ADVERTISEMENT

ಹೆದ್ದಾರಿಯ ಮಧ್ಯಗೆರೆ ಬದಲು: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 14:09 IST
Last Updated 6 ಅಕ್ಟೋಬರ್ 2022, 14:09 IST
ಬಿ.ಜಿ.ಸಾವಂತ್
ಬಿ.ಜಿ.ಸಾವಂತ್   

ಕಾರವಾರ: ‘ತಾಲ್ಲೂಕಿನ ಮಾಜಾಳಿ ಸೇರಿದಂತೆ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯ ವೇಳೆ ಮಧ್ಯದ ಗೆರೆಯನ್ನು ಬದಲಿಸಿದ್ದಾರೆ. ಇದರಿಂದ ಹಲವರ ಮನೆಗಳ ಆವರಣ, ಗೋಡೆಗಳು ತೆರವಾಗಲಿವೆ. ಸ್ಥಳೀಯರಲ್ಲಿ ಗೊಂದಲ ಉಂಟಾಗಿದ್ದು, ಬಗೆಹರಿಸಬೇಕು’ ಎಂದು ಸಾಮಾಜಿಕ ಹೋರಾಟಗಾರ ಬಿ.ಜಿ.ಸಾವಂತ್ ಒತ್ತಾಯಿಸಿದ್ದಾರೆ.

‌ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಮನೆಯ ಆವರಣವನ್ನು ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಿಂದ ಸ್ವಾಧೀನ ಪಡಿಸಿಕೊಂಡಿಲ್ಲ. ಆದರೆ, ರಸ್ತೆ ವಿಸ್ತರಣೆಗೆಂದು ಗುರುತು ಮಾಡಿದ್ದಾರೆ. ಈ ರೀತಿ ಜಿಲ್ಲೆಯ ವಿವಿಧೆಡೆ ಆಗಿದೆ’ ಎಂದರು.

‘ಮಾಜಾಳಿಯಲ್ಲಿ 97.550ನೇ ಕಿಲೋಮೀಟರ್‌ನಿಂದ ಹೆದ್ದಾರಿಯ ಮಧ್ಯ ಗೆರೆಯನ್ನು ಬದಲಿಸಿದ್ದಾರೆ. ಮಾಜಾಳಿಯ ರಾಮನಾಥ ವೃತ್ತದ ಬಳಿ 60 ಮೀಟರ್ ಭೂ ಸ್ವಾಧಿನವಾಗಿದೆ. ಅಲ್ಲಿರುವ ಮನೆಯೊಂದು ಶೇ 90ರಷ್ಟು ಭಾಗ ತೆರವಾಗಲಿದೆ. ಆದರೆ, ಅದರ ಮಾಲೀಕರಿಗೆ ಶೇ 15ರಷ್ಟು ಪರಿಹಾರ ಕೊಡಲಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಭೂ ಸ್ವಾಧೀನಾಧಿಕಾರಿ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಹೆದ್ದಾರಿಯ ಕೆಲವೆಡೆ 30 ಮೀಟರ್‌ಗಳಷ್ಟೇ ವಿಸ್ತರಣೆ ಮಾಡಲಾಗಿದೆ. ಕೆಲವೆಡೆ 45 ಮೀಟರ್ ತೆಗೆದುಕೊಳ್ಳಲಾಗಿದೆ. ಹೆದ್ದಾರಿಯ ಉದ್ದಕ್ಕೂ ಒಂದೇ ರೀತಿ ಮಾಡಬೇಕಲ್ಲ’ ಎಂದು ಪ್ರಶ್ನಿಸಿದರು.

ಪ್ರಮುಖರಾದ ಚೇತನ ನಾಯಕ, ರಾಮದಾಸ್ ಕಾರವಾರಕರ್, ಪ್ರಶಾಂತ ಗಾಂವ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.