ADVERTISEMENT

ವಿದ್ಯಾರ್ಥಿಗಳ ಪ್ರೀತಿ ಪ್ರಶಸ್ತಿಗಿಂತ ಮಿಗಿಲು

ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಹೆಗಡೆ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 9:23 IST
Last Updated 4 ಸೆಪ್ಟೆಂಬರ್ 2019, 9:23 IST
ಚಂದ್ರಶೇಖರ ಹೆಗಡೆ
ಚಂದ್ರಶೇಖರ ಹೆಗಡೆ   

ಶಿರಸಿ: ‘ಕಾತೂರಿನಿಂದ ಬೈಕ್‌ನಲ್ಲಿ ಬರುತ್ತಿದ್ದೆ. ಎದುರಿನಿಂದ ಬಂದ ಲಾರಿಯ ಚಾಲಕ ಕೈಮಾಡಿದ, ದಾರಿ ಕೇಳಲು ಆಗಿರಬಹುದೆಂದು, ಗಾಡಿ ನಿಲ್ಲಿಸಿದೆ. ಆ ಚಾಲಕ ಕೆಳಗಿಳಿದು, ‘ಸರ್ ನಾನು ನಿಮ್ಮ ಶಿಷ್ಯ. ನಾನು ಎಸ್ಸೆಸ್ಸೆಲ್ಸಿಯಲ್ಲಿ ಫೇಲಾಗಿದ್ದೆ, ಆದರೆ ನೀವು ಕಲಿಸಿದ ಸ್ವಾಭಿಮಾನದ ಪಾಠದಿಂದ ಒಬ್ಬ ಉತ್ತಮ ವ್ಯಕ್ತಿಯಾಗಿ ಜೀವನ ನಡೆಸುತ್ತಿದ್ದೇನೆ’ ಎಂದ. ಆತ್ಮತೃಪ್ತಿಯೆಂದರೆ ಇದೇ. ಇದಕ್ಕಿಂತ ಮಿಗಿಲಾದ ಪ್ರಶಸ್ತಿಯಿಲ್ಲ’ ಎಂದವರು ಅಕ್ಷರಯೋಗಿ, ಉಮ್ಮಚಗಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಚಂದ್ರಶೇಖರ ಹೆಗಡೆ.

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಅವರು ವೃತ್ತಿ ಬದುಕಿನ ಅನುಭವವನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು. ‘15 ವರ್ಷಗಳ ಹಿಂದೇ ನನಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಬಂದಿತ್ತು. ನನಗಿಂತ ಹೆಚ್ಚು ಅನುಭವಿಗಳು, ಅರ್ಹರಿಗೆ ಪ್ರಶಸ್ತಿ ಕೊಡಿ, ನಾನು ಸ್ವೀಕರಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದೆ. ಶಿಕ್ಷಣ ಮತ್ತು ಕೃಷಿ ಇವೆರಡೇ ನನ್ನ ಆದ್ಯತೆಯ ಕ್ಷೇತ್ರಗಳು. ಎರಡು ಬ್ಯಾಂಕ್‌ಗಳಲ್ಲಿ ಸಿಕ್ಕಿರುವ ಉದ್ಯೋಗ ಬಿಟ್ಟು ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ’ ಎಂದರು.

‘ನಾಲ್ಕೈದು ತಿಂಗಳುಗಳ ಹಿಂದೆ ಬಿದ್ದು ಹಾಸಿಗೆಯಲ್ಲಿ ದಿನಕಳೆಯುವ ಪರಿಸ್ಥಿತಿ ಬಂತು. ಆ ಅವಧಿಯಲ್ಲಿ 100ಕ್ಕೂ ಹೆಚ್ಚು ಶಿಷ್ಯರು ಮನೆಗೆ ಬಂದು ಆರೋಗ್ಯ ವಿಚಾರಿಸಿದರು. ಒಮ್ಮೆ ಬೆಂಗಳೂರಿಗೆ ಹೋದಾಗ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಬೆನ್ನುತಟ್ಟಿದ. ತಿರುಗಿ ನೋಡಿದರೆ ಅವ ನನ್ನ ಹಳೆಯ ವಿದ್ಯಾರ್ಥಿ. ‘ಸರ್ ರಸ್ತೆ ಬದಿ ಬಟ್ಟೆ ವ್ಯಾಪಾರ ಮಾಡಿ, ಗೌರವಯುತವಾದ ಜೀವನ ನಡೆಸುತ್ತಿದ್ದೇನೆ’ ಎಂದ. ಒಬ್ಬ ಗುರುವಿಗೆ ಇದಕ್ಕಿಂತ ಹೆಚ್ಚು ಖುಷಿ ಬೇರೆನೂ ಇಲ್ಲ’ ಎಂದು ಅವರು ಹೇಳುವಾಗ ಅವರಲ್ಲಿ ವೃತ್ತಿಯ ಸಂತೃಪ್ತಿ ಇತ್ತು.

ADVERTISEMENT

‘ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ನಾನು ಹೆಚ್ಚು ಪ್ರಿಯ ಎಂಬುದು ನನಗೆ ಹೆಮ್ಮೆ. ನಾವು ನೀಡುವ ಶಿಕ್ಷಣದಿಂದ ಮಕ್ಕಳು ಉತ್ತಮ ನಾಗರಿಕರಾಗಿ ಬದುಕಬೇಕು. ಅದು ಶಿಕ್ಷಕ ವೃತ್ತಿಯ ಸಾರ್ಥಕತೆ. ಒಬ್ಬ ಗುರುವನ್ನು ಶಿಷ್ಯ ಸಾಯುವ ತನಕ ನೆನಪಿಟ್ಟುಕೊಳ್ಳುತ್ತಾನೆ. ಆ ವೃತ್ತಿಯ ಪಾವಿತ್ರ್ಯವನ್ನು ಶಿಕ್ಷಕರು ಉಳಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.