ADVERTISEMENT

ರಣಭೀಕರ ಮಳೆಗೆ ನಲುಗಿದ ಭಟ್ಕಳ

ವರ್ಷಧಾರೆ: ರಾತ್ರಿಯಿಡೀ ಜಾಗರಣೆ ಮಾಡಿದ ನಾಗರಿಕರು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 15:48 IST
Last Updated 2 ಆಗಸ್ಟ್ 2022, 15:48 IST
ಭಟ್ಕಳದಲ್ಲಿ ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದ ಪಟ್ಟಣವು ಜಲಾವೃತವಾಗಿತ್ತು
ಭಟ್ಕಳದಲ್ಲಿ ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದ ಪಟ್ಟಣವು ಜಲಾವೃತವಾಗಿತ್ತು   

ಭಟ್ಕಳ: ತಾಲ್ಲೂಕಿನಲ್ಲಿ ಸೋಮವಾರ ತಡರಾತ್ರಿಯಿಂದ ಮಂಗಳವಾರ ಬೆಳಿಗ್ಗೆಯ ತನಕ ಸುರಿದ ಮಳೆಯು, ಸಾಲು ಸಾಲು ಅನಾಹುತ ಸೃಷ್ಟಿಸಿದೆ. ನೂರಾರು ಮನೆಗಳು, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ, ಕೋಟ್ಯಂತರ ರೂಪಾಯಿ ಹಾನಿಯುಂಟು ಮಾಡಿದೆ.

ಭಟ್ಕಳದ ಇತಿಹಾಸದಲ್ಲಿಯೇ ಮೊದಲ ಬಾರಿ ಎಂಬಂತೆ ಇಷ್ಟೊಂದು ಪ್ರಮಾಣದಲ್ಲಿ ಪ್ರವಾಹ ಉಂಟಾಗಿತ್ತು. ರಾತ್ರಿ ಕಳೆದು ಬೆಳಗಾಗುವುದನ್ನೇ ಕಾಯುತ್ತಿದ್ದ ಜನ, ಜೀವಭಯದಲ್ಲೇ ಸಮಯ ಕಳೆದರು. ಪಟ್ಟಣದ ಚೌಥನಿ, ಮಣ್ಕುಳಿ, ಪುರವರ್ಗ, ಮೂಡಭಟ್ಕಳ, ಮುಂಡಳ್ಳಿ, ಆಸರಕೇರಿ, ಸುಲ್ತಾನ ರಸ್ತೆ, ಗೌಸಿಯಾ ರಸ್ತೆ, ಮಗ್ದುಂ ಕಾಲೊನಿ, ರಂಗಿನಕಟ್ಟೆ, ವೆಂಕಟಾಪುರ, ಶಾರದ ಹೊಳೆ, ಹೆಬಳೆ, ಜಾಲಿ, ಮೂಡಶಿರಾಲಿ ಹಾಗೂ ಶಿರಾಲಿ ಪ್ರದೇಶಗಳು ದೊಡ್ಡ ನದಿಯಂತಾಗಿದ್ದವು.

ಕಂಗೆಟ್ಟಿದ್ದ ಜನರನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ರಕ್ಷಿಸಿದರು. ಮೂಡಭಟ್ಕಳ, ಚೌಥನಿ ಹಾಗೂ ಪುರವರ್ಗದಲ್ಲಿ ದೋಣಿಗಳಲ್ಲಿ ಜನರನ್ನು ಸುರಕ್ಷಿತ ಪ್ರದೇಶಕ್ಕೆ ತರಲಾಯಿತು. ಹಲವೆಡೆ ಎಸ್.ಡಿ.ಆರ್.ಎಫ್ ತಂಡದ ಸದಸ್ಯರು ಕಾರ್ಯಾಚರಣೆ ನಡೆಸಿದರು.

