ಶಿರಸಿ: ಪರಿಸರ ಸೂಕ್ಷ ಪ್ರದೇಶವಾದ ಉತ್ತರ ಕನ್ನಡ ಜಿಲ್ಲೆ ಮತ್ತೊಂದು ನದಿ ಜೋಡಣೆ ಯೋಜನೆಯ ಆಘಾತಕ್ಕೆ ಸಿಲುಕುವ ಆತಂಕ ಎದುರಾಗಿದೆ. ಇಲ್ಲಿನ ಬೇಡ್ತಿ ನದಿಯನ್ನು ಹಾವೇರಿ ಜಿಲ್ಲೆಯಲ್ಲಿ ವರದಾ ನದಿಗೆ ಆ ಮೂಲಕ ತುಂಗಭದ್ರಾ ನದಿಗೆ ಜೋಡಿಸುವ ಯೋಜನೆ ಮುನ್ನೆಲೆಗೆ ಬಂದಿದ್ದು, ಪರಿಸರ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಬೇಡ್ತಿ ಮತ್ತು ವರದಾ ನದಿಗಳಲ್ಲಿ ಹರಿದು ಸಮುದ್ರ ಸೇರುವ 18 ಟಿ.ಎಂ.ಸಿ. ಅಡಿಗೂ ಹೆಚ್ಚಿನ ನೀರನ್ನು ಹಾವೇರಿ, ಗದಗ, ಕೊಪ್ಪಳ, ಸಿಂಧನೂರು, ರಾಯಚೂರು ಪ್ರದೇಶಗಳಿಗೆ ಕೊಂಡೊಯ್ಯುವುದು ಯೋಜನೆಯ ಉದ್ದೇಶವಾಗಿದೆ. ಇದಕ್ಕಾಗಿ ಬೇಡ್ತಿ–ವರದಾ ನದಿಯನ್ನು ನೇರವಾಗಿ ಜೋಡಿಸುವ ಹಾಗೂ ಬೇಡ್ತಿ–ಧರ್ಮಾ–ವರದಾ ಮೂಲಕ ನದಿ ಜೋಡಣೆ ಮಾಡಲು ಯೋಜನೆ ರೂಪಿಸಲಾಗಿದೆ. ಯೋಜನೆ ಅನುಷ್ಠಾನವಾದರೆ ಈಗಾಗಲೇ ಸಾಕಷ್ಟು ಪರಿಸರನಾಶಿ ಯೋಜನೆಗಳಿಂದ ನಲುಗುತ್ತಿರುವ ಉತ್ತರ ಕನ್ನಡ ಜಿಲ್ಲೆಗೆ ಮತ್ತಷ್ಟು ಧಕ್ಕೆ ನೀಡುವ ಸಾಧ್ಯತೆಯಿದೆ ಎಂಬುದು ಪರಿಸರ ಕಾರ್ಯಕರ್ತರ ಅಭಿಪ್ರಾಯ.
1995ರಲ್ಲಿ ಯೋಜನೆ ಜಾರಿಗೊಂಡಿತ್ತಾದರೂ ಹಲವು ವಿರೋಧಗಳ ಕಾರಣಕ್ಕೆ ಸ್ಥಗಿತವಾಗಿತ್ತು. ನಂತರ 2003ರಲ್ಲಿ ಯೋಜನೆ ಕುರಿತು ನ್ಯಾಷನಲ್ ವಾಟರ್ ಡೆವಲಪ್ಮೆಂಟ್ ಬೋರ್ಡ್ (ಎನ್‍ಡಬ್ಲ್ಯುಡಿಎ) ಅಧ್ಯಯನ ನಡೆಸಲು ಮುಂದಾದಾಗ ಸ್ಥಳಿಕರ ವಿರೋಧದಿಂದ ಕೈಬಿಟ್ಟಿತ್ತು. 2005ರಲ್ಲಿ ಎನ್‍ಡಬ್ಲ್ಯುಡಿಎ ನದಿ ಜೋಡಣಾ ಸಾಧ್ಯತಾ ವರದಿಯನ್ನು ಬಿಡುಗಡೆ ಮಾಡಿತ್ತು. ನಂತರದಲ್ಲಿ ಹಲವು ಬಾರಿ ಯೋಜನೆ ಅನುಷ್ಠಾನದ ತಯಾರಿ ನಡೆದಿತ್ತಾದರೂ ಜನರ ನಿರಂತರ ವಿರೋಧ ವ್ಯಕ್ತವಾದ್ದರಿಂದ ವಿಷಯ ತಣ್ಣಗಾಗಿತ್ತು.
