ಕಾರವಾರ: ‘ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸರ್ಕಾರವು ಕೇವಲ ಭರವಸೆ ನೀಡುತ್ತಿದೆ. ಆಶ್ವಾಸನೆಗಳು ಕಾರ್ಯ ರೂಪಕ್ಕೆ ಬರುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸುಹಾಸ್ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ 2018ರಲ್ಲಿ ಮುಷ್ಕರ ಮಾಡಲಾಗಿತ್ತು. ಆಗ ಎರಡು ಮೂರು ತಿಂಗಳ ಕಾಲಾವಕಾಶವನ್ನು ಸರ್ಕಾರ ಕೇಳಿತ್ತು. ನಂತರ ಏನೂ ಸ್ಪಂದನೆ ಸಿಗಲಿಲ್ಲ. ಈ ವರ್ಷ ಜೂನ್‌ನಲ್ಲಿ ಪ್ರತಿಭಟನೆ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಈಗ ಮುಷ್ಕರ ಹೂಡುವುದಾಗಿ 14 ದಿನಗಳ ಹಿಂದೆ ಸರ್ಕಾರಕ್ಕೆ ನೋಟಿಸ್ ನೀಡಿದ್ದೆವು. ಆದರೆ, ಅದಕ್ಕೆ ಉತ್ತರ ಬಾರದ ಕಾರಣ ಅನಿವಾರ್ಯವಾಗಿ ಮುಷ್ಕರದಲ್ಲಿ ಭಾಗಿಯಾಗಿದ್ದೇವೆ’ ಎಂದು ಹೇಳಿದರು.
‘ಪ್ರತಿ ವರ್ಷ ಮಾರ್ಚ್ 31ಕ್ಕೆ ನಮ್ಮ ಗುತ್ತಿಗೆ ಒಪ್ಪಂದ ಮುಕ್ತಾಯವಾಗುತ್ತದೆ. ಏ.2ರಿಂದ ನಮ್ಮ ಸೇವೆಯನ್ನು ಮುಂದುವರಿಸುವುದಾಗಿ ಸರ್ಕಾರ ಹೇಳಿದಾಗಲೇ ನಮ್ಮ ಉದ್ಯೋಗ ಖಚಿತವಾಗುತ್ತದೆ. ಹಲವಾರು ವರ್ಷಗಳಿಂದ ಈ ರೀತಿ ಕೆಲಸ ಮಾಡುತ್ತ ಬಂದವರಿದ್ದಾರೆ. ನಮಗೆ ಸೇವಾ ಭದ್ರತೆಯೇ ಇಲ್ಲ’ ಎಂದು ಬೇಸರಿಸಿದರು.
‘ಚಪ್ಪಾಳೆಯಲ್ಲ, ವಿಮೆ ಕೊಡಿ’:
‘ಕೋವಿಡ್ ಸಂಬಂಧಿತ ಕೆಲಸದಲ್ಲಿ ನಿರತರಾಗಿದ್ದ 17 ಮಂದಿ ಗುತ್ತಿಗೆ ನೌಕರರು ರಾಜ್ಯದಾದ್ಯಂತ ಮೃತಪಟ್ಟಿದ್ದಾರೆ. ಆದರೆ, ಸರ್ಕಾರ ಪರಿಹಾರ ಕೊಟ್ಟಿಲ್ಲ. ನಮಗೆ ಪಿಂಚಣಿ, ಉತ್ತಮ ವೇತನವಿಲ್ಲ. ಇದರಿಂದ ಹಲವರ ಕುಟುಂಬಗಳು ಬೀದಿ ಪಾಲಾಗಿವೆ. ನಮ್ಮ ಕೆಲಸಕ್ಕೆ ಚಪ್ಪಾಳೆ ಹೊಡೆದಿದ್ದು ಸಾಕು, ಕೋವಿಡ್ ವಿಮೆ ಮಾಡಿಸಿಕೊಡಲು ಸರ್ಕಾರ ಮುಂದಾಗಬೇಕು’ ಎಂದು ಡಾ.ಸುಹಾಸ್ ಆಗ್ರಹಿಸಿದರು.
‘ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಸರ್ಕಾರವು ಖಾಸಗಿ ಸಂಸ್ಥೆಗಳಿಗೆ ಸೂಚಿಸುತ್ತದೆ. ಆದರೆ, ನಮಗೆ ಕಾಯಂ ನೌಕರರ ವೇತನದಲ್ಲಿ ಕಾಲುಭಾಗವನ್ನಷ್ಟೇ ನೀಡಲಾಗುತ್ತಿದೆ. ಕೆಲಸ ಮಾತ್ರ ಅವರಿಗಿಂತ ಹೆಚ್ಚೇ ಮಾಡುತ್ತಿದ್ದೇವೆ. ವೇತನ ಪರಿಷ್ಕರಣೆ ಮಾಡಿದಾಗ ಕೆಲವರಿಗೆ ಮೊದಲಿಗಿಂತ ಕಡಿಮೆ ವೇತನ ಲಭಿಸಿದೆ’ ಎಂದು ದೂರಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಯುವ ಚೌಡರ್, ದುಂಡಪ್ಪ ಎಸ್.ಬಂಡಿವಡ್ಡರ್ ಹಾಜರಿದ್ದರು. ಒಂದು ವಾರದಿಂದ ಮುಷ್ಕರ ನಡೆಯುತ್ತಿದ್ದರೂ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಮೊದಲ ಬಾರಿಗೆ ಧರಣಿ ಕುಳಿತ ಗುತ್ತಿಗೆ ನೌಕರರು, ತಮ್ಮ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.