ADVERTISEMENT

‘ಧ್ವಜ ಮಾರಿ ದುಡ್ಡು ಮಾಡುತ್ತಿರುವ ಬಿಜೆಪಿ’

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 14:05 IST
Last Updated 10 ಆಗಸ್ಟ್ 2022, 14:05 IST
ಯಲ್ಲಾಪುರ–ಮುಂಡಗೋಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಡ್ನಾಪುರದಲ್ಲಿ ಬುಧವಾರ ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಯಲ್ಲಾಪುರ–ಮುಂಡಗೋಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಡ್ನಾಪುರದಲ್ಲಿ ಬುಧವಾರ ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ ನೀಡಲಾಯಿತು.   

ಶಿರಸಿ: ‘ದೇಶದ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯೂ ಇಲ್ಲದೆ, ಈವರೆಗೂ ರಾಷ್ಟ್ರಧ್ವಜಕ್ಕೆ ಗೌರವ ಕೊಡದಿದ್ದ ಬಿಜೆಪಿ ಈಗ ಮನೆ ಮನೆಗೆ ತ್ರಿವರ್ಣ ಧ್ವಜ ಅಭಿಯಾನದ ಮೂಲಕ ಧ್ವಜ ಮಾರಿ ದುಡ್ಡು ಗಳಿಸಲು ಹೊರಟಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಆರೋಪಿಸಿದರು.

ಯಲ್ಲಾಪುರ–ಮುಂಡಗೋಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಡ್ನಾಪುರದಲ್ಲಿ ಬುಧವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಚಾಲನೆ ನೀಡಿದ ಅವರು, ‘ರಾಷ್ಟ್ರಧ್ವಜಕ್ಕೆ ಈ ಹಿಂದಿನಿಂದಲೂ ಬಿಜೆಪಿ ಅಷ್ಟಾಗಿ ಗೌರವ ಕೊಟ್ಟಿರಲಿಲ್ಲ. ಈಗ ಪ್ರತಿ ಮನೆಗೆ ಧ್ವಜ ನೀಡುವ ತರಾತುರಿಯಲ್ಲಿ ಧ್ವಜದ ಗೌರವವನ್ನೂ ಕಳೆಯಲಾಗುತ್ತಿದೆ’ ಎಂದು ದೂರಿದರು.

‘ಶೇ.40ರಷ್ಟು ಕಮೀಷನ್ ಕೊಳ್ಲೆ ಹೊಡೆದ ಆರೋಪ, ಕೋಮುವಾದ, ಬೆಲೆ ಏರಿಕೆಯನ್ನು ಮರೆಮಾಚಲು ಹೊಸ ದಾರಿಯನ್ನು ಬಿಜೆಪಿ ಹುಡುಕುತ್ತಿದೆ. ದೇಶದ ಜನರನ್ನು ಸಂಕಷ್ಟಕ್ಕೆ ತಳ್ಳಿರುವ ಬಿಜೆಪಿಗೆ ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರಣೆ ನಡೆಸುವ ನೈತಿಕತೆ ಉಳಿಸಿಕೊಂಡಿಲ್ಲ’ ಎಂದರು.

ADVERTISEMENT

ಮುಖಂಡ ಪ್ರಶಾಂತ ದೇಶಪಾಂಡೆ ಮಾತನಾಡಿ, ‘ವಿವಿಧತೆಯಲ್ಲಿ ಏಕತೆಯ ಸೂತ್ರ ಭಾರತದ ರಾಷ್ಟ್ರೀಯತೆಯಾಗಿದೆ. ಆದರೆ ಬಿಜೆಪಿ ಅದನ್ನು ನಾಶ ಮಾಡಲು ಮುಂದಾಗಿದೆ. ಕೋಮುವಾದ, ಜಾತೀಯತೆ ಮೂಲಕ ಒಡಕು ಸೃಷ್ಟಿಸುವ ಕೆಲಸವನ್ನು ಆ ಪಕ್ಷ ಮಾಡುತ್ತಿದೆ’ ಎಂದು ಆರೋಪಿಸಿದರು.

ಸುರಿಯುವ ಮಳೆಯನ್ನೂ ಲೆಕ್ಕಿಸದೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು 15 ಕಿ.ಮೀ.ನಷ್ಟು ದೂರದವರೆಗೆ ವಿವಿಧ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿದರು. ಬನವಾಸಿ ಸಮುದಾಯ ಭವನದಲ್ಲಿ ಸ್ವಾತಂತ್ರ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.

ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್.ನಾಯ್ಕ, ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ಟ, ವಕ್ತಾರ ದೀಪಕ್ ದೊಡ್ಡೂರ, ಶ್ರೀಲತಾ ಕಾಳೇರಮನೆ, ಬಸವರಾಜ ದೊಡ್ಮನಿ, ಈರಪ್ಪ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.