವಾಹನದೊಂದಿಗೆ ದೇವಿಯನ್ನು ವಿವಿಧ ಭಂಗಿಯಲ್ಲಿ ಶೃಂಗರಿಸಲಾಗಿತ್ತು. ಭದ್ರಕಾಳಿಯಲ್ಲಂತೂ ಪ್ರತಿ ದಿವಸ ದೇವಿಯ ಅಲಂಕಾರ ಭಕ್ತರ ಮನಸೂರೆಗೊಂಡಿತು.

ಪ್ರತಿ ದಿನ ಸಂಜೆ ಯಕ್ಷಗಾನ ತಾಳಮದ್ದಳೆ, ಭರತನಾಟ್ಯ, ಶಾಸ್ತ್ರೀಯ ಸಂಗೀತ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿದ್ಯುತ್ ದೀಪದಿಂದಲೂ ಎಲ್ಲಾ ದೇವಸ್ಥಾನವನ್ನು ಶೃಂಗರಿಸಲಾಗಿತ್ತು. ದುರ್ಗಾ ಪರಮೇಶ್ವರಿಯ ಹೂವಿನ ಅಲಂಕಾರ ಎಲ್ಲರ ಮನಸೂರೆಗೊಂಡಿತು.

ದಶಮಿಯ ದಿವಸ ಮಹಾಬಲೇಶ್ವರನ ಉತ್ಸವಮೂರ್ತಿ ಭದ್ರಕಾಳಿಗೆ ಬಂದು, ಅಲ್ಲಿ ಅಷ್ಟಾವಧಾನ ಸೇವೆ ನಡೆಸಿ ಊರ ಗಡಿಯನ್ನು ದಾಟಿ ಮರಳಿ ಮೂಲ ಜಾಗಕ್ಕೆ ಬಂದಿತು. ದಾರಿಯುದ್ದಕ್ಕೂ ಭಕ್ತರಿಗೆ ಬನ್ನಿಯನ್ನು (ಶಮಿ ಪತ್ರೆ) ಪ್ರಸಾದ ರೂಪದಲ್ಲಿ ನೀಡಲಾಯಿತು. ವಿಜಯ ದಶಮಿಯ ದಿನ ನಾಡಿನ ಒಳಿತಿಗಾಗಿ ಎಲ್ಲ ದೇವರಲ್ಲಿಯೂ ಪ್ರಾರ್ಥಿಸಲಾಯಿತು.

ಭದ್ರಕಾಳಿಯಲ್ಲಿ ಮತ್ತು ಪಾರ್ವತಿ ಯಲ್ಲಿ ಚಂಡಿಕಾ ಹವನ ನಡೆಯಿತು. ಸ್ಮಶಾನಕಾಳಿ ದೇವರಿಗೆ ನವಮಿಯ ದಿನ ಹರಕೆ, ಮುಡಿ ಒಪ್ಪಿಸಲಾಯಿತು. ಸಾವಿರಾರು ಜನ ದೇವರ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.