ADVERTISEMENT

ಉಪಚುನಾವಣೆ|ಯಲ್ಲಾಪುರ ಕ್ಷೇತ್ರದಲ್ಲಿ ಮೂಡಿದ ಸಂಚಲನ ಹೆಬ್ಬಾರ್ ಬೆಂಬಲಿಗರು ಗಲಿಬಿಲಿ

ಸಂಧ್ಯಾ ಹೆಗಡೆ
Published 1 ಡಿಸೆಂಬರ್ 2019, 10:56 IST
Last Updated 1 ಡಿಸೆಂಬರ್ 2019, 10:56 IST
ಯಲ್ಲಾಪುರ ವಿಧಾನಸಭಾ ಕ್ಷೇತ್ರ
ಯಲ್ಲಾಪುರ ವಿಧಾನಸಭಾ ಕ್ಷೇತ್ರ   

ಶಿರಸಿ: ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ ವಲಯದಲ್ಲಿ ಸಂಚಲನ ಮೂಡಿದೆ. ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಶಿವರಾಮ ಹೆಬ್ಬಾರ್ ಹಾಗೂ ಅವರ ಬೆಂಬಲಿಗರು ವಿಚಲಿತರಾಗಿದ್ದಾರೆ.

ಶಾಸಕರ ಅನರ್ಹತೆ ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣದ ವಿಚಾರಣೆ ಸೋಮವಾರ ನಡೆಯಲಿದೆ. ಕೋರ್ಟ್ ತೀರ್ಮಾನ ಹೊರಬೀಳುವ ಮುನ್ನವೇ ಚುನಾವಣೆ ಪ್ರಕಟಗೊಂಡಿರುವುದರಿಂದ ಹೆಬ್ಬಾರ್ ಗಲಿಬಿಲಿಗೊಂಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ನಡೆದ ಅಪೆಕ್ಸ್ ಬ್ಯಾಂಕ್ ಸರ್ವಸಾಧಾರಣ ಸಭೆಯಲ್ಲಿ ಭಾಗವಹಿಸಿದ್ದ ಹೆಬ್ಬಾರ್ ಅವರು, ಉಪಚುನಾವಣೆಯ ದಿನಾಂಕ ಘೋಷಣೆಯಾದ ವಿಷಯ ತಿಳಿದು, ತಕ್ಷಣ ಅಲ್ಲಿಂದ ಹೊರಟು, ವಕೀಲರನ್ನು ಭೇಟಿ ಮಾಡಿ ಸಲಹೆ ಪಡೆದರು ಎಂದು ಅವರ ಆಪ್ತ ಮೂಲಗಳಿಂದ ಗೊತ್ತಾಗಿದೆ.

‘ತೆರವಾದ ಕ್ಷೇತ್ರಕ್ಕೆ ಆರು ತಿಂಗಳೊಳಗೆ ಚುನಾವಣೆ ನಡೆಯಬೇಕೆಂಬ ನಿಯಮವಿದೆ. ಆದರೆ, ಇಷ್ಟು ಬೇಗ ಚುನಾವಣೆ ಬರಬಹುದೆಂದು ನಿರೀಕ್ಷಿಸಿರಲಿಲ್ಲ. ಸೋಮವಾರ ವಿಚಾರಣೆಗೆ ಬರುವ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಬಹುದೆಂಬ ವಿಶ್ವಾಸವಿದೆ. ಒಂದೊಮ್ಮೆ ಕೋರ್ಟ್ ವಿಚಾರಣೆಯನ್ನು ಮುಂದೂಡಿದರೆ ಎಂಬ ಆತಂಕವೂ ಇದೆ. ವಿಚಾರಣೆ ಮುಂದಕ್ಕೆ ಹೋದರೆ, ನಮ್ಮ ನಾಯಕರಾದ ಶಿವರಾಮ ಹೆಬ್ಬಾರ್ ಅವರಿಗೆ ಸ್ಪರ್ಧಿಸಲು ಅವಕಾಶವಾಗುವ ಸಾಧ್ಯತೆ ಕಡಿಮೆ’ ಎಂದು ಅವರ ಬೆಂಬಲಿಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ಪರ್ಯಾಯ ಯಾರು ?:

‘ಒಂದೊಮ್ಮೆ ಶಿವರಾಮ ಹೆಬ್ಬಾರ್ ಅವರಿಗೆ ಸ್ಪರ್ಧಿಸಲು ಸಾಧ್ಯವಾಗದಿದ್ದರೆ, ಅವರ ಮಗ ವಿವೇಕ ಹೆಬ್ಬಾರ್ ಸ್ಪರ್ಧಿಸುವ ಸಾಧ್ಯತೆಯಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಬಿಜೆಪಿ ಜತೆ ಮಾತುಕತೆ ನಡೆಸುವಾಗಲೇ ಈ ಒಪ್ಪಂದವಾಗಿದೆ. ಅನರ್ಹಗೊಂಡಿರುವರಿಗೆ ಸ್ಪರ್ಧಿಸಲು ತೊಂದರೆಯಾದರೆ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆಯಂತೆ, ಅವರ ಮಗನಿಗೆ ಬಿಜೆಪ ಟಿಕೆಟ್ ನೀಡಬಹುದು’ ಎಂದು ಅವರು ಪ್ರತಿಕ್ರಿಯಿಸಿದರು.

ಹೆಬ್ಬಾರ್ ಕಾಂಗ್ರೆಸ್ ಬಿಟ್ಟಿದ್ದು ಪಕ್ಷಕ್ಕೆ ನಷ್ಟವಾಗಿಲ್ಲ. ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸುವ ವಿಶ್ವಾಸವಿದೆ. ಹೆಬ್ಬಾರ್ ಮಾಡಿದ ಪಕ್ಷ ದ್ರೋಹದಿಂದ ಉಪಚುನಾವಣೆ ನಡೆಯುವಂತಾಗಿದೆ. ಮೂರು ಕಡೆಗಳಲ್ಲಿ ಹೊಸ ಬ್ಲಾಕ್ ಅಧ್ಯಕ್ಷರನ್ನು ನೇಮಿಸಲಾಗಿದೆ. ಘಟಕಗಳು, ಬೂತ್ ಮಟ್ಟದಲ್ಲಿ ಸಂಘಟನೆ ಮಾಡಲಾಗುತ್ತಿದೆ. ಪಕ್ಷ ಉಪಚುನಾವಣೆಗೆ ಸಿದ್ಧವಾಗಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು. ಕಾಂಗ್ರೆಸ್‌ನಿಂದ ಹೊರಬಿದ್ದಿರುವ ಹೆಬ್ಬಾರ್ ಬಿಜೆಪಿಯಲ್ಲಿ ನೇರವಾಗಿ ಗುರುತಿಸಿಕೊಳ್ಳದ ಕಾರಣ, ಬಿಜೆಪಿ ಕಾರ್ಯಕರ್ತರು ತಟಸ್ಥರಾಗಿದ್ದಾರೆ.

ಉ‍ಪಚುನಾವಣೆ ಘೋಷಣೆಯಾಗಿರುವ ಸಂಬಂಧ ಶಿವರಾಮ ಹೆಬ್ಬಾರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಮೊಬೈಲ್ ಕರೆಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.