ADVERTISEMENT

ಯಲ್ಲಾಪುರಕ್ಕೆ ಬಿವೈವಿ ಭೇಟಿ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ

ಕೊಲೆಯಾದ ಹಿಂದೂ ಮಹಿಳೆ ಮನೆಗೆ ಬಿವೈವಿ ಭೇಟಿ, ಸರ್ಕಾರದ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 19:57 IST
Last Updated 4 ಜನವರಿ 2026, 19:57 IST
ದಲಿತ ಮಹಿಳೆ ರಂಜಿತಾ ಹತ್ಯೆ ಘಟನೆ ಖಂಡಿಸಿ ಯಲ್ಲಾಪುರ ಪಟ್ಟಣ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಅಂಗಡಿಗಳು ಬಾಗಿಲು ಮುಚ್ಚಿದ್ದವು 
ದಲಿತ ಮಹಿಳೆ ರಂಜಿತಾ ಹತ್ಯೆ ಘಟನೆ ಖಂಡಿಸಿ ಯಲ್ಲಾಪುರ ಪಟ್ಟಣ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಅಂಗಡಿಗಳು ಬಾಗಿಲು ಮುಚ್ಚಿದ್ದವು    

ಯಲ್ಲಾಪುರ (ಉತ್ತರ ಕನ್ನಡ): ‘ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಮುಖ್ಯಮಂತ್ರಿ, ಅಸಮರ್ಥ ಗೃಹ ಸಚಿವರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು. 

ಮುಸ್ಲಿಂ ಯುವಕನಿಂದ ಹತ್ಯೆಯಾದ ರಂಜಿತಾ ಬನ್ಸೊಡೆ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ‘ರಾಜ್ಯವು ಸಮಾಜ ಘಾತುಕರಿಗೆ ಸುರಕ್ಷಿತ ನೆಲೆಯಾಗಿ ಪರಿಣಮಿಸಿದೆ’ ಎಂದು ಹೇಳಿದರು. 

‘ರಾಜಕೀಯ ಹಿತಾಸಕ್ತಿಗಾಗಿ ಪೊಲೀಸರ ಕೈಕಟ್ಟಿ ಹಾಕಲಾಗಿದೆ. ಜಿಹಾದಿ ಮನಸ್ಥಿತಿ ಬಗ್ಗೆ ಮೃದು ಧೋರಣೆ ಮತ್ತು ಸಹಾನುಭೂತಿ ಹೊಂದಿರುವ ಆಡಳಿತದ ಅಡಿಯಲ್ಲಿ, ಸಮಾಜಘಾತುಕರಿಗೆ ಏನು ಬೇಕಾದರೂ ಮಾಡಬಹುದು ಎನ್ನುವ ಧೈರ್ಯ ಬಂದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ADVERTISEMENT

‘ಹತ್ಯೆಯಾದ ದಲಿತ ಮಹಿಳೆ ಕುಟುಂಬಕ್ಕೆ ಬಿಜೆಪಿ ರಾಜ್ಯ ಘಟಕದಿಂದ ₹5 ಲಕ್ಷ ಪರಿಹಾರ ನೀಡಿದ್ದೇವೆ. ರಾಜ್ಯ ಸರ್ಕಾರ ಅವರ ಕುಟುಂಬಕ್ಕೆ ಕನಿಷ್ಠ ₹50 ಲಕ್ಷ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ರಂಜಿತಾ ಹತ್ಯೆ ಖಂಡಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಯಲ್ಲಾಪುರ ಬಂದ್‌ಗೆ ಸ್ಪಂದನೆ ಸಿಕ್ಕಿತು.

ಮೃತರ ಮನೆಗೆ ಭೇಟಿ ನೀಡಿದ್ದ ಶಾಸಕ ಶಿವರಾಮ ಹೆಬ್ಬಾರ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾದ ₹8.5 ಲಕ್ಷ ಪರಿಹಾರ ಮೊತ್ತದ ಚೆಕ್ ಅನ್ನು ಮೃತರ ಕುಟುಂಬದವರಿಗೆ ಹಸ್ತಾಂತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.