ADVERTISEMENT

ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿಕೆಗೆ ವಿಶೇಷಾರ್ಥವಿಲ್ಲ: ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 12:52 IST
Last Updated 22 ಏಪ್ರಿಲ್ 2022, 12:52 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಕಾರವಾರ: ‘ವಿಧಾನಸಭೆ ಚುನಾವಣೆಯಲ್ಲಿ 50 ಮಂದಿ ಸಾಧು ಸಂತರು ಸ್ಪರ್ಧಿಸಲಿದ್ದಾರೆ ಎಂದು ಉಜಿರೆ ಶ್ರೀರಾಮ‌ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಕ್ಕೆ ವಿಶೇಷ ಅರ್ಥವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಅವರ ಭಕ್ತರು. ನಾನು ಅವರೊಂದಿಗೆ ಮಾತನಾಡಿದ್ದೇನೆ. ಅವರ ಭಾವನೆಗಳಿಗೆ ಗೌರವ ಕೊಡುತ್ತೇವೆ, ಅದು ಆಶೀರ್ವಾದವಾಗಿ ನಮ್ಮ ಮೇಲೆ ಪರಿವರ್ತನೆ ಆಗಬೇಕು ಎಂದು ಕೇಳಿದ್ದೇನೆ. ಅದಕ್ಕೆ ಅವರು ಶುಭವಾಗಲಿ ಎಂದಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಬಿ.ಜೆ.ಪಿ.ಯು ರಾಜಧರ್ಮದ ರಾಜಕಾರಣ ಮಾಡುತ್ತದೆ. ಹಿಂದುತ್ವದ ಪ್ರತಿಪಾದನೆ, ಸಾಮಾಜಿಕ ನ್ಯಾಯದ ಒಟ್ಟು ಕಲ್ಪನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಸಾಧು ಸಂತರೆಲ್ಲರೂ ಬಿ.ಜೆ.ಪಿ.ಯನ್ನು ಬೆಂಬಲಿಸಬೇಕಾದ ಅನಿವಾರ್ಯತೆ ಇದೆ ಎಂಬ ಭಾವನೆ ಹೊಂದಿದ್ದಾರೆ. ಆ ಹಿನ್ನೆಲೆಯಲ್ಲಿ ನಾವು ಮತ್ತಷ್ಟು ಪ್ರಖರವಾಗಿ ಕೆಲಸ ಮಾಡಬೇಕು ಎಂಬರ್ಥದಲ್ಲಿ ಸ್ವಾಮೀಜಿ ತಾವು ಸ್ಪರ್ಧೆ ಮಾಡಬೇಕು ಎಂದು ಹೇಳಿದ್ದಾರೆ’ ಎಂದು ಪ್ರತಿಪಾದಿಸಿದರು.

ADVERTISEMENT

ಭಟ್ಕಳದ ಸಾರದ ಹೊಳೆ ಹಳೆಕೋಟೆ ಶ್ರೀಕ್ಷೇತ್ರ ಹನುಮಂತ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸ್ವಾಮೀಜಿ, ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು.

ಸರ್ಕಾರದ ಅಂಗಸಂಸ್ಥೆಗಳು:‘ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಮತ್ತು ನಿರ್ಮಿತಿ ಕೇಂದ್ರಗಳು ಸರ್ಕಾರದ ಅಂಗಸಂಸ್ಥೆಗಳಾಗಿವೆ. ಸರ್ಕಾರದ ಕೆಲಸಗಳು ಯಾವ ಗುಣಮಟ್ಟ ಹೊಂದಿರಬೇಕು ಎಂದು ನಿಯಮವಿದೆಯೋ ಅದರಲ್ಲಿ ಯಾವುದೇ ರಾಜಿಯನ್ನು ಮಾಡಿಕೊಂಡಿಲ್ಲ’ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಇನ್ನುಮುಂದೆ ಎಲ್ಲ ಕೆಲಸಗಳನ್ನು ಸಂಸ್ಥೆಗಳಿಗೆ ವಹಿಸುತ್ತಾರೆ ಎಂಬ ಭಾವನೆ ಕೆಲವರಿಗೆ ಬಂದ ಹಾಗಿದೆ. ಟೆಂಡರ್ ಕರೆಯುವಂತೆ ಒತ್ತಾಯಿಸುತ್ತಿದ್ದಾರೆ. ಗುತ್ತಿಗೆದಾರರ ಭಾವನೆಗಳನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ಧರಿಸಲಿದೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.