ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಹುದ್ದೆಗಳೇ ಅಧಿಕ !

ಇಲಾಖೆಯ 9 ತಾಲ್ಲೂಕುಗಳಲ್ಲಿ ಸಿಡಿಪಿಒ ಹುದ್ದೆ ಖಾಲಿ

ಸಂಧ್ಯಾ ಹೆಗಡೆ
Published 16 ಅಕ್ಟೋಬರ್ 2018, 19:46 IST
Last Updated 16 ಅಕ್ಟೋಬರ್ 2018, 19:46 IST

ಶಿರಸಿ: ಮಹಿಳೆ ಮತ್ತು ಮಕ್ಕಳ ಸಬಲೀಕರಣ, ಅಂಗನವಾಡಿಗಳ ಸರ್ವಾಂಗೀಣ ಪ್ರಗತಿ ನೋಡಿಕೊಳ್ಳುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಕೊರತೆಯಿಂದ ಬಳಲುತ್ತಿದೆ. ಜಿಲ್ಲೆಯ 9 ತಾಲ್ಲೂಕುಗಳಲ್ಲಿ ಸಿಡಿಪಿಒ ಹುದ್ದೆಗಳು ಖಾಲಿ ಇವೆ.

ಸಮಾಜದ ಕಟ್ಟಕಡೆಯ ವರ್ಗದ ಮಹಿಳೆಯರು, ಮಕ್ಕಳ ರಕ್ಷಣೆ, ಶಿಕ್ಷಣದ ಅರಿವು ಮೂಡಿಸುವ ಉದ್ದೇಶದೊಂದಿಗೆ ಕೆಲಸ ಮಾಡುವ ಇಲಾಖೆಯೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಆರು ವರ್ಷದ ಒಳಗಿನ ಮಕ್ಕಳ ಆರೋಗ್ಯ, ಪೌಷ್ಟಿಕತೆ ಮಟ್ಟವನ್ನು ಹೆಚ್ಚಿಸುವ ಸಮಗ್ರ ಶಶಿ ಅಭಿವೃದ್ಧಿ ಯೋಜನೆ, ಸ್ತ್ರೀಶಕ್ತಿ, ಕಿಶೋರಿ ಶಕ್ತಿ, ಮಾತೃಪೂರ್ಣ, ಸಾಂತ್ವನ ಮೊದಲಾದ ಯೋಜನೆಗಳು ಈ ಇಲಾಖೆಯ ಮೂಲಕವೇ ಅನುಷ್ಠಾನಗೊಳ್ಳುತ್ತವೆ.

ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚು ಅಂಗನವಾಡಿಗಳಿವೆ. ಅವುಗಳ ನಿರ್ವಹಣೆ, ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಣೆ, ಅಂಗನವಾಡಿಗಳಿಗೆ ಆಹಾರ ಪೂರೈಕೆ ಮತ್ತಿತರ ಚಟುವಟಿಕೆಗಳು ತಾಲ್ಲೂಕು ಕಚೇರಿಯ ವ್ಯಾಪ್ತಿಯಲ್ಲಿ ಬರುತ್ತವೆ. ಇವೆಲ್ಲದರ ಉಸ್ತುವಾರಿ ನೋಡಿಕೊಳ್ಳುವ ಸಿಪಿಡಿಒ ಹುದ್ದೆ, ಕಾರವಾರ ಮತ್ತು ಮುಂಡಗೋಡ ಹೊರತುಪಡಿಸಿ ಇನ್ನುಳಿದ 9 ತಾಲ್ಲೂಕುಗಳಲ್ಲಿ, ತಾಲ್ಲೂಕು ಮಟ್ಟದ ಅಧಿಕಾರಿ ಹುದ್ದೆಯನ್ನು ಪ್ರಭಾರಿಗಳು ನಿರ್ವಹಿಸುತ್ತಿದ್ದಾರೆ.

ADVERTISEMENT

ಜಿಲ್ಲೆಯ 108 ಮೇಲ್ವಿಚಾರಕರ ಹುದ್ದೆಗಳಲ್ಲಿ 20 ಹುದ್ದೆಗಳು ಖಾಲಿ ಇವೆ. ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಯೋಜನಾ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಹಿರಿಯ ಅಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಅಂಗವಿಕಲರ ಅಧಿಕಾರಿ ಹುದ್ದೆ ಖಾಲಿ ಇವೆ. ಈ ಎಲ್ಲ ಹುದ್ದೆಗಳ ಜವಾಬ್ದಾರಿ ಉಪನಿರ್ದೇಶಕರ ಹೆಗಲ ಮೇಲಿದೆ.

‘ತಾಲ್ಲೂಕಿನಲ್ಲಿ 350ಕ್ಕೂ ಹೆಚ್ಚು ಅಂಗನವಾಡಿಗಳು ಇವೆ. ಐದು ವರ್ಷಗಳಿಂದ ಇಲ್ಲಿನ ಸಿಡಿಪಿಒ ಹುದ್ದೆಗೆ ಕಾಯಂ ಅಧಿಕಾರಿ ನೇಮಕ ಆಗುತ್ತಿಲ್ಲ. ಮೂರು ತಿಂಗಳ ಹಿಂದೆ ಸಿಡಿಪಿಒ ಹುದ್ದೆ ಭರ್ತಿಯಾಗಿತ್ತಾದರೂ, ನಿವೃತ್ತಿಗೆ ಎರಡು ತಿಂಗಳು ಇರುವಾಗ ಬಂದಿದ್ದ ಅಧಿಕಾರಿ ಕಳೆದ ತಿಂಗಳು ನಿವೃತ್ತರಾದರು. ಇಲಾಖೆಯ ಮಹತ್ವದ ಮಾಹಿತಿ ಪಡೆಯಲು ಕಾಯಂ ಅಧಿಕಾರಿ ಇರಬೇಕು. ಪ್ರಭಾರಿ ಅಧಿಕಾರಿಗಳಿಂದ ಜವಾಬ್ದಾರಿಯುತ ಉತ್ತರ ಪಡೆಯಲು ಕಷ್ಟವಾಗುತ್ತದೆ’ ಎನ್ನುತ್ತಾರೆ ಶಿರಸಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ.

‘ಸಿಡಿಪಿಒ ಹುದ್ದೆ ಭರ್ತಿ ಮಾಡುವಂತೆ ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ಚರ್ಚಿಸಿ, ಸರ್ಕಾರಕ್ಕೆ ವಿನಂತಿಸಲಾಗಿತ್ತು. ತಾಲ್ಲೂಕಿನ ಅಂಗನವಾಡಿಗಳಿಗೆ ಆಹಾರ ಪೂರೈಕೆ ವಿಳಂಬವಾಗುತ್ತಿದೆ. ಇದರ ಬಗ್ಗೆ ಪ್ರಶ್ನಿಸಲು ಕಾಯಂ ಅಧಿಕಾರಿ ಇದ್ದರೆ ಅನುಕೂಲವಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.