ಪ್ರಸ್ತುತ ಉತ್ತರ ಕರ್ನಾಟಕ ಜನನಾಯಕರು ಯೋಜನೆ ಅನುಷ್ಠಾನಕ್ಕೆ ಉತ್ಸಾಹ ತೋರುತ್ತಿದ್ದಾರೆ. ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಇತ್ತೀಚೆಗೆ ಯೋಜನೆಯ ಹೊಸ ಡಿಪಿಆರ್ ಸಿದ್ಧಪಡಿಸಿದ್ದೇವೆ ಎಂದು ಹೇಳಿದ್ದರು. ನಂತರ ಸಂಸದ ಬಸವರಾಜ ಬೊಮ್ಮಾಯಿ ಅವರು ತಾನು ಸಿಎಂ ಇರುವಾಗಲೇ ಡಿಪಿಆರ್ ಸಿದ್ಧಪಡಿಸಿ ಕಳುಹಿಸಲಾಗಿತ್ತು. ಪ್ರಸ್ತುತ ಎನ್‍ಡಬ್ಲ್ಯುಡಿಎ ಬೆಂಗಳೂರು ಕಚೇರಿಯಿಂದ ದೆಹಲಿ ಕಚೇರಿಗೆ ವರದಿ ಕಳುಹಿಸಲಾಗಿದೆ. ಎನ್‍ಡಬ್ಲ್ಯುಡಿಎ ಸಲಹೆಯಂತೆ ಹೊಸ ಡಿಪಿಆರ್ ಸಿದ್ಧಪಡಿಸಲಾಗುವುದು. ಅಲ್ಲದೇ ಈ ಕುರಿತು ಆ. 10ರಿಂದ ಜನಜಾಗೃತಿ ಅಭಿಯಾನ ನಡೆಸುವುದಾಗಿಯೂ ಹೇಳಿದ್ದಾರೆ. ಇದು ಉತ್ತರ ಕನ್ನಡದ ಜನರ ಆಘಾತಕ್ಕೆ ಕಾರಣವಾಗಿದೆ.
‘ಅರಣ್ಯದಲ್ಲಿ ಜಾರಿಯಾಗುವ ಯೋಜನೆಯಿಂದ ಅರಣ್ಯ ನಾಶವಾಗುವುದಿಲ್ಲ ಎಂಬುದು ಹಾಸ್ಯಾಸ್ಪದ ಸಂಗತಿ. ನದಿಗಳು ಕೇವಲ ನೀರಿಗಷ್ಟೇ ಸೀಮಿತವಲ್ಲ. ಅವು ಜೀವ ಸಂಕುಲದ ನರಗಳಿದ್ದಂತೆ. ಅವುಗಳ ಹರಿವು ಬದಲಾವಣೆಯಿಂದ ಪರಿಸರದ ಮೇಲೆ ಬಹುದೊಡ್ಡ ಪರಿಣಾಮ ನಿಶ್ಚಿತ. ಈ ಕುರಿತು ಜನಾಂದೋಲನ, ಕಾನೂನು ಹೋರಾಟ ಅತಿ ಅಗತ್ಯ’ ಎಂಬುದು ಪರಿಸರ ತಜ್ಞರ ಪ್ರತಿಪಾದನೆ.
