ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಸೋಡಿಗದ್ದೆ ಮಹಾಸತಿ ದೇವಿ ಭಕ್ತರ ಪಾಲಿನ ಆರಾಧ್ಯ ದೇವಿ. ಕ್ಷಿಪ್ರ ಪ್ರಸಾದಿನಿ ಎಂದೇ ಖ್ಯಾತಿ ಹೊಂದಿರುವ ಈ ದೇವಿಗೆ ಗೊಂಬೆ, ಸಿಂಗಾರ ಅಚ್ಚುಮೆಚ್ಚು.
ಸೋಡಿಗದ್ದೆಯ ಮಹಾಸತಿ ಸನ್ನಿಧಿಯಲ್ಲಿ ಜ. 23ರಿಂದ 9 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ. ಮಕರ ಸಂಕ್ರಮಣದ ನಂತರ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಭಕ್ತರ ದಂಡೆ ಬಂದು ಸೇರುತ್ತದೆ. ಜ. 23ರಂದು ಮೊದಲ ದಿವಸ ಹಾಲಹಬ್ಬ, 24ರಂದು ಎರಡನೇ ದಿವಸ ಕೆಂಡಸೇವೆ, 25 ರಿಂದ 27ರವರಗೆ ತುಲಾಭಾರ ಸೇವೆ, ಉಳಿದ 4 ದಿನ ಜಾತ್ರೆ ನಡೆಯಲಿದೆ. ಕಷ್ಟಕಾಲದಲ್ಲಿ ದೇವಿಗೆ ಹರಕೆ ಹೊತ್ತ ಭಕ್ತರು ಜಾತ್ರೆ ಸಮಯದಲ್ಲಿ ಬಂದು ದೇವಿಗೆ ಹರಕೆ ಒಪ್ಪಿಸುವುದು ವಾಡಿಕೆ. ಕೆಂಡೆ ಸೇವೆ, ಗೊಂಬೆ ಸರ‍್ಪಣೆ, ತೊಟ್ಟಿಲು ಸೇವೆ, ತುಲಾಭಾರ ಸೇವೆಗಳೂ ನಡೆಯಲಿವೆ.
ಭಕ್ತರು ತಮ್ಮ ಬೇಡಿಕೆಗಳ ಬಗ್ಗೆ ದೇವಿಗೆ ನಿವೇದಿಸಿ ತಾಯಿ ನೀಡುವ ಸಿಂಗಾರ ಪ್ರಸಾದದ ಆಧಾರದ ಮೇಲೆ ಕೆಲಸ ಕಾರ್ಯ ಮಾಡುವುದು ವಾಡಿಕೆ. ಭಕ್ತರ ಪ್ರಶ್ನೆಗೆ ತಕ್ಕಂತೆ ದೇವಿಯೂ ತಲೆಭಾಗ, ತೋಳಿನ ಭಾಗ ಹಾಗೂ ಕೈಭಾಗದಿಂದ ಎಳೆಎಳೆಯಾಗಿ ನೀಡುವ ಸಿಂಗಾರ ಹೂವಿನ ಪ್ರಸಾದ ವಿಸ್ಮಯ ಲೋಕದ ಅಚ್ಚರಿಯಲ್ಲೊಂದು.
ಸೋಡಿಗದ್ದೆ ಮಹಾಸತಿ ದೇವಿ ಮೀನುಗಾರರ ಪಾಲಿನ ಆರಾಧ್ಯ ದೇವಿ. ವರ್ಷಪೂರ್ತಿ ಹೇರಳ ಮೀನುಗಾರಿಕೆಗಾಗಿ ದೇವಿಯಲ್ಲಿ ಪ್ರಾರ್ಥಿಸಿ ಹೋರಡುವ ಮೀನುಗಾರರು ಕೈತುಂಬಾ ಆದಾಯ ಗಳಿಸಿದಾಗ ದೇವಿಗೆ ಪಾಲು ಸಲ್ಲಿಸುವುದು ವಾಡಿಕೆ. ತಾಲ್ಲೂಕು, ಜಿಲ್ಲೆ ಮಾತ್ರವಲ್ಲದೇ ನೆರೆಯ ಉಡುಪಿ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮದ ಕುಟುಂಬಗಳಿಗೂ ಆರಾಧ್ಯದೇವಿ. ಭಕ್ತರ ಕಷ್ಟ ಕಾಲದಲ್ಲಿ ಮೊರೆಯಿಟ್ಟರೆ ಕೈಹಿಡಿದು ಕಾಪಾಡುವ ಶಕ್ತಿ ದೇವತೆ ಎಂಬ ನಂಬಿಕ ಇದೆ. ಜಾತ್ರಾ ಸಮಯದಲ್ಲಿ ಎತ್ತಿನ ಗಾಡಿಯಲ್ಲಿ ಹೂವಿನ ಬುಟ್ಟಿ ಹೊತ್ತು ಪಂಚವಾದ್ಯಗಳ ಮೆರವಣಿಗೆಯ ಮೂಲಕ ಹರಿದು ಬರುವ ಭಕ್ತರೇ ಇದಕ್ಕೆ ಸಾಕ್ಷಿ.
ಕಾರ್ತಿಕ ಮಾಸದಲ್ಲಿ ದೇವಿಯ ಉತ್ಸವ ಮೂರ್ತಿಯ ಪಲ್ಲಕ್ಕಿ ಸೇವೆ ಪ್ರಸಿದ್ಧಿ ಪಡೆದಿದೆ. ಸ್ಥಳೀಯ ಸುತ್ತಮುತ್ತಲಿನ ಗ್ರಾಮದ ಪ್ರತಿ ಮನೆಗೆ ತೆರಳಿ ದೇವಿ ಭಕ್ತರನ್ನು ಹರಸುವುದು ರೋಮಾಂಚನ ಅನುಭವ.
ಸೋಡಿಗದ್ದೆ ಮಹಾಸತಿ ದೇವಿಯ ಕ್ಷೇತ್ರಕ್ಕೆ ಬಂದು ಕಷ್ಟ ನಿವೇದಿಸಿಕೊಂಡು ಒಳಿತನ್ನು ಕಂಡವರು ಹಲವರು ಇದ್ದಾರೆ. ಈ ಕ್ಷೇತ್ರದ ಮಹಿಮೆಗೆ ಇಲ್ಲಿ ಬರುವ ಭಕ್ತ ಸಾಗರವೇ ಸಾಕ್ಷಿಲಕ್ಷ್ಮೀ ನಾರಾಯಣ ನಾಯ್ಕ ಸ್ಥಳೀಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.