ನೆರೆ ನೀರಿನಲ್ಲಿ ಸಾಕು ಪ್ರಾಣಿಗಳು ಕೊಚ್ಚಿಕೊಂಡು ಹೋಗಿವೆ. ಮಣ್ಕುಳಿ, ಚೌಥನಿ, ಶಾರದಹೊಳೆ ಪ್ರದೇಶಗಳಲ್ಲಿ ದನ ಕರು, ಕೋಳಿ ಬೆಕ್ಕುಗಳು ನೀರು ಪಾಲಾಗಿವೆ. ಕೊಟ್ಟಿಗೆ, ಗೂಡಿನಲ್ಲಿ ಕಟ್ಟಿಹಾಕಿದ್ದ, ಮುಚ್ಚಿಟ್ಟಿದ್ದ ಸಾಕು ಪ್ರಾಣಿಗಳು ಅಲ್ಲೇ ಮೃತಪಟ್ಟಿವೆ.

ADVERTISEMENT

ಮಣ್ಕುಳಿಯ ರಮೇಶ ನಾಯ್ಕ ಎನ್ನುವವರ ಕೋಳಿ ಫಾರಂಗೆ ನೀರು ನುಗ್ಗಿ ಸುಮಾರು 150 ಕೋಳಿಗಳು ಮೃತಪಟ್ಟಿವೆ. ಅದೇ ಗ್ರಾಮದ ರೋಹಿಣಿ ನಾಯ್ಕ ಅವರ ಕೊಟ್ಟಿಗೆಯಲ್ಲಿ ಮೂರು ಹಸುಗಳು ಅಸುನೀಗಿವೆ. ಮೂರು ದನಗಳು ನೀರು ಪಾಲಾಗಿವೆ.

ತೆಂಗಿನ ಗುಂಡಿ ಮತ್ತು ಅಳ್ವೆಕೋಡಿ ಧಕ್ಕೆಯಲ್ಲಿ 40 ದೋಣಿಗಳಿಗೆ ಹಾನಿಯಾಗಿದೆ. ಆರು ದೋಣಿಗಳು ನೀರು ಪಾಲಾಗಿವೆ. ಮುಂಡೊಳ್ಳಿಯಲ್ಲಿ 15 ದೋಣಿಗಳು ಕಾಣೆಯಾಗಿವೆ. ದೋಣಿಗಳ ರಕ್ಷಣೆಗೆ ಸಹಾಯ ಸಿಗುತ್ತಿಲ್ಲ ಎಂದು, ಸ್ಥಳಕ್ಕೆ ಭೇಟಿ ಕೊಟ್ಟ ಶಾಸಕ ಸುನೀಲ್ ನಾಯ್ಕ ಅವರೊಂದಿಗೆ ಮೀನುಗಾರರು ಅಸಮಾಧಾನ ತೋಡಿಕೊಂಡರು.

ಮೂಡಭಟ್ಕಳ ಪುರವರ್ಗ ಪ್ರದೇಶದಲ್ಲಿ ಗೋಪಿನಾಥ ನದಿ ಉಕ್ಕಿ ಬಂದಿತ್ತು. ಹಾಗಾಗಿ ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣವಾಗಿ ಹೊಳೆಯಂತಾಗಿ ಹಲವು ಗಂಟೆಗಳ ಕಾಲ ವಾಹನಗಳ ಸಂಚಾರ ಸ್ಥಗಿತವಾಗಿತ್ತು. ನೀರು ಇಳಿದ ಬಳಿಕ ವಾಹನಗಳ ಸಂಚಾರ ಸಹಜ ಸ್ಥಿತಿಗೆ ಬಂತು.

ಇದೇರೀತಿ, ವೆಂಕಟಾಪುರದ ಹುಲ್ಲುಕ್ಕಿ ಬಳಿ ರೈಲ್ವೆ ಹಳಿಯ ಮೇಲೆ ನೀರು ಹರಿದಿದೆ. ಸ್ಲೀಪರ್‌ಗಳು ಕೊಚ್ಚಿಕೊಂಡು ಹೋಗಿದ್ದರಿಂದ ರೈಲು ಸಂಚಾರಕ್ಕೂ ಅಡಚಣೆಯಾಯಿತು. ಹಲವು ರೈಲುಗಳ ಸಂಚಾರವನ್ನು ಮೊಟಕು, ರದ್ದು ಹಾಗೂ ಸಮಯ ಬದಲಾಯಿಸಲಾಗಿತ್ತು. ಹಳಿಗಳ ದುರಸ್ತಿಯ ಬಳಿಕ ಸಂಚಾರ ಆರಂಭವಾಯಿತು.