‘ಜಿಲ್ಲೆಯ ಕರಾವಳಿ ತೀರದಲ್ಲಿ ಬೇಸಿಗೆಯಲ್ಲಿ ಬಾವಿ, ನದಿ, ಕಾಲುವೆಗಳಲ್ಲಿ ಸಮುದ್ರದ ನೀರು ಸೇರಿಕೊಳ್ಳುತ್ತದೆ. ಇದರಿಂದ ಕುಡಿಯಲು ನೀರಿನ ಕೊರತೆಯಾಗುತ್ತದೆ. ಯಲ್ಲಾಪುರಕ್ಕೆ ಬೇಡ್ತಿ ಹೊಳೆಯಿಂದ ಕುಡಿಯುವ ನೀರು ಪೂರೈಸುವ ಸುಮಾರು ₹23 ಕೋಟಿ ವೆಚ್ಚದ ಕಾಮಗಾರಿ ದಶಕದ ಹಿಂದೆ ಮಾಡಲಾಗಿತ್ತು. ಆದರೆ, ಅದು ವಿಫಲವಾಯಿತು. ಮಳೆಗಾಲದಲ್ಲಿ ಪ್ರವಾಹ ತರುವ ಬೇಡ್ತಿ, ಬೇಸಿಗೆಯಲ್ಲಿ ಸಂಪೂರ್ಣವಾಗಿ ಸೊರಗುತ್ತದೆ. ನದಿ ತಟದ ಹತ್ತಾರು ಗ್ರಾಮಗಳು ಮಾರ್ಚ್ ಕೊನೆಯ ನಂತರ ಹನಿ ನೀರಿಗೂ ಪರದಾಡುವಂತಾಗುತ್ತದೆ. ಅಲ್ಲದೇ, ಜಿಲ್ಲೆಯಲ್ಲಿ ಯಾವುದೇ ನೀರಾವರಿ ಯೋಜನೆಗಳಿಲ್ಲ. ನದಿಗಳಲ್ಲಿ ಹರಿಯುವ ನೀರನ್ನೇ ಪಂಪ್‌ಸೆಟ್ ಮೂಲಕ ಜಮೀನಿಗೆ ಹಾಯಿಸಿ ಕೃಷಿ ಮಾಡುತ್ತಾರೆ. ಇಂಥ ಬೃಹತ್ ಯೋಜನೆ ಜಾರಿಯಾಗಿ ನೀರಿನ ಕೊರತೆ ಉಂಟಾದರೆ ಈ ಭಾಗದ ಜನರೆಲ್ಲಿಗೆ ಹೋಗಬೇಕು’ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಪ್ರವಾಹ ನೀರು ಸಂಗ್ರಹಕ್ಕೆ ಯೋಜನೆ ರೂಪಿಸಿ
ಮಳೆಗಾಲದಲ್ಲಿ ಪ್ರವಾಹ ಸೃಷ್ಟಿಸುವ ವರದಾ ನದಿ ನೀರಿಗೆ ಸೂಕ್ತ ಯೋಜನೆ ರೂಪಿಸಿ ಆ ನೀರನ್ನು ಹಾವೇರಿ ಜಿಲ್ಲೆಯ ಯಾವುದಾದರೂ ಬ್ಯಾರೇಜ್‍ಗಳಲ್ಲಿ ಸಂಗ್ರಹಿಸಬೇಕು. ಅದರ ಬದಲು ಅವೈಜ್ಞಾನಿಕ ಸುಸ್ಥಿರವಲ್ಲದ ಹಾಗೂ ಅಗಾಧ ಆರ್ಥಿಕ ನಷ್ಟಕ್ಕೆ ಕಾರಣವಾಗುವ ಯೋಜನೆ ಕೈಗೆತ್ತಿಕೊಳ್ಳುವುದರ ಹಿಂದೆ ರಾಜಕೀಯ ಆರ್ಥಿಕ ದುರುದ್ದೇಶ ಇರುವಂತೆ ಕಾಣುತ್ತದೆ ಎಂಬುದು ಜನರ ಅಭಿಪ್ರಾಯವಾಗಿದೆ.
ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯು ತಾಂತ್ರಿಕವಾಗಿ ಸಾಧುವಲ್ಲ. ಜತೆ ಅವೈಜ್ಞಾನಿಕ ಹಾಗೂ ಪರಸರ ಕಾನೂನಿಗೆ ವಿರೋಧ ಕೂಡ ಆಗುತ್ತದೆ.- ಅನಂತ ಅಶೀಸರ, ಪರಿಸರ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.