ADVERTISEMENT

ಭಟ್ಕಳಕ್ಕೆ ಬಂದ 184 ಮಂದಿಗೆ ಕ್ವಾರಂಟೈನ್

ದುಬೈ,ಯುಎಇನಿಂದ ಬಾಡಿಗೆ ವಿಮಾನದಲ್ಲಿ ಬಂದಿಳಿದ ಸ್ಥಳೀಯರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 21:53 IST
Last Updated 13 ಜೂನ್ 2020, 21:53 IST
ದುಬೈನಿಂದ ಭಟ್ಕಳಕ್ಕೆ ಬಂದವರನ್ನು ಶನಿವಾರ ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಯಿತು
ದುಬೈನಿಂದ ಭಟ್ಕಳಕ್ಕೆ ಬಂದವರನ್ನು ಶನಿವಾರ ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಯಿತು   

ಭಟ್ಕಳ: ಲಾಕ್‌ಡೌನ್‌ನಿಂದಾಗಿ ದುಬೈ ಮತ್ತು ಯುಎಇನಲ್ಲೇ ಉಳಿದುಕೊಂಡಿದ್ದ ಭಟ್ಕಳ ಹಾಗೂ ಸುತ್ತಮುತ್ತಲಿನ ಸುಮಾರು 184 ಜನರು ಶನಿವಾರ ಭಟ್ಕಳಕ್ಕೆ ಬಂದಿದ್ದಾರೆ.

ಜೂನ್‌ 12ರಂದು ದುಬೈನ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣದಿಂದ ರಾತ್ರಿ 10ಗಂಟೆ ಸುಮಾರಿಗೆ ಹೊರಟ ಬಾಡಿಗೆ ವಿಮಾನ ರಾತ್ರಿ 2 ಗಂಟೆ ಸುಮಾರಿಗೆ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ತಲುಪಿತು. ಅಲ್ಲಿಂದ ಮೊದಲೇ ನಿರ್ಧರಿಸಿದಂತೆ ಭಟ್ಕಳ ಮುಸ್ಲಿಂ ಜಮಾತ್ ಮಂಗಳೂರು ಹಾಗೂ ಭಟ್ಕಳದ ತಂಝೀಮ್ ಸಂಸ್ಥೆಯ ನೇತೃತ್ವದಲ್ಲಿ 4 ಖಾಸಗಿ ಬಸ್‌ಗಳ ಮೂಲಕ ಗರ್ಭಿಣಿಯರು, ಮಕ್ಕಳು ಸೇರಿದಂತೆ ಸುಮಾರು 184 ಜನರು ಶನಿವಾರ ಬೆಳಿಗ್ಗೆ ಭಟ್ಕಳಕ್ಕೆ ಸುರಕ್ಷಿತವಾಗಿ ಬಂದು ತಲುಪಿದರು.

ದುಬೈ ಮತ್ತು ಯುಎಇನಲ್ಲಿದ್ದವರನ್ನು ಭಟ್ಕಳಕ್ಕೆ ಕಳುಹಿಸಲು ಮುತುವರ್ಜಿ ವಹಿಸಿದ್ದ ಅನಿವಾಸಿ ಭಾರತೀಯ ಉದ್ಯಮಿ, ತಂಝೀಮ್ ಉಪಾಧ್ಯಕ್ಷ ಆತಿಕುರ್ ರೆಹ್ಮಾನ್ ಮುನೀರಿ, ಎಲ್ಲರನ್ನೂ ಭಟ್ಕಳಕ್ಕೆ ಕಳುಹಿಸಲು ಸಹಕರಿಸಿದ ಭಾರತೀಯ ರಾಯಭಾರಿ ಕಚೇರಿ, ಮಂಗಳೂರು ಹಾಗೂ ಉತ್ತರಕನ್ನಡ ಜಿಲ್ಲಾಡಳಿತ ಹಾಗೂ ದಾನಿಗಳಿಗೆ ದುಬೈನಿಂದಲೇ ಸಂದೇಶದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

ADVERTISEMENT

ಇದೇ ವೇಳೆ ಜನವಸತಿ ಇರುವ ಪ್ರದೇಶಗಳಲ್ಲಿ ದುಬೈನಿಂದ ಬಂದಿರುವರನ್ನು ಕ್ವಾರಂಟೈನ್ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಹಲವರು, ಯಾರಿಗಾದರೂ ಕೊರೊನಾ ದೃಢಪಟ್ಟರೆ, ಸೀಲ್‌ಡೌನ್ ಮಾಡಲಾಗುತ್ತದೆ. ಇದರಿಂದ ಜನರು ಮತ್ತೆ ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಜನವಸತಿ ಇಲ್ಲದೆಡೆ ಕ್ವಾರಂಟೈನ್ ಮಾಡಬೇಕು ಎಂದು ಒತ್ತಾಯಿಸಿದರು.

ಎಲ್ಲರಿಗೂ ಕ್ವಾರಂಟೈನ್: ಭಟ್ಕಳಕ್ಕೆ ಬಂದಿಳಿದ ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಕ್ವಾರಂಟೈನ್ ಮಾಡಲಾಯಿತು. ಅಂಜುಮನ್ ಕಾಲೇಜಿನ ವಸತಿ ನಿಲಯ, ಹೋಟೆಲ್ ಕೋಲಾ ಪ್ಯಾರಡೈಸ್, ನೀಲಾವರ್ ಪ್ಯಾಲೇಸ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಎಲ್ಲರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ. 7 ದಿನಗಳ ನಂತರ ಮನೆಗೆ ಕಳುಹಿಸಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಎಸ್. ಭರತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.