ADVERTISEMENT

ಶಿರಸಿ: ಖಾಲಿ ಜಾಗ ರಕ್ಷಣೆಗೆ ಕಾಂಕ್ರೀಟ್ ತಡೆಗೋಡೆ

ಹುತ್ಗಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಅನುಷ್ಠಾನ

ರಾಜೇಂದ್ರ ಹೆಗಡೆ
Published 19 ಮಾರ್ಚ್ 2023, 15:42 IST
Last Updated 19 ಮಾರ್ಚ್ 2023, 15:42 IST
ಶಿರಸಿ ತಾಲ್ಲೂಕಿನ ಹುತ್ಗಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಅರಣ್ಯ ಖಾಲಿ ಜಾಗದ ಬಳಿ ಇಲಾಖೆಯಿಂದ ಅನುಷ್ಠಾನಗೊಂಡ ಕಾಂಕ್ರೀಟ್ ತಡೆ ಬೇಲಿ
ಶಿರಸಿ ತಾಲ್ಲೂಕಿನ ಹುತ್ಗಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಅರಣ್ಯ ಖಾಲಿ ಜಾಗದ ಬಳಿ ಇಲಾಖೆಯಿಂದ ಅನುಷ್ಠಾನಗೊಂಡ ಕಾಂಕ್ರೀಟ್ ತಡೆ ಬೇಲಿ   

ಶಿರಸಿ: ನಗರದ ಹೊರವಲಯದಲ್ಲಿರುವ ಅರಣ್ಯದಲ್ಲಿ ಅತಿಕ್ರಮಣಕ್ಕೆ ಒಳಗಾಗುತ್ತಿರುವ ಖಾಲಿ ಜಾಗಗಳ ರಕ್ಷಣೆಗೆ ಅರಣ್ಯ ಇಲಾಖೆ ಕ್ರಮಕೈಗೊಂಡಿದ್ದು, ಲಕ್ಷಾಂತರ ರೂಪಾಯಿ ವ್ಯಯಿಸಿ ಕಾಂಕ್ರೀಟ್ ತಡೆ ಬೇಲಿ ನಿರ್ಮಿಸುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ನಗರ ಪ್ರದೇಶದಲ್ಲಿ ಜಾಗದ ದರ ಗಗನಮುಖಿ ಆಗಿದೆ. ನಗರದ ಹೊರವಲಯದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಾಗಕ್ಕೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗ ಖರೀದಿಸಿದವರಿಂದ ಅತಿಕ್ರಮಣ ಕೂಡ ವ್ಯಾಪಕವಾಗಿರುವ ಆರೋಪಗಳಿವೆ. ಹೀಗಾಗಿ ನಗರ ಸಮೀಪದಲ್ಲಿ ಖಾಲಿ ಇರುವ ಅರಣ್ಯ ಜಾಗವನ್ನು ರಕ್ಷಿಸಿಕೊಳ್ಳುವುದು ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಉಪಗ್ರಹ ಆಧಾರಿತ ಮಾಹಿತಿ ಆಧರಿಸಿ ಅತಿಕ್ರಮಣ ಉಂಟಾಗಬಹುದಾದ ಪ್ರದೇಶಕ್ಕೆ ಮುನ್ನೆಚ್ಚರಿಕೆಯಾಗಿ ಕಾಂಕ್ರೀಟ್ ತಡೆ ಬೇಲಿ ನಿರ್ಮಿಸಲಾಗುತ್ತಿದೆ.

ಹುತ್ಗಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಆಟದ ಮೈದಾನ ಅತಿಕ್ರಮಣ ಆಗುತ್ತಿದೆ ಎಂಬ ಮಾಹಿತಿ ಮೇರೆಗೆ ಈಗಾಗಲೇ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿದೆ. ಗಣೇಶನಗರದ ಪಕ್ಕದಲ್ಲಿರುವ ಸ್ಮಶಾನ ಜಾಗಕ್ಕೆ ಹೊಂದಿಕೊಂಡ ಅರಣ್ಯ ಜಾಗ ರಕ್ಷಣೆಗೂ ಅರಣ್ಯ ಇಲಾಖೆ ಕ್ರಮವಹಿಸಿದೆ. ಇದೇ ರೀತಿ ನಗರದ ಗಡಿ ಹಂಚಿಕೊಂಡ ಇಸಳೂರು, ದೊಡ್ನಳ್ಳಿ, ಸದಾಶಿವಳ್ಳಿ, ಯಡಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅರಣ್ಯ ಖಾಲಿ ಜಾಗಗಳ ರಕ್ಷಣೆಗೆ ಕ್ರಮವಹಿಸುತ್ತಿದೆ.

ADVERTISEMENT

‘ತಿಂಗಳಿಗೊಮ್ಮೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅರಣ್ಯ ಜಾಗ ರಕ್ಷಣೆ, ಅತಿಕ್ರಮಣಗಳ ಮಾಹಿತಿ ಸಂಬಂಧ ಸೂಚನೆ ನೀಡಲಾಗುತ್ತದೆ. ಅರಣ್ಯ ಜಾಗ ಅತಿಕ್ರಮಣವಾದರೆ ಉಪಗ್ರಹ ಆಧಾರಿತ ಸಂದೇಶಗಳನ್ನು ಆಯಾ ವಲಯ ಅರಣ್ಯ ವ್ಯಾಪ್ತಿಯ ಸ್ಥಳೀಯ ಅಧಿಕಾರಿಗೆ ರವಾನಿಸಲಾಗುತ್ತದೆ. ಆ ಪ್ರಕಾರ ಅತಿಕ್ರಮಣ ಖುಲ್ಲಾದ ಜತೆಗೆ ಜಾಗದ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ’ ಎನ್ನುತ್ತಾರೆ ಶಿರಸಿ ಆರ್.ಎಫ್.ಒ ಶಿವಾನಂದ ನಿಂಗಾಣಿ.

‘ಬೇಲಿ ನಿರ್ಮಾಣಕ್ಕೆ ಬೇಕಾದ ಸಂಪೂರ್ಣ ಅನುದಾನ ಒಂದೇ ಬಾರಿ ಬಿಡುಗಡೆಯಾಗುವುದಿಲ್ಲ. ಹಾಗಾಗಿ ಕಾಮಗಾರಿ ಬೇಡಿಕೆ ಆಧರಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ, ಅನುದಾನ ಪಡೆಯಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.