ಸಾವಿರಾರು ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯ, ಗೃಹೋಪಯೋಗಿ ವಸ್ತುಗಳು ಹಾನಿಗೀಡಾಗಿವೆ. ಪುರಸಭೆ ವ್ಯಾಪ್ತಿಯಲ್ಲಿ ನೂರಾರು ಅಂಗಡಿಗಳಿಗೆ ನೀರು ನುಗ್ಗಿದೆ. ಬಟ್ಟೆ ಅಂಗಡಿ, ಕಿರಾಣಿ ಹಾಗೂ ಎಲೆಕ್ಟ್ರಾನಿಕ್ ಉತ್ಪನ್ನಗಳ ಅಂಗಡಿಗಳಿಗೆ ಆಗಿರುವ ಹಾನಿಯನ್ನು ಅಂದಾಜಿಸಲೂ ಸದ್ಯಕ್ಕೆ ಸಾಧ್ಯವಾಗಿಲ್ಲ.

ಶಾಲಾ ಕಾಲೇಜಿಗೆ ರಜೆ:

ಭಾರಿ ಮಳೆಯಾದ ಕಾರಣ ಭಟ್ಕಳ ತಾಲ್ಲೂಕಿನ ಎಲ್ಲ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ನೀಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದರು.

ಕೃಷಿ ಭೂಮಿ ನಾಶ:

ಭಟ್ಕಳ ತಾಲ್ಲೂಕಿನಲ್ಲಿ ಸೋಮವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಕೃಷಿ ಜಮೀನು ಸಂಪೂರ್ಣ ನಾಶವಾಗಿದೆ. ನದಿ ನೀರು ಉಕ್ಕಿಬಂದ ಪರಿಣಾಮ ಮಲ್ಲಿಗೆ ಗಿಡಗಳು, ನಾಟಿ ಮಾಡಿದ ಭತ್ತದ ಸಸಿಗಳು, ಬಾಳೆತೋಟ ಸರ್ವನಾಶವಾಗಿವೆ. ರಭಸದ ನೀರಿಗೆ ಸಸಿಗಳು ಕೊಚ್ಚಿಕೊಂಡು ಹೋಗಿದ್ದು ನೂರಾರು ಎಕರೆ ಕೃಷಿ ಭೂಮಿಗೆ ಹಾನಿಯಾಗಿದೆ. ಪರಿಶ್ರಮದಿಂದ ಬೆಳೆಸಿದ್ದ ರೈತರು ಕಣ್ಣೀರು ಹಾಕುತ್ತಿದ್ದಾರೆ.

ಮರೆಯಾದ ಹಬ್ಬದ ಸಂಭ್ರಮ:

ನಾಗರಪಂಚಮಿ ಹಬ್ಬದ ಸಂಭ್ರಮ ಕಾಣಬೇಕಾದ ಭಟ್ಕಳದಲ್ಲಿ ಮಂಗಳವಾರ, ನೆರೆಹಾವಳಿ ಭಾರಿ ದುಃಖವನ್ನು ತಂದಿಟ್ಟಿದೆ. ನಾಗಾರಾಧನೆಗೆ ಸಿದ್ಧತೆ ಮಾಡಿಕೊಂಡಿದ್ದ ಆರಾಧಕರು, ಎಲ್ಲವನ್ನೂ ಕಳೆದುಕೊಂಡು ಕಾಳಜಿ ಕೇಂದ್ರ ಸೇರಿದ್ದಾರೆ. ರೈಲು ನಿಲ್ದಾಣದ ಪಕ್ಕದಲ್ಲಿರುವ ಇತಿಹಾಸ ಪ್ರಸಿದ್ಧ ನಾಗಮಾಸ್ತಿ ದೇವಸ್ಥಾನವು ನಾಗರಪಂಚಮಿ ದಿನದಂದೇ ಪ್ರವಾಹಕ್ಕೆ ತುತ್ತಾಗಿದೆ. ಅಲ್ಲಿದ್ದ ಮೂರ್ತಿಗಳು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.