ADVERTISEMENT

ರಾಜ್ಯಕ್ಕೆ ಬಿಜೆಪಿ ಸರ್ಕಾರ ಶಾಪ: ದೇಶಪಾಂಡೆ

ಹಳಿಯಾಳ: ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಮತ ಯಾಚನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 16:13 IST
Last Updated 6 ಡಿಸೆಂಬರ್ 2021, 16:13 IST
ಹಳಿಯಾಳದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಆರ್.ವಿ.ದೇಶಪಾಂಡೆ ಮಾತನಾಡಿದರು
ಹಳಿಯಾಳದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಆರ್.ವಿ.ದೇಶಪಾಂಡೆ ಮಾತನಾಡಿದರು   

ಹಳಿಯಾಳ: ಬಿಜೆಪಿ ರಾಜ್ಯಕ್ಕೆ ಶಾಪವಾಗಿದೆ, ಬಿಜೆಪಿ ಶಾಪದಿಂದ ಮುಕ್ತವಾಗಬೇಕಾದರೆ ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರನ್ನು ಬಹುಮತದಿಂದ ಗೆಲ್ಲಿಸಿ ಎಂದು ಶಾಸಕ ಆರ್‌.ವಿ. ದೇಶಪಾಂಡೆ ಹೇಳಿದರು.

ಸೋಮವಾರ ಇಲ್ಲಿನ ಸಂದೇಶ ಗಾರ್ಡನನಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ವಿಧಾನ ಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಮತ ಯಾಚಿಸಿ ಮಾತನಾಡಿದರು.

ಇಪ್ಪತ್ತು ವಿಧಾನಪರಿಷತ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ. ಸ್ವಾತಂತ್ರ್ಯದ ನಂತರ ಕೃಷಿ ಕಾಯ್ದೆಗಳ ವಿರುದ್ಧ ಅತಿ ಹೋರಾಟ ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳ ನೇತೃತ್ವದಲ್ಲಿ ನಡೆದಿದೆ. ಮೂರೂ ಕಾಯ್ದೆಗಳನ್ನು ರದ್ದು‍ಪಡಿಸುವಲ್ಲಿ ಯಶಸ್ವಿಯಾಗಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಎಲ್ಲ ವರ್ಗದ ಜನರಿಗೂ ಅನ್ಯಾಯ ಮಾಡುತ್ತಿದೆ. ಇಂದು ಅಡುಗೆ ಅನಿಲ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆಡಳಿತ ವ್ಯವಸ್ಥೆ ಕುಸಿದಿದೆ. ಪ್ರಧಾನಿ ಮೋದಿ ಆಡಳಿತಕ್ಕೆ ಬಂದಾಗ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ವಾಗ್ದಾನ ಮಾಡಿದ್ದರು, ಆದರೆ ಏಳು ವರ್ಷದಲ್ಲಿ 14 ಕೋಟಿ ನಿರುದ್ಯೋಗಿಗಳು ಸೃಷ್ಟಿಯಾಗಿದ್ದಾರೆ ಎಂದರು.

ADVERTISEMENT

ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಟ್ನೇಕರ ಮಾತನಾಡಿ, ಬಿಜೆಪಿ ಭ್ರಷ್ಟ ಸರ್ಕಾರಕ್ಕೆ ಜನರು ಬೇಸತ್ತು ಕಾಂಗ್ರೆಸ್‌ ಪಕ್ಷದ ಆಡಳಿತವನ್ನು ಬಯಸುತ್ತಿದ್ದಾರೆ. ಅಕಾಲಿಕ ಮಳೆಯಿಂದ ರೈತರ ಬೆಳೆ ಹಾನಿಯಾದರೂ ಸರ್ಕಾರ ಇನ್ನೂ ಏಚ್ಚೆತ್ತಿಲ್ಲ ಎಂದರು. ಅಭ್ಯರ್ಥಿ ಭೀಮಣ್ಣಾ ನಾಯ್ಕ, ಮುಖಂಡ ಪ್ರಶಾಂತ ದೇಶಪಾಂಡೆ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುಭಾಷ ಕೋರ್ವೆಕರ, ಯುವ ಮುಖಂಡ ರವಿ ತೋರಣಗಟ್ಟಿ, ಎಚ್‌.ಬಿ. ಪರಶುರಾಮ ಮಾತನಾಡಿದರು. ಪುರಸಭೆ ಅಧ್ಯಕ್ಷ ಅಜರ ಬಸರೀಕಟ್ಟಿ, ಮುಖಂಡರಾದ ಕೃಷ್ಣ ಪಾಟೀಲ, ಸಂತೋಷ ರೇಣಕೆ, ಬಿ.ಡಿ. ಚೌಗಲೆ ಶಂಕರ ಬೆಳಗಾಂವಕರ, ಪುರಸಬೆಯ ಕಾಂಗ್ರೆಸ್‌ ಪಕ್ಷದ ಚುನಾಯಿತ ಸದಸ್ಯರು ವಿವಿಧ ಗ್ರಾಮ ಪಂಚಾಯತಿಯ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.