ADVERTISEMENT

ಮತದಾನದ ಮರುದಿನ ಶ್ರಮದಾನ

ರಸ್ತೆ ಬದಿಯ ತ್ಯಾಜ್ಯ ಹೆಕ್ಕಿ ಸ್ವಚ್ಛಗೊಳಿಸಿದ ಯುವಜನರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 12:53 IST
Last Updated 25 ಏಪ್ರಿಲ್ 2019, 12:53 IST
ಮತ ಹಾಕಲು ಬಂದಿದ್ದ ಶಿರಸಿ ತಾಲ್ಲೂಕಿನ ಹಾರೂಗಾರ ಯುವಕ–ಯುವತಿಯರು ಸ್ವಚ್ಛತಾ ಕಾರ್ಯ ನಡೆಸಿದರು
ಮತ ಹಾಕಲು ಬಂದಿದ್ದ ಶಿರಸಿ ತಾಲ್ಲೂಕಿನ ಹಾರೂಗಾರ ಯುವಕ–ಯುವತಿಯರು ಸ್ವಚ್ಛತಾ ಕಾರ್ಯ ನಡೆಸಿದರು   

ಶಿರಸಿ: ಮತ ಹಾಕಲೆಂದು ಊರಿಗೆ ಬಂದಿದ್ದ ಯುವಕ–ಯುವತಿಯರು, ಮಲೆನಾಡಿನ ಸುಂದರ ಪರಿಸರದಲ್ಲಿ ತ್ಯಾಜ್ಯಗಳ ರಾಶಿ ಬಿದ್ದಿರುವುದನ್ನು ಕಂಡು ಬೇಸರಿಸಿಕೊಂಡರು. ಮತದಾನದ ದಿನದಂದೇ ಉದ್ಯೋಗ ಮಾಡುವ ಊರಿಗೆ ಮರಳುವ ನಿರ್ಧಾರವನ್ನು ಬದಲಿಸಿದರು.

ಕೈಗೆ ಗ್ಲೌಸ್ ತೊಟ್ಟು, ಪೊರಕೆ ಹಿಡಿದು, ರಸ್ತೆ ಬದಿಯ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿದರು. ತಾಲ್ಲೂಕಿನ ನೆಗ್ಗು ಗ್ರಾಮ ಪಂಚಾಯ್ತಿಯ ಹಾರೂಗಾರಿನ ಈ ಯುವಜನರ ಹಳ್ಳಿ ಪ್ರೀತಿ ಇತರರಿಗೆ ಮಾದರಿಯಾಗಿದೆ. ಶಿರಸಿ–ಕುಮಟಾ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಊರು ಹಾರುಗಾರ. ಕಾಡಿನ ನಡುವಿನ ರಸ್ತೆಯಲ್ಲಿ ಪುಟ್ಟ–ಪುಟ್ಟ ಊರುಗಳು ಹಾದು ಹೋಗುತ್ತವೆ. ಪರಿಸರ ಪ್ರಜ್ಞೆಯಿಲ್ಲದ ಕೆಲವರು ರಸ್ತೆಯಲ್ಲಿ ಹೋಗುವಾಗ ದಾರಿ ಬದಿಯಲ್ಲಿ ಮದ್ಯದ ಬಾಟಲಿ, ಪ್ಲಾಸ್ಟಿಕ್ ಕವರ್‌ಗಳನ್ನು ಎಸೆದು ಹೋಗುತ್ತಾರೆ. ಗ್ರಾಮಸ್ಥರು ಅನೇಕ ಬಾರಿ ಎಚ್ಚರಿಕೆ ನೀಡಿದರೂ, ಪೊಲೀಸ್ ದೂರು ನೀಡಿದರೂ ಅಕ್ರಮವಾಗಿ ಕಸ ಎಸೆಯುವ ದುರಭ್ಯಾಸ ನಿಂತಿಲ್ಲ.

ಆಡಿ ಬೆಳೆದ ಊರಿನ ರಸ್ತೆಯ ಬದಿಯಲ್ಲಿ ಕಸ ಬಿದ್ದಿರುವುದನ್ನು ಕಂಡ ಈ ಯುವ ಬೆಂಗಳೂರು ವಾಸಿಗಳು, ಗುರುವಾರ ಬೆಳಿಗ್ಗೆ ಎಲ್ಲವನ್ನೂ ಸ್ವಚ್ಛಗೊಳಿಸಿದರು. ‘ಕಸದ ರಾಶಿಗಳನ್ನು ಕಂಡಾಗ ಉಳಿದವರಿಗೂ ಇಲ್ಲಿಯೇ ಎಸೆದು ಬಿಡೋಣ ಎನಿಸುತ್ತದೆ. ನಮ್ಮೂರಿನ ಸ್ವಚ್ಛತೆ ಕಾಯ್ದುಕೊಳ್ಳುವುದು ನಮ್ಮ ಜವಾಬ್ದಾರಿ. ಮತದಾನ ಮಾಡಿದ ಜತೆಗೆ ಸ್ವಚ್ಛತಾ ಕಾರ್ಯ ಮಾಡಿದ ಖುಷಿ ಸಿಕ್ಕಿದೆ’ ಎಂದು ಗೀರ್ವಾಣಿ ಹಾರೂಗಾರ ಪ್ರತಿಕ್ರಿಯಿಸಿದರು. ಗುರುಪ್ರಸಾದ, ಚಿನ್ಮಯ ಹೆಗಡೆ, ನವೀನ ಹೆಗಡೆ, ಯೋಗೇಂದ್ರ ಕಾಮತ್, ಸಂತೋಷ ಹೆಗಡೆ ಜೊತೆಯಾಗಿ ಈ ಕಾರ್ಯ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.