ADVERTISEMENT

ಪೌರ ಕಾರ್ಮಿಕರ ಶ್ರಮದ ಅರಿವಿರಲಿ: ರಾಜು ಮೊಗವೀರ

ಪೌರ ಕಾರ್ಮಿಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 16:09 IST
Last Updated 23 ಸೆಪ್ಟೆಂಬರ್ 2022, 16:09 IST
ಕಾರವಾರದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ನಗರಸಭೆ ಆಯುಕ್ತ ಆರ್.ಪಿ.ನಾಯ‌್ಕ, ಸದಸ್ಯರು ಇದ್ದಾರೆ
ಕಾರವಾರದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ನಗರಸಭೆ ಆಯುಕ್ತ ಆರ್.ಪಿ.ನಾಯ‌್ಕ, ಸದಸ್ಯರು ಇದ್ದಾರೆ   

ಕಾರವಾರ: ‘ಪೌರ ಕಾರ್ಮಿಕರು ಸೂರ್ಯೋದಯ ಆಗುವಷ್ಟರಲ್ಲೇ ಕೆಲಸ ಶುರು ಮಾಡುತ್ತಾರೆ. ನಗರದ ಕೊಳೆಯನ್ನು ಸ್ವಚ್ಛ ಮಾಡುತ್ತಾರೆ. ಕಸವನ್ನು ಎಸೆಯುವ ಮೊದಲು, ಸ್ವಚ್ಛತೆಗೆ ಪೌರ ಕಾರ್ಮಿಕರ ಶ್ರಮವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅವರು ನಗರದ ಆರೋಗ್ಯ ರಕ್ಷಕರು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು.

ನಗರಸಭೆಯು ಶುಕ್ರವಾರ ಆಯೋಜಿಸಿದ್ದ ‘ಪೌರ ಕಾರ್ಮಿಕರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಳಿಗ್ಗೆ ಸ್ವಚ್ಛ ಮಾಡಿದ್ದರೂ ಸಂಜೆಯಷ್ಟರಲ್ಲಿ ಮತ್ತಷ್ಟೇ ಕಸ ತುಂಬಿರುತ್ತದೆ. ಸ್ವಚ್ಛತೆಯ ಬಗ್ಗೆ ನಾಗರಿಕರಲ್ಲಿ ಇನ್ನಷ್ಟು ಅರಿವು ಬೆಳೆಯಬೇಕು. ನಗರ ಸ್ವಚ್ಛವಾಗುವುದರ ಜೊತೆಗೇ ನಮ್ಮ ವಿಚಾರಗಳಲ್ಲೂ ಬದಲಾವಣೆ ತಂದುಕೊಳ್ಳಬೇಕು. ಸ್ವಚ್ಛತೆ ಕಾಪಾಡುವಲ್ಲಿ ನಾವೇನು ಮಾಡಿದ್ದೇವೆ ಎಂದು ಪರಾಮರ್ಶೆ ಮಾಡಿಕೊಳ್ಳಬೇಕು’ ಎಂದರು.

ADVERTISEMENT

ನಗರಸಭೆ ಆಯುಕ್ತ ಆರ್.ಪಿ.ನಾಯ್ಕ ಮಾತನಾಡಿ, ‘ನಗರದಲ್ಲಿ ಕಾಯಂ ಪೌರ ಕಾರ್ಮಿಕರಿಗೆ ಮಾತ್ರ ₹ 3,500 ಆಪತ್ಕಾಲ ನಿಧಿ ನೀಡಲಾಗುತ್ತಿತ್ತು. ಈಗಿನ ಆಡಳಿತ ಮಂಡಳಿಯು ಕಾಯಂ, ಹೊರ ಗುತ್ತಿಗೆ, ನೇರ ಪಾವತಿಯ ಪೌರ ಕಾರ್ಮಿಕರಿಗೂ ತಲಾ ₹ 7 ಸಾವಿರ ನೀಡಿದೆ’ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಥಾಮ್ಸೆ, ಪೌರ ಕಾರ್ಮಿಕ ನೌಕರರ ಸಂಘದ ಅಧ್ಯಕ್ಷ ಎಂ.ನಾರಾಯಣ ಇದ್ದರು.

ನಗರದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ದಿನಾಚರಣೆಯ ಅಂಗವಾಗಿ ಕೇಕ್ ಕತ್ತರಿಸಲಾಯಿತು. ಪೌರ ಕಾರ್ಮಿಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಗರಸಭೆ ಸದಸ್ಯರು ಭಾಗವಹಿಸಿದ್ದರು.

ಮಾತನಾಡಿದ ಅಧ್ಯಕ್ಷ ಪರ್ವೇಜ್ ಕಾಶೀಂಜೀ ಅವರು, ಪೌರಕಾರ್ಮಿಕರು ನಗರದ ಸ್ವಚ್ಛತೆಯ ಜೊತೆಗೆ ತಮ್ಮ ವೈಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದರು.

ಉಪಾಧ್ಯಕ್ಷ ಕೈಸರ್, ಸ್ಥಾಯಿ ಸಮಿತಿ ಅಧ್ಯಕ್ಷ ಇಂಸಾದ್, ಮುಖ್ಯಾಧಿಕಾರಿ ಎಂ.ಕೆ.ಸುರೇಶ, ಆರೋಗ್ಯಾಧಿಕಾರಿ ಸೋಜಿಯಾ ಸೋಮನ್ ಇದ್ದರು.

ಆರೋಗ್ಯದತ್ತ ಗಮನ ನೀಡಲು ಸಲಹೆ

ಭಟ್ಕಳ : ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಪಟ್ಟಣದ ಪುರಸಭೆಯಲ್ಲಿ ಪೌರಕಾರ್ಮಿಕರಿಂದ ಕೇಕ್ ಕತ್ತರಿಸಿ, ಗಿಡಕ್ಕೆ ನೀರು ಹಾಕಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

ನಂತರ ನಡೆದ ಸ್ಪರ್ಧಾ ಕಾರ್ಯಕ್ರದಮಲ್ಲಿ ವಿಜೇತರಾದವರಿಗೆ ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶೀಂಜೀ ಬಹುಮಾನ ವಿತರಿಸಿದರು.
ನಂತರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.