ADVERTISEMENT

ಬೇಡ್ತಿ–ವರದಾ ಜೋಡಣೆ: ಸೂಕ್ಷ್ಮ ಪರಿಸರಕ್ಕೆ ಕುತ್ತು

ಅವೈಜ್ಞಾನಿಕ ಡಿ.ಪಿ.ಆರ್. ರದ್ದತಿಗೆ ಜಿಲ್ಲೆಯಾದ್ಯಂತ ಪ್ರಬಲ ಒತ್ತಾಯ

ಗಣಪತಿ ಹೆಗಡೆ
Published 13 ಜೂನ್ 2022, 19:30 IST
Last Updated 13 ಜೂನ್ 2022, 19:30 IST
ಯಲ್ಲಾಪುರದ ಮಾಗೋಡು ಸಮೀಪ ಹರಿಯುವ ಬೇಡ್ತಿ ನದಿ.
ಯಲ್ಲಾಪುರದ ಮಾಗೋಡು ಸಮೀಪ ಹರಿಯುವ ಬೇಡ್ತಿ ನದಿ.   

ಶಿರಸಿ: ಪಶ್ಚಿಮ ಘಟ್ಟವನ್ನು ಸಮೃದ್ಧವಾಗಿಡುವ ಪ್ರಮುಖ ನದಿಗಳು ಬೇಡ್ತಿ ಹಾಗೂ ವರದಾ. ಈ ನದಿಗಳ ನೀರನ್ನು ಬಿಸಿಲನಾಡಿನ ತುಂಗಭದ್ರಾ ಎಡದಂಡೆ ಕಾಲುವೆಗೆ ಹರಿಸುವ ಸಂಬಂಧ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ‘ರಾಷ್ಟ್ರೀಯ ಜಲಮೂಲ ಅಭಿವೃದ್ಧಿ ಏಜೆನ್ಸಿ’ (ಎನ್.ಡಬ್ಲ್ಯು.ಡಿ.ಎ.) ಸಿದ್ಧಪಡಿಸಿದ ವಿಸ್ತೃತ ಯೋಜನಾ ವರದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

2021ರ ಬಜೆಟ್‍ನಲ್ಲಿ ಡಿ.ಪಿ.ಆರ್.ಸಿದ್ಧಪಡಿಸಲು ಅನುದಾನ ಮೀಸಲಿಡಲಾಗಿತ್ತು. ಈಚೆಗೆ ರಾಜ್ಯ ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆಯಾಗಿದೆ. ಇದನ್ನು ಆಧರಿಸಿ ಸರ್ಕಾರ ಶೀಘ್ರವೇ ಯೋಜನೆ ಜಾರಿಗೆ ತರಬಹುದು ಎಂಬ ಆತಂಕ ಜಿಲ್ಲೆಯಲ್ಲಿ ಮನೆಮಾಡಿದೆ.

‘ನದಿ ನೀರನ್ನು ತಿರುಗಿಸಿ ಒಯ್ಯುವ ಯೋಜನೆ ನಿಷ್ಪ್ರಯೋಜಕ ಎಂಬುದು ಎತ್ತಿನ ಹೊಳೆ ಯೋಜನೆಯಿಂದ ಮನದಟ್ಟಾಗಿದೆ. ಆದರೂ ಸರ್ಕಾರ ಸಾವಿರಾರು ಕೋಟಿ ವೆಚ್ಚದ ಯೋಜನೆ ಕೈಗೆತ್ತಿಕೊಂಡು ಸೂಕ್ಷ್ಮ ಪರಿಸರಕ್ಕೆ ಕುತ್ತು ತರುವುದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ’ ಎನ್ನುತ್ತಾರೆ ಪರಿಸರ ತಜ್ಞರು.

ADVERTISEMENT

‘ಸ್ಥಳ ಸಮೀಕ್ಷೆ ನಡೆಸದೆ ಕೇವಲ ನಕ್ಷೆ, ಮಳೆಯ ಅಂಕಿ–ಅಂಶ ಆಧರಿಸಿ ಸಿದ್ಧಪಡಿಸಿದ ಡಿ.ಪಿ.ಆರ್. ಅವೈಜ್ಞಾನಿಕವಾಗಿದೆ. ಅರಣ್ಯ ಭೂಮಿ, ಕೃಷಿಭೂಮಿ ನಾಶದ ಕುರಿತು ನಿಖರ ಮಾಹಿತಿಯನ್ನೂ ಒಳಗೊಂಡಿಲ್ಲ’ ಎಂದು ಪರಿಸರ ತಜ್ಞರು ದೂರಿದ್ದಾರೆ.

