ADVERTISEMENT

ಬಿಜೆಪಿ ಗೆಲುವಿಗೆ ವ್ಯೂಹ ರಚನೆ

ಬಿಜೆಪಿ ರಾಜ್ಯ ಘಟಕದ ವಕ್ತಾರ ಪ್ರಮೋದ ಹೆಗಡೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 12:46 IST
Last Updated 1 ಡಿಸೆಂಬರ್ 2019, 12:46 IST

ಶಿರಸಿ: ಯಲ್ಲಾಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಮಹಾಭಾರತ ಯುದ್ಧದ ಮಾದರಿಯಲ್ಲಿ ವ್ಯೂಹ ರಚಿಸಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಪ್ರಮೋದ ಹೆಗಡೆ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರ ವ್ಯಾಪ್ತಿಯ 54 ಶಕ್ತಿ ಕೇಂದ್ರಗಳಲ್ಲಿ ಚುನಾವಣಾ ನಿರ್ವಹಣಾ ಸಮಿತಿ ರಚಿಸಲಾಗಿದೆ. ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಒಂಬತ್ತು ಮಹಾಶಕ್ತಿ ಕೇಂದ್ರಗಳಲ್ಲಿ ಹಿರಿಯ ನಾಯಕರನ್ನಿಟ್ಟುಕೊಂಡು ವ್ಯೂಹ ರಚಿಸಲಾಗಿದೆ. 39 ಗ್ರಾಮ ಪಂಚಾಯ್ತಿ ಒಳಗೊಂಡ ಕ್ಷೇತ್ರದಲ್ಲಿ ಪ್ರತಿ ಪಂಚಾಯ್ತಿಯಲ್ಲಿ ಪ್ರತಿ ಮತದಾರನ ಭೇಟಿ ಮಾಡುವ ಯೋಜನೆ ರೂಪಿಸಲಾಗಿದೆ’ ಎಂದರು.

ಮುಂಡಗೋಡ ಮತ್ತು ಯಲ್ಲಾಪುರ ಪಟ್ಟಣ ಪಂಚಾಯ್ತಿಗಳಲ್ಲಿ 30 ವಾರ್ಡ್ ಸಮಿತಿ ರಚಿಸಿ, ಮಹಾಶಕ್ತಿ ಕೇಂದ್ರದ ಮೂಲಕ ಕೆಲಸ ನಿರ್ವಹಿಸಲಾಗುತ್ತಿದೆ. 231 ಬೂತ್‌ಗಳಲ್ಲಿ ಸ್ವತಂತ್ರ ನಿರ್ವಹಣಾ ಸಮಿತಿ ರಚಿಸಲಾಗಿದೆ. ಪ್ರತಿ ಮತದಾರನನ್ನು ಕನಿಷ್ಠ 2–3 ಬಾರಿ ಭೇಟಿ ಮಾಡುವ ನಿಟ್ಟಿನಲ್ಲಿ ಪೇಜ್‌ ಪ್ರಮುಖ್ ನೇಮಕ ಮಾಡಲಾಗಿದೆ. ಸಂಘ ಪರಿವಾರದ ಪ್ರಮುಖರು ಸಮಾಜದ ಗಣ್ಯರನ್ನು ಭೇಟಿ ಮಾಡುತ್ತಾರೆ. ಇಡೀ ಚುನಾವಣಾ ಪ್ರಕ್ರಿಯೆ ನಿರ್ವಹಣೆಗೆ 30 ಸಂಚಾಲನಾ ಸಮಿತಿಗಳನ್ನು ರಚಿಸಲಾಗಿದೆ ಎಂದು ವಿವರಿಸಿದರು.

ADVERTISEMENT

ಹಳಬರು ಮತ್ತು ಹೊಸಬರ ನಡುವೆ ಸಮನ್ವಯ ಸಾಧಿಸಲು ಸಮಿತಿ ರಚಿಸಲಾಗಿದೆ. ಕಳೆದ ಬಾರಿ ವಿ.ಎಸ್.ಪಾಟೀಲ ಪಡೆದಿದ್ದ ಮತ ಹಾಗೂ ಹೆಬ್ಬಾರ್ ಮತ ಸೇರುವುದರಿಂದ ಬಿಜೆಪಿಗೆ ಅನುಕೂಲ ಆಗಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಮುಕ್ಕಾಲು ಭಾಗ ಕಾರ್ಯಕರ್ತರು ಖಾಲಿಯಾಗಿದ್ದಾರೆ ಎಂದು ಹೇಳಿದರು.

‘ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ₹ 365 ಕೋಟಿಯಷ್ಟು ಅನುದಾನ ಮಂಜೂರು ಮಾಡಿದ್ದಾರೆ. ಇದು ಹಂತ ಹಂತವಾಗಿ ಬಿಡುಗಡೆಯಾಗಲಿದೆ’ ಎಂದು ಪ್ರಮೋದ ಹೆಗಡೆ, ‘ಈಗಾಗಲೇ ಬಿಡುಗಡೆಯಾಗಿರುವ ಹಣ ಎಷ್ಟು ಎಂದು ಪ್ರಶ್ನಿಸಿದ್ದಕ್ಕೆ, ‘ಈ ಬಗ್ಗೆ ನನ್ನ ಬಳಿ ಈಗ ದಾಖಲೆಯಿಲ್ಲ’ ಎಂದರು. ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ನರಸಿಂಹ ಹೆಗಡೆ, ನಗರ ಘಟಕದ ಅಧ್ಯಕ್ಷ ರಾಜೇಶ ಶೆಟ್ಟಿ, ಕಾರ್ಯಾಲಯ ಕಾರ್ಯದರ್ಶಿ ಶ್ರೀರಾಮ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.