ಕಾರವಾರ: ತಿಂಗಳ ಹಿಂದಷ್ಟೇ ಕಾರವಾರದಲ್ಲಿ 49 ವರ್ಷದ ಉಪ ವಲಯ ಅರಣ್ಯಾಧಿಕಾರಿಗೆ ಹೃದಯಾಘಾತವಾಯಿತು. ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಅಸುನೀಗಿದ್ದರು. ತುರ್ತು ಚಿಕಿತ್ಸೆಗೆ ಇಲ್ಲಿನ ಆಸ್ಪತ್ರೆಗಳಲ್ಲಿ ವ್ಯವಸ್ಥೆಯೇ ಇರಲಿಲ್ಲ.
ಇದು ಕೇವಲ ಒಬ್ಬರ ಸಂಕಷ್ಟವಲ್ಲ. ಹೃದ್ರೋಗ ಪೀಡಿತರು ಮತ್ತು ಹೃದಯಾಘಾತಕ್ಕೆ ತುತ್ತಾದವರು ಎದುರಿಸುವ ಸಮಸ್ಯೆಯಿದು. ಹೃದ್ರೋಗದ ಚಿಕಿತ್ಸೆಗೆ 220 ಕಿ.ಮೀ ದೂರದ ಮಂಗಳೂರು, 100 ಕಿ.ಮೀ ದೂರದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕು.
ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವಂತೆ ಎರಡು ವರ್ಷಗಳ ಹಿಂದೆ ತೀವ್ರ ಸ್ವರೂಪದ ಹೋರಾಟ ನಡೆದಿತ್ತು. ಆದರೆ, ಈವರೆಗೆ ಬೇಡಿಕೆ ಈಡೇರಿಲ್ಲ. ಹೃದ್ರೋಗಕ್ಕೆ ಚಿಕಿತ್ಸೆ ಒದಗಿಸಲು ಕ್ಯಾಥ್ ಲ್ಯಾಬ್ ಸೌಲಭ್ಯವನ್ನೂ ಇಲ್ಲಿ ಕಲ್ಪಿಸಲಾಗಿಲ್ಲ.
ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹೃದ್ರೋಗ ತಜ್ಞರು (ಕಾರ್ಡಿಯಾಲಜಿಸ್ಟ್) ಇಲ್ಲ. ಜಿಲ್ಲಾ ಕೇಂದ್ರ ಕಾರವಾರದಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್) ಆರಂಭಗೊಂಡು 9 ವರ್ಷಗಳಾಗಿವೆ. ಈವರೆಗೆ ಇಲ್ಲಿ ಹೃದ್ರೋಗ ತಜ್ಞರ ನೇಮಕವಾಗಿಲ್ಲ. ಕೆಲ ತಿಂಗಳ ಹಿಂದೆ ನೇಮಕಗೊಂಡಿದ್ದ ತಜ್ಞ ವೈದ್ಯರೊಬ್ಬರು ಹೆಚ್ಚು ದಿನ ಇಲ್ಲಿ ಕಾರ್ಯನಿರ್ವಹಿಸಲಿಲ್ಲ.
‘ಹೃದಯಾಘಾತ ಸಂಭವಿಸಿದ 6 ಗಂಟೆಯೊಳಗೆ ಆಸ್ಪತ್ರೆಗೆ ಕರೆತಂದರೆ, ರಕ್ತ ಹೆಪ್ಪುಗಟ್ಟದಂತೆ ತುರ್ತು ಚಿಕಿತ್ಸೆ ನೀಡುವ ಸೌಲಭ್ಯ ಜಿಲ್ಲೆಯಲ್ಲಿದೆ. ಆದರೆ, ಆ್ಯಂಜಿಯೊಪ್ಲಾಸ್ಟಿ ಸೇರಿ ಗಂಭೀರ ಹೃದ್ರೋಗ ಸಮಸ್ಯೆ ಸಂಬಂಧಿಸಿದ ಚಿಕಿತ್ಸೆಗೆ ಕ್ಯಾಥ್ ಲ್ಯಾಬ್ ಸೌಲಭ್ಯ ಬೇಕು’ ಎಂದು ಕಾರ್ಡಿಯೊ ಫಿಸಿಶಿಯನ್ ಡಾ.ಕೀರ್ತಿ ನಾಯ್ಕ ತಿಳಿಸಿದರು.
ಹೃದ್ರೋಗ ಸಮಸ್ಯೆಗೆ ತಾತ್ಕಾಲಿಕ ಚಿಕಿತ್ಸೆ ಒದಗಿಸಲು ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸೌಲಭ್ಯಗಳಿವೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲೂ ಹೃದ್ರೋಗ ತಜ್ಞರು ಇಲ್ಲಡಾ.ನೀರಜ್ ಬಿ.ವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಉತ್ತರ ಕನ್ನಡ
17 ಬಾರಿ ಸಂದರ್ಶನ ಕರೆದರೂ ವೈದ್ಯರು ಬಂದಿಲ್ಲ!
‘ಕ್ರಿಮ್ಸ್‌ನಲ್ಲಿ ಹೃದ್ರೋಗ ತಜ್ಞರ ಹುದ್ದೆ ಸೇರಿ ಹಲವು ತಜ್ಞ ಹುದ್ದೆಗಳ ಭರ್ತಿಗೆ ಪ್ರತಿ ಬಾರಿ ಸಂದರ್ಶನ ಕರೆದಾಗಲೂ ವೈದ್ಯರು ಬರುತ್ತಿಲ್ಲ. ತಜ್ಞರ ನೇಮಕಕ್ಕೆ 17 ಬಾರಿ ಸಂದರ್ಶನ ನಡೆಸಿದ್ದೇವೆ. ಮಂಜೂರಾದ 254 ಹುದ್ದೆಗಳ ಪೈಕಿ 94 ಹುದ್ದೆಗಳಷ್ಟೇ ಭರ್ತಿಯಾಗಿವೆ’ ಎಂದು ಕ್ರಿಮ್ಸ್ ನಿರ್ದೇಶಕಿ ಡಾ.ಪೂರ್ಣಿಮಾ ಆರ್.ಟಿ ಅವರು ಈಚೆಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಸ್ಯೆ ತೋಡಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.