ADVERTISEMENT

ಸಮ್ಮಿಶ್ರ ಸರ್ಕಾರದಿಂದ ಖಜಾನೆ ಖಾಲಿ

ಸಂಸದ ಅನಂತಕುಮಾರ್ ಹೆಗಡೆ ಆರೋಪ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 14:23 IST
Last Updated 23 ನವೆಂಬರ್ 2019, 14:23 IST
ಮುಂಡಗೋಡ ತಾಲ್ಲೂಕಿನ ಕಾತೂರ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ಮಾತನಾಡಿದರು
ಮುಂಡಗೋಡ ತಾಲ್ಲೂಕಿನ ಕಾತೂರ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ಮಾತನಾಡಿದರು   

ಮುಂಡಗೋಡ: ‘ಸಮ್ಮಿಶ್ರ ಸರ್ಕಾರವನ್ನು ಕುಮಾರಸ್ವಾಮಿ ಒಬ್ಬರೇ ನಡೆಸಿದ್ದರೇ ತೊಂದರೆಯಿರಲಿಲ್ಲ. ಆದರೆ, ಹಿಂದಿನಿಂದ ಸಿದ್ಧರಾಮಯ್ಯ ಅವರೇ ಸರ್ಕಾರ ನಡೆಸುತ್ತಿದ್ದರು. ಅದಕ್ಕೋಸ್ಕರ ಬೇಸರವಾಗಿ, ನಾವು ಕೈ ಹಾಕಬೇಕಾಯಿತು. ಆಗ ರಾಜ್ಯದ ಅಭಿವೃದ್ಧಿ ಸಹ ಕುಂಠಿತಗೊಂಡಿತ್ತು’ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.

ತಾಲ್ಲೂಕಿನ ಕಾತೂರಿನಲ್ಲಿ ಶನಿವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘ಸಮ್ಮಿಶ್ರ ಸರ್ಕಾರವನ್ನು ಹೀಗೆ ಬಿಟ್ಟರೆ ಕರ್ನಾಟಕ ಹಾಳಾಗುತ್ತದೆ ಎಂದು ವಿಚಾರ ಮಾಡುತ್ತಿರುವಾಗಲೇ, ಕಾಂಗ್ರೆಸ್‌ ಪಕ್ಷದಲ್ಲಿ ಜಗಳ ಆರಂಭವಾಗಿ, ಇಲ್ಲಿಯವರೆಗೆ ಬಂದು ನಿಂತಿದೆ’ ಎಂದು ಮೈತ್ರಿ ಸರ್ಕಾರ ಪತನದ ಬಗ್ಗೆ ಹೇಳಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಸ್ವಾತಂತ್ರ್ಯ ಇಲ್ಲ. ರಾಜ್ಯದ ಖಜಾನೆ ಖಾಲಿ ಆಗಿರುವುದನ್ನು ತುಂಬಾ ನೋವಿನಿಂದ ಮೊನ್ನೆ ಹೇಳುತ್ತಿದ್ದರು. ಖಾಲಿ ಬಾಂಡ್ಲೆ(ಪಾತ್ರೆ) ಎತ್ತಿಕೊಂಡು ನಾವು ಹೋಗಬೇಕಾಗಿದೆ. ಸ್ವಲ್ಪ ಏನಾದ್ರೂ ಮಾತಾಡಬೇಕು ಅಂದ್ರೆ ಅಥವಾ ಜನರ ಕೆಲಸ ಮಾಡಲಿಕ್ಕೆ, ಇನ್ನೊಂದು ಆರು ತಿಂಗಳು ಅಥವಾ ಒಂದು ವರ್ಷ ಬೇಕಾಗಬಹುದು. ಅಷ್ಟರ ಮಟ್ಟಿಗೆ ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿ ಖಜಾನೆ ಖಾಲಿ ಮಾಡಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಇನ್ನೂ ದೊಡ್ಡ ದೊಡ್ಡ ಮಂದಿ ಬಿಜೆಪಿಗೆ ಬರುವವರಿದ್ದಾರೆ. ಬಿಜೆಪಿಯು ಸಮುದ್ರ ಇದ್ದಂತೆ. ಯಾರು ಬಂದರೂ ಸಮುದ್ರದ ನೀರು ಉಪ್ಪು ಆಗಿರುತ್ತದೆ. ಯಾರೋ ಒಬ್ಬಿಬ್ಬರು ಕಾಂಗ್ರೆಸ್‌ ಪಕ್ಷಕ್ಕೆ ಹೋದರೂ, ಪಕ್ಷಕ್ಕೆ ಏನೂ ವ್ಯತ್ಯಾಸ ಆಗುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಒಮ್ಮುಖವಾಗಿ ಬೆಂಬಲ ನೀಡಿದಂತೆ, ಈ ಸಲ ಶಿವರಾಮ ಹೆಬ್ಬಾರ್‌ ಅವರನ್ನು ಬೆಂಬಲಿಸಬೇಕು’ ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯ ಎಲ್‌.ಟಿ.ಪಾಟೀಲ, ವಿನೋದ ಪ್ರಭು, ಕೃಷ್ಣ ಎಸಳೆ, ಉಮೇಶ ಬಿಜಾಪುರ, ಮಹೇಶ ಹೊಸಕೊಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.