ADVERTISEMENT

ಕಾರ್ಮಿಕರನ್ನು ಸಂಘಟಿಸಿದ ಕೊರೊನಾ

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 15:37 IST
Last Updated 4 ಜೂನ್ 2020, 15:37 IST
ಯಲ್ಲಾಪುರ ಪಟ್ಟಣದ ರೈತ ಸಭಾ ಭವನದಲ್ಲಿ ಲಾರಿ ಮಾಲೀಕರ ಸಂಘ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಲಾರಿ ಚಾಲಕ, ಮಾಲೀಕರನ್ನು ಸನ್ಮಾನಿಸಲಾಯಿತು
ಯಲ್ಲಾಪುರ ಪಟ್ಟಣದ ರೈತ ಸಭಾ ಭವನದಲ್ಲಿ ಲಾರಿ ಮಾಲೀಕರ ಸಂಘ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಲಾರಿ ಚಾಲಕ, ಮಾಲೀಕರನ್ನು ಸನ್ಮಾನಿಸಲಾಯಿತು   

ಯಲ್ಲಾಪುರ: ಅಸಂಘಟಿತ ವಲಯದ 75 ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ಕೊರೊನಾ ಸಂಘಟಿತರನ್ನಾಗಿಸಿದೆ. ಸರ್ಕಾರ ಜನರಿಗೆ ಎರಡು ತಿಂಗಳ ತರಬೇತಿಯನ್ನು ನೀಡಿದ್ದು, ಕೊರೊನಾದೊಂದಿಗೆ ಬದುಕುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಪಟ್ಟಣದಲ್ಲಿ ಲಾರಿ ಮಾಲೀಕರ ಸಂಘ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ಹಿರಿಯ ಲಾರಿ ಚಾಲಕರು ಹಾಗೂ ಮಾಲೀಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಕಡಿಮೆ ಜನಸಂಖ್ಯೆ ಇರುವ ವಿಶ್ವದ ಮುಂದುವರಿದ ದೇಶಗಳೇ ಕೊರೊನಾವನ್ನು ನಿಯಂತ್ರಿಸಲಾಗದೆ ಸಾಕಷ್ಟು ಜನರನ್ನು ಕಳೆದುಕೊಂಡಿವೆ. 135 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಇದರ ನಿಯಂತ್ರಣ ಅಸಾಧ್ಯವಾದ ಸಂದರ್ಭದಲ್ಲಿ ದೇಶದ ಜನರ ಬದುಕಿಗಿಂತ, ಅವರು ಬದುಕುವುದು ಸರ್ಕಾರಕ್ಕೆ ಮುಖ್ಯವಾಗಿತ್ತು. ಹೀಗಾಗಿ ಕೊರೊನಾ ಲಾಕ್‌ಡೌನ್ ಕಠಿಣ ನಿರ್ಣಯವನ್ನು ತೆಗೆದುಕೊಳ್ಳಬೇಕಾಯಿತು ಎಂದರು.

ಫೆಡರೇಷನ್ ಆಫ್ ಲಾರಿ ಓನರ್ಸ್ ಮತ್ತು ಏಜೆಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ರಾಮಪ್ಪ ಪಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಲಾಕ್‍ಡೌನ್‌ನಿಂದಾಗಿ ಚಾಲಕರು ಏಕಾಏಕಿ ಸಂಕಷ್ಟದಲ್ಲಿ ಸಿಲುಕಿದರು. ಸರ್ಕಾರ ಒಂದು ದಿನ ಮೊದಲೇ ಮಾಹಿತಿ ನೀಡಿದ್ದರೆ, ಅವರು ತಮ್ಮ ಮನೆಗಳಿಗೆ ತೆರಳುತ್ತಿದ್ದರು. ಊಟ, ವಸತಿ, ನೀರು ಸಿಗದೇ ಬಹಳಷ್ಟು ಕಷ್ಟ ಅನುಭವಿಸಬೇಕಾಯಿತು. ಸರ್ಕಾರ ಕಾರು, ಟ್ಯಾಕ್ಸಿ ಚಾಲಕ ಮಾಲೀಕರಿಗೆ ಸರ್ಕಾರ ಅನುಕೂಲ ಮಾಡಿದಂತೆ ಲಾರಿ ಚಾಲಕರು ಹಾಗೂ ಮಾಲೀಕರಿಗೂ ಅನುಕೂಲತೆ ಕಲ್ಪಿಸಿ ಕೊಡಬೇಕು’ ಎಂದು ಸಚಿವರಲ್ಲಿ ಮನವಿ ಮಾಡಿದರು.

ADVERTISEMENT

ಲಾರಿ ಮಾಲೀಕರಾದ ಮಹಮ್ಮದ್ ಗೌಸ್, ಶ್ರೀಕಾಂತ ಶೆಟ್ಟಿ, ಮುಂಡಗೋಡ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸಂಜು ಪಿಸೆ ವೇದಿಕೆಯಲ್ಲಿದ್ದರು. ಹಿರಿಯ ಲಾರಿ ಚಾಲಕ, ಮಾಲೀಕರನ್ನು ಈ ಸಂದರ್ಭದಲ್ಲಿ ಸಚಿವರು ಸನ್ಮಾನಿಸಿದರು. ಯಲ್ಲಾಪುರ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮಹೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು ಅನಿಲ ನಾಯ್ಕ ಸ್ವಾಗತಿಸಿದರು. ಕೇಬಲ್ ನಾಗೇಶ ನಿರೂಪಿಸಿದರು.
ಮುಖಗವಸು ಮರೆತ ಪ್ರಮುಖರು !

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವರಿಂದ ಹಿಡಿದು ಎಲ್ಲ ಪ್ರಮುಖರು ಮುಖಗವಸು ಧರಿಸಲು ಹಾಗೂ ಪರಸ್ಪರ ಅಂತರ ಕಾಪಾಡಿಕೊಳ್ಳಲು ಮರೆತಿದ್ದು ಹಾಗೂ ಫೋಟೊ ತೆಗೆಸಿಕೊಳ್ಳುವಾಗಲೂ ಎಲ್ಲರೂ ಒಟ್ಟೊಟ್ಟಿಗೆ ನಿಂತಿದ್ದು ಹಲವರ ಗಮನಕ್ಕೆ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.