‘ತುಂಗಭದ್ರಾ ಎಡದಂಡೆ ಯೋಜನಾ ಪ್ರದೇಶವಾದ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗೆ ನೀರನ್ನು ಒಯ್ಯುವುದು ಯೋಜನೆಯ ಉದ್ದೇಶ. ಆ ಭಾಗದಲ್ಲಿ ಅತಿ ನೀರಾವರಿಯಿಂದಾಗಿ ಹೊಲಗಳು ಜವುಳಾಗಿದೆ. ಕ್ಷಾರತೆ ಹೆಚ್ಚಿ, ಫಲವತ್ತತೆ ಕಳೆದುಕೊಂಡು ನಿಷ್ಪ್ರಯೋಜಕವಾಗುತ್ತಿದೆ. ಮತ್ತೆ ಅಲ್ಲಿಗೆ ನೀರು ಹರಿಸುವ ಅಗತ್ಯ ಇಲ್ಲ. ಅಲ್ಲಿಗೆ ಹರಿಸುವಷ್ಟು ನೀರು ಎಲ್ಲ ಕಾಲದಲ್ಲೂ ಬೇಡ್ತಿ, ಶಾಲ್ಮಲಾದಲ್ಲಿ ಲಭ್ಯವಿರದು’ ಎನ್ನುತ್ತಾರೆಸಂರಕ್ಷಣಾ ಜೀವಶಾಸ್ತ್ರಜ್ಞ ಡಾ.ಕೇಶವ ಕೊರ್ಸೆ.

‘ನದಿ ಜೋಡಣೆ ಯೋಜನೆಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂಬ ಅಂಶವನ್ನು ಅಧ್ಯಯನ ಸಮೇತ ಪರಿಸರ ತಜ್ಞರು ಮನವರಿಕೆ ಮಾಡಿಕೊಟ್ಟಿದ್ದಾರೆ. ಯೋಜನೆ ಕೈಬಿಡುವಂತೆ ಸರ್ಕಾರಕ್ಕೆ ಮನದಟ್ಟು ಮಾಡಲಾಗುವುದು’ ಎಂದು ವೃಕ್ಷಲಕ್ಷ ಆಂದೋಲನ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದ್ದಾರೆ.

------------

ನದಿ ನೀರನ್ನು ಸಾಗಿಸಲು ಪಶ್ಚಿಮಘಟ್ಟದ ಪರ್ವತಗಳಿಗೆ ಕೊರೆಯುವ ಸುರಂಗದಿಂದ ಭೂಕುಸಿತ ಹೆಚ್ಚಲಿದೆ. ಸೂಕ್ಷ್ಮ ಅರಣ್ಯನಾಶ, ವನ್ಯಜೀವಿಗಳಿಗೆ ನೆಲೆ ಇಲ್ಲದಂತಾಗಲಿದೆ.

–ಡಾ.ಕೇಶವ ಕೊರ್ಸೆ,ಸಂರಕ್ಷಣಾ ಜೀವಶಾಸ್ತ್ರಜ್ಞ

ಸಮಾವೇಶ ಇಂದು:ನದಿ ಜೋಡಣೆ ಯೋಜನೆ ವಿರುದ್ಧ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ವೃಕ್ಷಲಕ್ಷ ಆಂದೋಲನ ಸಮಿತಿ, ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿ, ಇನ್ನಿತರ ಸಂಘ–ಸಂಸ್ಥೆಗಳೊಂದಿಗೆ ಸೇರಿ ಆಂದೋಲನ ಆರಂಭಿಸಿವೆ. ಯೋಜನೆ ವಿರುದ್ಧ ಸರಣಿ ಸಭೆ ನಡೆದಿವೆ. ಜೂ.14 ರಂದು ಯಲ್ಲಾಪುರದ ಮಂಚಿಕೇರಿಯಲ್ಲಿ ಸಮಾವೇಶ ಏರ್ಪಾಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.