ADVERTISEMENT

ನಾಲ್ಕೈದು ದಿನದಲ್ಲಿ ಸಂಚಾರಕ್ಕೆ ಮುಕ್ತ

ಕದ್ರಾ ಜಲಾಶಯದ ಕೆಳಭಾಗದ ಸೇತುವೆಯ ಸಂಪರ್ಕ ರಸ್ತೆ ದುರಸ್ತಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 11:27 IST
Last Updated 22 ಆಗಸ್ಟ್ 2019, 11:27 IST
ಕದ್ರಾ ಜಲಾಶಯದ ಕೆಳಭಾಗದಲ್ಲಿರುವ ಸೇತುವೆಯ ಸಂಪರ್ಕ ರಸ್ತೆಯಲ್ಲಿ ದೊಡ್ಡದಾದ ಹೊಂಡ ಉಂಟಾಗಿರುವುದು.
ಕದ್ರಾ ಜಲಾಶಯದ ಕೆಳಭಾಗದಲ್ಲಿರುವ ಸೇತುವೆಯ ಸಂಪರ್ಕ ರಸ್ತೆಯಲ್ಲಿ ದೊಡ್ಡದಾದ ಹೊಂಡ ಉಂಟಾಗಿರುವುದು.   

ಕಾರವಾರ: ಕದ್ರಾಜಲಾಶಯದಿಂದನಿರಂತರವಾಗಿ ನೀರು ಹರಿಸಿದ ಪರಿಣಾಮ ಹಾನಿಗೀಡಾದ ಕೆಳಭಾಗದ ಸೇತುವೆಯ ರಸ್ತೆ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ರಸ್ತೆಯಲ್ಲಿ ಭಾರಿ ಗಾತ್ರದ ಹೊಂಡಗಳಾಗಿದ್ದು, ಜಲ್ಲಿಕಲ್ಲು, ಸಿಮೆಂಟ್ ಮಿಶ್ರಣ ಹಾಕಿ ಸರಿಪಡಿಸಲಾಗುತ್ತಿದೆ.

ಜಲಾಶಯಕ್ಕೆಒಳಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದ ಕಾರಣ ಹೊರಹರಿವನ್ನು ಏರಿಕೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಹಾಗಾಗಿ ಆ.5ರಿಂದ ಐದು ದಿನ ನಿರಂತರವಾಗಿ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನುಜಲಾಶಯದ10 ಗೇಟ್‌ಗಳಮೂಲಕ ಕಾಳಿ ನದಿಗೆ ಹರಿಸಲಾಯಿತು. ರಭಸವಾಗಿ ನೀರು ಹರಿದ ಪರಿಣಾಮ ಜಲಾಶಯದ ಕೆಳಭಾಗದಲ್ಲಿ ಕುರ್ನಿಪೇಟೆಯ ಭಾಗದಿಂದ ಬರುವ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿತ್ತು. ಹಾಗಾಗಿ ಸಾರ್ವಜನಿಕರ ಲಘು ವಾಹನಗಳನ್ನು ಜಲಾಶಯದ ಮೇಲೆಯೇ ಸಂಚರಿಸಲು ಅವಕಾಶ ನೀಡಲಾಯಿತು.

ಜಲಾಶಯದ ಎದುರು ಮರಗಳ ಕೆಳಗೆ ದ್ವಿಚಕ್ರ ವಾಹನ, ಕಾರುಗಳನ್ನು ಪ್ರವಾಸಿಗರು ನಿಲ್ಲಿಸಿ ಸೆಲ್ಫಿ, ಫೋಟೊ ತೆಗೆದುಕೊಳ್ಳುತ್ತಿದ್ದರು. ಆ ಜಾಗದಲ್ಲಿ ಈಗ ದೊಡ್ಡ ಹೊಂಡ ನಿರ್ಮಾಣವಾಗಿದ್ದು, ಮರಗಳೂ ನೀರು ಪಾಲಾಗಿವೆ.ಅದನ್ನೂ ಕರ್ನಾಟಕ ವಿದ್ಯುಚ್ಛಕ್ತಿ ನಿಗಮದಿಂದ (ಕೆಪಿಸಿಎಲ್) ದುರಸ್ತಿ ಮಾಡಿಸಲಾಗುತ್ತಿದೆ.

ADVERTISEMENT

ಕುರ್ನಿಪೇಟೆ ಮತ್ತುಕದ್ರಾಭಾಗವನ್ನು ಸಂಪರ್ಕಿಸಲು ಈ ಸೇತುವೆ ಅತ್ಯವಶ್ಯಕವಾಗಿದೆ. ಎರಡೂ ಗ್ರಾಮಗಳ ನಡುವೆ ನಿತ್ಯವೂ ಹತ್ತಾರು ವಾಹನಗಳ ಸಂಚಾರವಿದೆ. ಕಾರವಾರದಿಂದ ಸಂಚರಿಸುವ ಬಸ್‌ಗಳೂಇದೇ ಸೇತುವೆಯ ಮೇಲೆ ಸಾಗುತ್ತವೆ. ಕೈಗಾ, ಕೆಪಿಸಿಎಲ್‌ನ ನೂರಾರುಉದ್ಯೋಗಿಗಳೂ ಇದೇ ಸೇತುವೆಯನ್ನು ಅವಲಂಬಿಸಿದ್ದಾರೆ.

ಜಲಾಶಯದ ಮೇಲೆ ಸಾರ್ವಜನಿಕರ ವಾಹನಗಳು ಮುಕ್ತವಾಗಿ ಸಂಚರಿಸುವ ಕಾರಣ ಸುರಕ್ಷತೆಯ ಪ್ರಶ್ನೆಗಳೂ ಮೂಡಿದ್ದವು. ಆದರೆ, ಅನಿವಾರ್ಯವಾದ ಕಾರಣ ಜಿಲ್ಲಾಡಳಿತ ಇದಕ್ಕೆ ಅನುವು ಮಾಡಿಕೊಟ್ಟಿತ್ತು.

‘ದುರಸ್ತಿ ಕಾಮಗಾರಿಗೆ ವೇಗ’:‘ಕದ್ರಾ ಜಲಾಶಯದ ಕೆಳಭಾಗದ ರಸ್ತೆ ಮತ್ತು ಸೇತುವೆಯ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ನಾಲ್ಕೈದು ದಿನಗಳಲ್ಲಿ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ. ಜಿಲ್ಲಾಧಿಕಾರಿ ಸೂಚನೆಯಂತೆ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಲಾಗುವುದು’ ಎಂದು ಕೆಪಿಸಿಎಲ್ ಸಿವಿಲ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶಿವಪ್ರಸಾದ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ನಿರಂತರವಾಗಿ ರಭಸದಿಂದ ನೀರು ಹರಿದರೂ ಸೇತುವೆಯ ಕಂಬಗಳಿಗೆ ಯಾವುದೇ ಹಾನಿಯಾಗಿಲ್ಲ. ಸೇತುವೆಯ ಎರಡೂ ಬದಿಗಳಲ್ಲಿ ಕೆಲವು ರೇಲಿಂಗ್ ತುಂಡಾಗಿವೆ. ಅವುಗಳನ್ನು ಸರಿಪಡಿಸಲಾಗುತ್ತದೆ. ಉಳಿದಂತೆ ಇತರ ಎಲ್ಲ ದುರಸ್ತಿ ಕಾರ್ಯಗಳನ್ನೂ ಮಳೆ ನಿಂತ ಮೇಲೆ ಆರಂಭಿಸಲಾಗುತ್ತದೆ ಎಂದು ಅಧಿಕಾರಿಗಳುಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.