ADVERTISEMENT

ಭಯೋತ್ಪಾದಕರ ವಿರುದ್ಧ ಬಿಜೆಪಿ ಪ್ರತಿಭಟನೆ

ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 13:13 IST
Last Updated 17 ಫೆಬ್ರುವರಿ 2019, 13:13 IST
ಶಿರಸಿಯಲ್ಲಿ ಬಿಜೆಪಿ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು
ಶಿರಸಿಯಲ್ಲಿ ಬಿಜೆಪಿ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು   

ಶಿರಸಿ: ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ಮೇಲಿನ ದಾಳಿ ಖಂಡಿಸಿ, ಭಯೋತ್ಪಾದಕರ ವಿರುದ್ಧ ರಾಜ್ಯದಾದ್ಯಂತ ಬಿಜೆಪಿ ಕರೆ ನೀಡಿದ ಪ್ರತಿಭಟನೆ ಪ್ರಯುಕ್ತ ಪಕ್ಷದ ಜಿಲ್ಲಾ ಘಟಕದ ವತಿಯಲ್ಲಿ ಭಾನುವಾರ ಇಲ್ಲಿ ಪ್ರತಿಭಟನೆ ನಡೆಯಿತು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಅಸ್ತಿತ್ವವೇ ಇಲ್ಲದ ಪಾಕಿಸ್ತಾನವು ಚೀನಾದ ಬೆಂಬಲದಿಂದ ಬದುಕಿದೆ. ಆದರೆ, ಭಾರತದೊಂದಿಗೆ ಇಡೀ ವಿಶ್ವವೇ ಸೇರಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದರಿಂದ ಸೈನ್ಯವು ಉಗ್ರರಿಗೆ ತಕ್ಕ ಉತ್ತರ ನೀಡಲಿದೆ’ ಎಂದರು.

ಉಗ್ರಗಾಮಿ ಚಟುವಟಿಕೆಗಳ ವಿರುದ್ಧ ಜಮ್ಮು ಸರ್ಕಾರ ಕಠಿಣ ಕ್ರಮ‌ ಕೈಗೊಳ್ಳಬೇಕು. ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಸಂಚು ನಡೆಯುತ್ತಿದೆ. ಪಾಕಿಸ್ತಾನವು ಭಯೋತ್ಪಾದಕ ಚಟುವಟಿಕೆಗಳ ತರಬೇತಿ ಕೇಂದ್ರವಾಗಿದೆ. ಚೀನಾದ ಕೈಗೊಂಬೆಯಂತೆ ಆಟವಾಡುತ್ತಿರುವ ಪಾಕಿಸ್ತಾನಕ್ಕೆ ಮತ್ತು ಈ ಮನೋಭಾವ ಹೊಂದಿರುವ ಭಾರತೀಯರಿಗೆ ಇದು ಎಚ್ಚರಿಕೆಯ ಗಂಟೆಯಾಗಬೇಕು. ಯೋಧರ ಹನಿ ರಕ್ತಕ್ಕೂ ಭಾರತ ಪ್ರತ್ಯುತ್ತರ ನೀಡಲಿದೆ ಎಂದು ಅವರು ಹೇಳಿದರು.

ADVERTISEMENT

ಜಿಲ್ಲಾ ಘಟಕದ ಕೆ.ಜಿ.ನಾಯ್ಕ ಮಾತನಾಡಿ, ‘ಸೇನೆಗೆ ಸ್ವಾತಂತ್ರ್ಯ ನೀಡಬೇಕು. ಕಾಶ್ಮೀರದಲ್ಲಿ ಸೇನೆಯ ವಾಹನಗಳ ಮೇಲೆ ಕಲ್ಲು ತೂರಾಟ ನಡೆದರೂ, ಸೈನಿಕರು ಸುಮ್ಮನಿರುವ ಪರಿಸ್ಥಿತಿ ಇದೆ. ಪಾಕಿಸ್ತಾನ ಜಿಂದಾಬಾದ್ ಎಂದು ಉಗ್ರರನ್ನು ಹೊಗಳುವ ಮಂದಿ ದೇಶದಲ್ಲಿ ಅನೇಕರಿದ್ದಾರೆ. ಇವರಿಗೆ ಶಿಸ್ತಿನ ಪಾಠ ಕಲಿಸಬೇಕು’ ಎಂದರು. ಪ್ರಮುಖರಾದ ವಿನೋದ ಪ್ರಭು, ಆರ್.ಡಿ.ಹೆಗಡೆ, ವಿವೇಕಾನಂದ ವೈದ್ಯ, ಗಣಪತಿ ನಾಯ್ಕ, ಆರ್.ವಿ.ಹೆಗಡೆ, ಸಿಕಂದರ್ ಸುಂಠಿ, ದೀಪಾ ಸಣ್ಣಲಿಂಗಣ್ಣನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.