ಅಂಕೋಲಾ: ದಶಕದ ಹಿಂದೆ ಇಲ್ಲಿನ ಪೂಜಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಿರ್ಮಿಸಲಾದ ವಿದ್ಯಾರ್ಥಿ ವಸತಿ ನಿಲಯ ಈವರೆಗೂ ಬಳಕೆಗೆ ಬಂದಿಲ್ಲ. ಕಟ್ಟಡವು ಪಾಳು ಬೀಳುತ್ತಿದ್ದು, ಕುಡುಕರ ತಾಣವಾಗಿ ಮಾರ್ಪಟ್ಟಿರುವ ಆರೋಪಗಳಿವೆ.
2013–14ರಲ್ಲಿ ಕಾಲೇಜಿಗೆ ಹೊಂದಿಕೊಂಡಿರುವ ವಿಶಾಲವಾದ ಮೈದಾನದಲ್ಲಿ ₹1 ಕೋಟಿ ವೆಚ್ಚದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ವಸತಿ ಉದ್ದೇಶಕ್ಕೆ ವಸತಿ ನಿಲಯ ನಿರ್ಮಾಣ ಮಾಡಲಾಗಿತ್ತು. ಕಟ್ಟಡಕ್ಕೆ ವಿದ್ಯುತ್ ಸರಬರಾಜಿಗೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಆದರೆ, ಕಟ್ಟಡ ಮಾತ್ರ ಇನ್ನೂ ಬಳಕೆಗೆ ಸಿಕ್ಕಿಲ್ಲ.
ಸುಸುಜ್ಜಿತವಾಗಿ ನಿರ್ಮಾಣವಾಗಿರುವ ಕಟ್ಟಡ ಈಗ ಪುಂಡರಿಗೆ ಮದ್ಯ ವ್ಯಸನದಂತಹ ಚಟುವಟಿಕೆ ನಡೆಸುವ ತಾಣವಾಗಿ ಮಾರ್ಪಟ್ಟಿದೆ ಎಂಬ ದೂರುಗಳು ಹೆಚ್ಚಿವೆ. ಕಟ್ಟಡದ ಒಳಗೆ ಬಿದ್ದಿರುವ ಮದ್ಯದ ಖಾಲಿ ಬಾಟಲಿಗಳು ಇದಕ್ಕೆ ಸಾಕ್ಷಿ ನೀಡುತ್ತಿವೆ. ಕಿಟಕಿ ಗಾಜುಗಳನ್ನು ಒಡೆಯಲಾಗುತ್ತಿದೆ. ಕಟ್ಟಡದ ಸುತ್ತ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ.
‘ಕಟ್ಟಡ ನಿರ್ಮಿಸಿದ ಕೆಆರ್‌ಐಡಿಎಲ್ ಸಂಸ್ಥೆಯಿಂದ ಈವರೆಗೆ ಕಟ್ಟಡ ಹಸ್ತಾಂತರ ಆಗಿಲ್ಲ. ಕಾಲೇಜು ಶಿಕ್ಷಣ ಇಲಾಖೆ ಸುಪರ್ದಿಗೆ ನೀಡಬೇಕೋ ಅಥವಾ ಸಮಾಜ ಕಲ್ಯಾಣ ಇಲಾಖೆಗೆ ವಹಿಸಬೇಕೋ ಎಂಬ ಗೊಂದಲ ಬಗೆಹರಿದಿಲ್ಲ. ಹೀಗಾಗಿ ಕಟ್ಟಡ ಯಥಾಸ್ಥಿತಿಯಲ್ಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ವಸತಿ ನಿಲಯ ನಿರ್ವಹಣೆ ಕಾಲೇಜಿಗೆ ನೀಡಿಲ್ಲ. ಹೆಚ್ಚಿನ ಮಾಹಿತಿ ಇಲ್ಲ’ ಎಂದು ಕಾಲೇಜಿನ ಪ್ರಾಚಾರ್ಯೆ ವಿದ್ಯಾ ನಾಯಕ ಪ್ರತಿಕ್ರಿಯಿಸಿದರು.
‘ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ಬಳಕೆಗೆ ಬಾರದೆ ಅನುದಾನ ಪೋಲಾದಂತಾಗುತ್ತಿದೆ. ರಾತ್ರಿ ವೇಳೆ ಕಾಲೇಜು ಬಳಿಯ ಈ ಕಟ್ಟಡದಲ್ಲಿ ಕುಡುಕರ ಹಾವಳಿ ಹೆಚ್ಚುತ್ತಿದೆ. ಬಾಟಲಿಗಳನ್ನು ಒಡೆದು ಮೈದಾನದಲ್ಲಿ ಎಸೆಯುವುದರಿಂದ ಕ್ರೀಡಾ ಚಟುವಟಿಕೆಗೂ ಸಮಸ್ಯೆಯಾಗುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕೆ ನಿರ್ಮಿಸಿದ ಸೌಲಭ್ಯ ಬಳಕೆಯಾಗಿರುವುದು ಸರಿಯಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಜಯರಾಮ ಹೇಳಿದರು.
ಪೂಜಗೇರಿಯಲ್ಲಿರುವ ವಿದ್ಯಾರ್ಥಿ ವಸತಿ ನಿಲಯ ಕಟ್ಟಡ ಪಾಳುಬೀಳುತ್ತಿರುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆವಿನಾಯಕ ನಾಯ್ಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.