ADVERTISEMENT

ವಾರಾಂತ್ಯದಲ್ಲಿ ಸಂಪೂರ್ಣ ಲಾಕ್‌ಡೌನ್

ಮತ್ತಷ್ಟು ಪ್ರದೇಶಗಳು ವಿಶೇಷ ಕಂಟೈನ್‌ಮೆಂಟ್ ವಲಯ

​ಪ್ರಜಾವಾಣಿ ವಾರ್ತೆ
Published 20 ಮೇ 2021, 13:37 IST
Last Updated 20 ಮೇ 2021, 13:37 IST
ಲಾಕ್‌ಡೌನ್ ಸಲುವಾಗಿ ಕಾರವಾರದಲ್ಲಿ ಮಳಿಗೆಗಳು ಬಾಗಿಲು ಮುಚ್ಚಿರುವುದು
ಲಾಕ್‌ಡೌನ್ ಸಲುವಾಗಿ ಕಾರವಾರದಲ್ಲಿ ಮಳಿಗೆಗಳು ಬಾಗಿಲು ಮುಚ್ಚಿರುವುದು   

ಕಾರವಾರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮೇ 22ರಂದು ಬೆಳಿಗ್ಗೆ 6ರಿಂದ 24ರ ಬೆಳಿಗ್ಗೆ 6ರ ತನಕ ಜಿಲ್ಲೆಯಾದ್ಯಂತ ಲಾಕ್‌ಡೌನ್ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ವಾರಾಂತ್ಯದಲ್ಲಿ ಲಾಕ್‌ಡೌನ್ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸೂಚಿಸಿದ್ದರು.

ಇದೇ ವೇಳೆ, ಸೋಂಕಿತರ ಸಂಖ್ಯೆ ಹೆಚ್ಚಿರುವ ಶಿರಸಿ ನಗರ, ಸಿದ್ದಾಪುರ, ಮುಂಡಗೋಡ ಮತ್ತು ಯಲ್ಲಾಪುರ ಪಟ್ಟಣಗಳನ್ನು ವಿಶೇಷ ಕಂಟೈನ್‌ಮೆಂಟ್ ವಲಯಗಳನ್ನಾಗಿ ಗುರುತಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ಎಲ್ಲ ಖಾಸಗಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಕೇವಲ ತುರ್ತು ಸಂದರ್ಭಗಳಿಗೆ ವಿನಾಯಿತಿ ನೀಡಲಾಗಿದೆ. ಹಾಲು, ಮನೆ ಮನೆಗೆ ತರಕಾರಿ, ಹಣ್ಣು ಮಾರಾಟಕ್ಕೆ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಹೆಚ್ಚು ಸೋಂಕಿತರು ಇರುವ 57 ಗ್ರಾಮ ಪಂಚಾಯಿತಿಗಳನ್ನು ಈವರೆಗೆ ಕಂಟೈನ್‌ಮೆಂಟ್ ವಲಯ ಎಂದು ಗುರುತಿಸಲಾಗಿದೆ. ಸಿದ್ದಾಪುರ ತಾಲ್ಲೂಕಿನಲ್ಲಿ 19, ಶಿರಸಿ ಮತ್ತು ಜೊಯಿಡಾ ತಾಲ್ಲೂಕುಗಳಲ್ಲಿ ತಲಾ ಏಳು, ಕಾರವಾರ ಮತ್ತು ಮುಂಡಗೋಡ ತಾಲ್ಲೂಕುಗಳಲ್ಲಿ ತಲಾ ಐದು, ಹಳಿಯಾಳ ತಾಲ್ಲೂಕಿನಲ್ಲಿ ನಾಲ್ಕು, ಯಲ್ಲಾಪುರ ತಾಲ್ಲೂಕಿನಲ್ಲಿ ಮೂರು, ಅಂಕೋಲಾ ಮತ್ತು ದಾಂಡೇಲಿ ತಾಲ್ಲೂಕುಗಳಲ್ಲಿ ತಲಾ ಎರಡು, ಭಟ್ಕಳ ಮತ್ತು ಕುಮಟಾ ತಾಲ್ಲೂಕುಗಳಲ್ಲಿ ತಲಾ ಒಂದು ಗ್ರಾಮ ಪಂಚಾಯಿತಿಗಳು ಒಳಗೊಂಡಿವೆ.

ಕಾರವಾರ ನಗರಸಭೆ ವ್ಯಾಪ್ತಿಯನ್ನು ಈಗಾಗಲೇ ವಿಶೇಷ ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿದೆ. ಇಲ್ಲಿ ಸಾರ್ವಜನಿಕರ ಅನಗತ್ಯ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಹಾಗಾಗಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಪೂರೈಸಲು ನಗರಸಭೆಯ ಪ್ರತಿ ವಾರ್ಡ್‌ನಲ್ಲಿ ಆಯಾ ವಾರ್ಡ್‌ ಸದಸ್ಯರ ನೇತೃತ್ವದಲ್ಲಿ ನೋಡಲ್ ಅಧಿಕಾರಿ ಹಾಗೂ ಸ್ವಯಂ ಸೇವಕರನ್ನು ನೇಮಿಸಲಾಗಿದೆ. ನಾಗರಿಕರು ಅವರ ಮೂಲಕ ಅಗತ್ಯ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ನಗರಸಭೆ ಪ್ರಭಾರ ಆಯುಕ್ತ ಆರ್.ಪಿ.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.