ಪ್ರಣವಾನಂದ ಸ್ವಾಮೀಜಿ
ಕಾರವಾರ: 'ದೇಶದ ಉಳಿದ ರಾಜ್ಯಗಳಲ್ಲಿ ಇಲ್ಲದ ಸಿ.ಡಿ, ಪೆನ್ ಡ್ರೈವ್ ರಾಜಕೀಯ ಕರ್ನಾಟಕದಲ್ಲಿ ಮಾತ್ರ ವಿಜೃಂಭಿಸುತ್ತಿದೆ. ಇಂತ ರಾಜಕಾರಣ ರಾಜ್ಯಕ್ಕೆ ಅಂಟಿದ ಶಾಪ' ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಟೀಕಿಸಿದರು.
'ವೈಯಕ್ತಿಕ ವಿಚಾರವನ್ನು ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳುವುದು ಯಾವ ಪಕ್ಷಗಳಿಗೂ ಶೋಭೆ ತರದು. ಬೇಕಾದರೆ ಸಿದ್ಧಾಂತದ ಮೇಲೆ ರಾಜಕಾರಣ ಮಾಡಲಿ' ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಚ್.ಡಿ.ದೇವೆಗೌಡ, ಎಚ್.ಡಿ.ಕುಮಾರಸ್ವಾಮಿ ಅವರ ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗುತ್ತಿದೆ. ವೈಯಕ್ತಿಕ ವಿಚಾರ ರಾಜಕೀಯಕ್ಕೆ ಬಳಸುತ್ತಿದ್ದರೆ ಈ ಪ್ರಕರಣದಲ್ಲಿ ಜೆಡಿಎಸ್ ಪಕ್ಷಕ್ಕೆ ಯಾವ ಮಟ್ಟದ ಹಾನಿ ಆಗಿದೆಯೊ ಅಷ್ಟೇ ಹಾನಿಯನ್ನು ಕಾಂಗ್ರೆಸ್ ಕೂಡ ಭವಿಷ್ಯದಲ್ಲಿ ಅನುಭವಿಸಲಿದೆ' ಎಂದು ಎಚ್ಚರಿಸಿದರು.
'ವಿಧಾನ ಪರಿಷತ್ ಚುನಾವಣೆಗೆ ಉತ್ತರ ಕನ್ನಡ ಜಿಲ್ಲೆಯ ನಾಮಧಾರಿ ಸಮುದಾಯದವರಿಗೆ ಕಾಂಗ್ರೆಸ್ ಅವಕಾಶ ಮಾಡಿಕೊಡಬೇಕು. ಜಿಲ್ಲೆಯ ರವೀಂದ್ರ ನಾಯ್ಕ, ಸಿ.ಎಫ್.ನಾಯ್ಕ ಅವರಲ್ಲಿ ಒಬ್ಬರಿಗೆ ಅವಕಾಶ ನೀಡುವುದು ಸೂಕ್ತ' ಎಂದರು.
'ಲೋಕಸಭೆ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಕಾಂಗ್ರೆಸ್ ನಾಮಧಾರಿ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಸದೆ ಅನ್ಯಾಯ ಮಾಡಿದೆ. ನಾಮಧಾರಿ ಸಮುದಾಯದ ನಾಯಕರನ್ನು ಮೂಲೆಗುಂಪು ಮಾಡುವ ಕೆಲಸ ಕಾಂಗ್ರೆಸ್ ನಲ್ಲಿ ನಡೆಯುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಸಚಿವ, ನಿಗಮ ಮಂಡಳಿ ಸ್ಥಾನ ನೀಡಲಾಗಿತ್ತು. ಕಾಂಗ್ರೆಸ್ ನಿರೀಕ್ಷಿತ ಸ್ಥಾನ ಕೊಡುತ್ತಿಲ್ಲ' ಎಂದರು.
'ಚುನಾವಣೆ ಮುಗಿದ ಬಳಿಕ ಈ ಸರ್ಕಾರ ಇರುತ್ತದೆಯೊ, ಇಲ್ಲವೊ ಎಂಬುದೂ ಅರ್ಥವಾಗುತ್ತಿಲ್ಲ' ಎಂದು ವ್ಯಂಗ್ಯವಾಡಿದರು.
'ಬ್ರಹ್ಮಶ್ರೀ ನಾರಾಯಣಗುರು ನಿಗಮಕ್ಕೆ ಈವರೆಗೂ ಅನುದಾನ ನೀಡಿಲ್ಲ. ಸಿದ್ದರಾಮಯ್ಯ ಮಂಡಿಸಿದ ಎರಡೂ ಬಜೆಟ್ ನಲ್ಲಿ ಈ ನಿಗಮಕ್ಕೆ ನಯಾಪೈಸೆಯೂ ಅನುದಾನ ನೀಡಿಲ್ಲ' ಎಂದರು.
ಮಂಡಳಿಯ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.