ADVERTISEMENT

ರಾಮನ ಹೆಸರು ಸೇರ್ಪಡೆ: ಸಹಿಸಿಕೊಳ್ಳದ ಕಾಂಗ್ರೆಸ್‌; ಕೋಟ ಶ್ರೀನಿವಾಸ ಪೂಜಾರಿ

ಜಿಲ್ಲಾಮಟ್ಟದ ಕಾರ್ಯಾಗಾರ: ಸಂಸದ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 4:01 IST
Last Updated 25 ಜನವರಿ 2026, 4:01 IST
ಕುಮಟಾದಲ್ಲಿ ನಡೆದ ವಿಕಸಿತ ಭಾರತ ರೋಜಗಾರ ಮತ್ತು ಅಜೀವಿಕಾ ಮಿಷನ್ ಗ್ಯಾರಂಟಿ ( ವಿಬಿ-ಜಿ, ರಾಮ-ಜಿ) ಯೋಜನೆಯ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ದಿನಕರ ಶೆಟ್ಟಿ ಯೋಜನೆಯ ಕರಪತ್ರ ಬಿಡುಗಡೆ ಮಾಡಿದರು.
ಕುಮಟಾದಲ್ಲಿ ನಡೆದ ವಿಕಸಿತ ಭಾರತ ರೋಜಗಾರ ಮತ್ತು ಅಜೀವಿಕಾ ಮಿಷನ್ ಗ್ಯಾರಂಟಿ ( ವಿಬಿ-ಜಿ, ರಾಮ-ಜಿ) ಯೋಜನೆಯ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ದಿನಕರ ಶೆಟ್ಟಿ ಯೋಜನೆಯ ಕರಪತ್ರ ಬಿಡುಗಡೆ ಮಾಡಿದರು.   

ಕುಮಟಾ:  ‘ಕೇಂದ್ರ ಸರ್ಕಾರದ ವಿಕಸಿತ ಭಾರತ ರೋಜಗಾರ ಮತ್ತು ಅಜೀವಿಕಾ ಮಿಷನ್ ಗ್ಯಾರಂಟಿ ( ವಿಬಿ-ಜಿ, ರಾಮ-ಜಿ) ಯೋಜನೆಯಲ್ಲಿ ರಾಮನ ಹೆಸರನ್ನು ಸೇರಿಸಿದ್ದಕ್ಕೆ ವಿರೋಧ ಪಕ್ಷವಾದ ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು  ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕುಮಟಾದಲ್ಲಿ ನಡೆದ ವಿಕಸಿತ ಭಾರತ ರೋಜಗಾರ ಮತ್ತು ಅಜೀವಿಕಾ ಮಿಷನ್ ಗ್ಯಾರಂಟಿ ( ವಿಬಿ-ಜಿ, ರಾಮ-ಜಿ) ಯೋಜನೆಯ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಯೋಜನೆಯ ಹೆಸರಿನಲ್ಲಿ ಮಹಾತ್ಮ ಗಾಂಧಿ ಅವರ ಹೆಸರನ್ನು ಕೈಬಿಡಲಾಗಿದೆ ಎನ್ನುವ ಕಾರಣ ನೀಡಿ ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡುತ್ತಿದೆ. ಆದರೆ ಕೇಂದ್ರ ಸರ್ಕಾರ ತನ್ನ ಎಲ್ಲ ಯೋಜನೆಗಳಿಗೆ ಮಹಾತ್ಮ ಗಾಂಧಿ ಪ್ರಣೀತ ಸೂತ್ರಗಳನ್ನೇ ಅಳವಡಿಸಿಕೊಂಡಿದೆ’ ಎಂದರು.

ADVERTISEMENT

‘ಈ ಯೋಜನೆಯಲ್ಲಿ ಹಿಂದೆ ಪಶ್ಚಿಮ ಬಂಗಾಳದಲ್ಲಿ ₹ 22 ಸಾವಿರ ಕೋಟಿ, ಕರ್ನಾಟಕದಲ್ಲಿ ₹600 ಕೋಟಿ ಭ್ರಷ್ಟಾಚಾರ ನಡೆದರೂ ಸ್ಥಳೀಯ ರಾಜ್ಯ ಸರ್ಕಾರಗಳು ಯಾವುದೇ ಕ್ರಮ ಕೈಕೊಂಡಿಲ್ಲ. ಇದನ್ನು ಮನಗಂಡ ಕೇಂದ್ರ ಇಡೀ ಯೋಜನೆಯನ್ನು ಜನಪರವಾಗಿ ಪರಿಷ್ಕರಿಸಿರುವುದು ಕಾಂಗ್ರೆಸ್‌ಗೆ ಸಹಿಸಲಾಗುತ್ತಿಲ್ಲ’ ಎಂದು ತಿಳಿಸಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, `ಕರ್ನಾಟಕ ವಿಧಾನಸಭೆಯಲ್ಲಿ ರಾಜ್ಯಪಾಲರಿಗೆ ಅಗೌರವ ತೋರಿದ್ದು ರಾಜ್ಯಕ್ಕೆ ಕಳಂಕ ತರುವಂತದ್ದಾಗಿದೆ. ಸರ್ಕಾರ ಕ್ಷಮೆಯಾಚಿಸಬೇಕು. ಸಂಬಂಧಪಟ್ಟ ಸಚಿವರು, ಶಾಸಕರ ಮೇಲೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಶರಾವತಿ ಪಂಪ್ಡ್ ಸ್ಟೋರೇಜ್ ಹಾಗೂ ನದಿ ತಿರುವು ಯೋಜನೆಗಳ ಅನುಷ್ಠಾನದ ಬಗ್ಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಧ್ವನಿ ಕಳೆದುಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮೌನ ವಹಿಸಿದ್ದಾರೆ' ಎಂದರು.

ಶಾಸಕ ದಿನಕರ ಶೆಟ್ಟಿ, `ವಿಕಸಿತ ಭಾರತ ರೋಜಗಾರ ಮತ್ತು ಅಜೀವಿಕಾ ಮಿಷನ್ ಗ್ಯಾರಂಟಿ ( ವಿಬಿ-ಜಿ, ರಾಮ-ಜಿ) ಯೋಜನೆಯ ಹೆಸರಿನ ಬಗ್ಗೆ ಅಪಪ್ರಚಾರ ಮಾಡದೆ ಅದರ ಜನಪರ ಅಂಶಗಳ ಬಗ್ಗೆ ವಿರೋಧ ಪಕ್ಷಗಳು ಗಮನ ಹರಿಸಬೇಕು’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕರಾದ ರೂಪಾಲಿ ನಾಯ್ಕ, ಸುನಿಲ್ ನಾಯ್ಕ, ಸುನಿಲ ಹೆಗಡೆ, ಮುಖಂಡರಾದ ಈಶ್ವರ ನಾಯ್ಕ, ಗುರುಪ್ರಸಾದ ಹೆಗಡೆ, ರವಿ ನಾಯ್ಕ, ಎಂ.ಜಿ. ಭಟ್ಟ, ರೇಖಾ ಹೆಗಡೆ, ಹರಿಪ್ರಕಾಶ ಕೋಣೆಮನೆ, ವೆಂಕಟೇಶ ನಾಯಕ, ಗೋವಿಂದ ನಾಯ್ಕ, ಗಣೇಶ ಪಂಡಿತ್, ರಾಜೇಂದ್ರ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.