ADVERTISEMENT

ಎಪಿಎಂಸಿಗೆ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲು

ಅಧ್ಯಕ್ಷ ಸುನೀಲ್ ನಾಯ್ಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 12:48 IST
Last Updated 5 ಅಕ್ಟೋಬರ್ 2019, 12:48 IST

ಶಿರಸಿ: ಇಲ್ಲಿನ ಎಪಿಎಂಸಿ ಆವರಣದ ಸುರಕ್ಷತೆ ದೃಷ್ಟಿಯಿಂದ ಮೂರು ದಿಕ್ಕುಗಳಲ್ಲಿ ಗೇಟ್ ಅಳವಡಿಸುವ ಜತೆಗೆ, ಸುಮಾರು 22 ಕಡೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರ ಅಳವಡಿಸಲಾಗುತ್ತಿದೆ ಎಂದು ಅಧ್ಯಕ್ಷ ಸುನೀಲ್ ನಾಯ್ಕ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೂರು ಕಡೆಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗುತ್ತದೆ. ಹೈಮಾಸ್ಟ್ ದೀಪ ಮತ್ತು ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವ ಸಂಬಂಧ ₹ 12 ಲಕ್ಷದ ಎರಡು ಪ್ರತ್ಯೇಕ ಟೆಂಡರ್ ಮಾಡಲಾಗಿದೆ. ಹುಬಳ್ಳಿ ರಸ್ತೆ, ಯಲ್ಲಾಪುರ ರಸ್ತೆ ಕಡೆಯಿಂದ ಹಾಗೂ ಪಿ.ಎಲ್.ಡಿ ಬ್ಯಾಂಕ್ ಎದುರು ಈ ಮೂರು ಕಡೆಗಳಲ್ಲಿ ಗೇಟ್ ಮಾಡಲಾಗುತ್ತದೆ. ಎಪಿಎಂಸಿ ಆವರಣದಲ್ಲಿರುವ ವ್ಯಾಪಾರಸ್ಥರ ಜೊತೆ ಚರ್ಚಿಸಿ, ರಾತ್ರಿ ಇವುಗಳ ಬಾಗಿಲು ಹಾಕುವ ಸಮಯ ನಿಗದಿಪಡಿಸಲಾಗುವುದು. ನಂತರದ ಅವಧಿಯಲ್ಲಿ ರಿಂಗ್ ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶವಿರುತ್ತದೆ’ ಎಂದರು.

ಹೊಸ ಕಾಂಪೌಂಡ್ ನಿರ್ಮಾಣವನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ. ಹೆಚ್ಚುವರಿ ಅನುದಾನಕ್ಕೆ ಬೇಡಿಕೆಯಿಡಲಾಗಿದೆ. ವ್ಯಾಪಾರಸ್ಥರ ಅನುಕೂಲಕ್ಕೆ ನಾಲ್ಕು ಗೋಡಾನ್, ನಾಲ್ಕು ಸಣ್ಣ ಮಳಿಗೆಗಳನ್ನು ನಿರ್ಮಿಸಲಾಗಿದೆ. ದಾಸನಕೊಪ್ಪದಲ್ಲಿ ಎಂಟು ಮಳಿಗೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗುವುದು. ಮಳೆನೀರು ಇಂಗಿಸುವಿಕೆ ವ್ಯವಸ್ಥೆ ಅಳವಡಿಸಲಾಗುತ್ತಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈತಭವನವನ್ನು ಇನ್ನಷ್ಟು ವ್ಯವಸ್ಥಿತಗೊಳಿಸಲಾಗುವುದು. ಇದರ ಆವರಣದಲ್ಲಿ ರೋಟರಿ ಕ್ಲಬ್ ಹಿರಿಯ ನಾಗರಿಕರ ಜಿಮ್ ಯಂತ್ರಗಳನ್ನು ಅಳವಡಿಸಿದೆ ಎಂದು ಹೇಳಿದರು.

ADVERTISEMENT

2019–20ನೇ ಸಾಲಿನಲ್ಲಿ ₹ 5.96 ಕೋಟಿ ಕ್ರಿಯಾಯೋಜನೆ ತಯಾರಿಸಲಾಗಿದೆ. ಅದರಲ್ಲಿ ₹ 2.35 ಕೋಟಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಎಪಿಎಂಸಿ ಕಚೇರಿ ಹಿಂಭಾಗದಲ್ಲಿ ₹ 60 ಲಕ್ಷದಲ್ಲಿ ಸಭಾಭವನ ನಿರ್ಮಾಣವಾಗಲಿದೆ. ಕಳೆದ ವರ್ಷ ಮಾರುಕಟ್ಟೆ ಶುಲ್ಕದ ಗುರಿ ₹ 8.64 ಕೋಟಿ ಇತ್ತು. ಈ ವರ್ಷ ಈವರೆಗೆ ₹ 6.43 ಕೋಟಿ ಶುಲ್ಕ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಕೆರಿಯಾ ಬೋರಕರ, ಸದಸ್ಯರಾದ ಗುರುಪಾದ ಹೆಗಡೆ, ಪ್ರಶಾಂತ ಗೌಡ, ಲಕ್ಷ್ಮಿನಾರಾಯಣ ಹೆಗಡೆ, ವಿಶ್ವನಾಥ ಶೀಗೆಹಳ್ಳಿ, ಧನಂಜಯ ಸಾಕಣ್ಣನವರ್, ಮಾರುತಿ ನಾಯ್ಕ, ವಿಮಲಾ ಹೆಗಡೆ ಇದ್ದರು.

ಸುಪರ್‌ ಮಾರ್ಕೆಟ್‌ಗೆ ಅನುಮತಿ ನೀಡಿಲ್ಲ
ಟಿಎಸ್‌ಎಸ್‌ ಸಂಸ್ಥೆಯು ಸುಪರ್ ಮಾರ್ಕೆಟ್ ನಡೆಸಲು ಎಪಿಎಂಸಿ ಅನುಮತಿ ನೀಡಿಲ್ಲ. ಕಟ್ಟಡ ನಿರ್ಮಾಣಕ್ಕೆ ಮಾತ್ರ ಎಪಿಎಂಸಿ ಅನುಮತಿ ನೀಡಿದೆ. ಎಪಿಎಂಸಿ ವ್ಯಾಪ್ತಿಯಲ್ಲಿ ಟಿಎಸ್‌ಎಸ್‌ಗೆ ಸೇರಿದ ನಾಲ್ಕು ಗುಂಟೆ ಜಾಗವೂ ಇದೆ. ಹೀಗಾಗಿ, ಈ ಸಂಬಂಧ ಕಾನೂನು ಸಲಹೆ ಪಡೆದು, ಕೇಂದ್ರ ಕಚೇರಿಗೆ ವರದಿಯನ್ನು ಸಲ್ಲಿಸಲಾಗಿದೆ ಎಂದು ಅಧ್ಯಕ್ಷ ಸುನೀಲ್ ನಾಯ್ಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.