ADVERTISEMENT

ನೀರಿಗಿಳಿಯಲು ಸಜ್ಜುಗೊಳ್ಳದ ‘ಗಸ್ತು ಬೋಟ್’

ಯಾಂತ್ರೀಕೃತ ಮೀನುಗಾರಿಕೆ ಅವಧಿ ಆರಂಭಗೊಂಡರೂ ಸುರಕ್ಷತೆಗಿಲ್ಲ ಒತ್ತು

ಗಣಪತಿ ಹೆಗಡೆ
Published 2 ಆಗಸ್ಟ್ 2024, 6:26 IST
Last Updated 2 ಆಗಸ್ಟ್ 2024, 6:26 IST
ಕಾರವಾರದ ಬೈತಕೋಲದಲ್ಲಿರುವ ಕರಾವಳಿ ಕಾವಲು ಪಡೆಯ ಗಸ್ತು ಬೋಟ್‍ನ್ನು ಹೊದಿಕೆಯಿಂದ ಮುಚ್ಚಿಡಲಾಗಿದೆ.
ಕಾರವಾರದ ಬೈತಕೋಲದಲ್ಲಿರುವ ಕರಾವಳಿ ಕಾವಲು ಪಡೆಯ ಗಸ್ತು ಬೋಟ್‍ನ್ನು ಹೊದಿಕೆಯಿಂದ ಮುಚ್ಚಿಡಲಾಗಿದೆ.   

ಕಾರವಾರ: ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಂಡಿದ್ದರೂ ಕರಾವಳಿ ತೀರದಲ್ಲಿ ಸುರಕ್ಷತೆಯತ್ತ ನಿಗಾ ಇಡಬೇಕಿರುವ ಕರಾವಳಿ ಕಾವಲು ಪಡೆಯ ಗಸ್ತು ಬೋಟುಗಳು (ಇಂಟರಸೆಪ್ಟರ್) ಸಿದ್ಧಗೊಂಡಿಲ್ಲ.

ಇಲ್ಲಿನ ಬೈತಕೋಲದಲ್ಲಿರುವ ಕರಾವಳಿ ಕಾವಲು ಪಡೆಯ ಇಳಿದಾಣದಲ್ಲಿ ಒಂದು ಗಸ್ತು ಬೋಟ್ ಸಮುದ್ರದಲ್ಲಿ ನಿಂತಿದ್ದರೆ, ಇನ್ನೊಂದು ಬೋಟ್ ದುರಸ್ತಿ ಸಲುವಾಗಿ ದಡದಲ್ಲಿರುವ ಶೆಡ್‍ನಲ್ಲಿದೆ. ಕೆಲ ದಿನಗಳಿಂದ ಬೋಟ್‍ನ ವಾರ್ಷಿಕ ನಿರ್ವಹಣೆ ಕೆಲಸ ನಡೆಯುತ್ತಿದೆ.

ಮುಂಗಾರು ಆರಂಭದ ಎರಡು ತಿಂಗಳು ಯಾಂತ್ರೀಕೃತ ಮೀನುಗಾರಿಕೆ ಚಟುವಟಿಕೆ ನಿಷೇಧವಿರುವ ಅವಧಿಯಲ್ಲಿಯೇ ಕರಾವಳಿ ಕಾವಲು ಪಡೆಯ ಬೋಟ್‍ಗಳ ನಿರ್ವಹಣೆ ಕೆಲಸವೂ ನಡೆಯುತ್ತಿತ್ತು. ಮೀನುಗಾರಿಕೆ ಚಟುವಟಿಕೆ ಆರಂಭಗೊಳ್ಳುವ ಆಗಸ್ಟ್ ಮೊದಲ ವಾರದಿಂದಲೇ ಗಸ್ತು ಬೋಟ್‍ಗಳು ಸಮುದ್ರಕ್ಕೆ ಇಳಿಯುತ್ತಿದ್ದವು.

ADVERTISEMENT

ಆದರೆ, ಈ ಬಾರಿ ಗಸ್ತು ಬೋಟ್‍ಗಳು ಕಾರ್ಯಾಚರಣೆಗೆ ಈವರೆಗೂ ಸನ್ನದ್ಧವಾದ ಸ್ಥಿತಿಯಲ್ಲಿಲ್ಲ. ಇಳಿದಾಣದ ಬಳಿ ಸಮುದ್ರದಲ್ಲಿ ನಿಲುಗಡೆಯಾದ ಬೋಟ್‍ನ್ನು ಹೊದಿಕೆ ಮುಚ್ಚಿ ಇಡಲಾಗಿದೆ. ಇನ್ನೊಂದು ಬೋಟ್ ನಿಧಾನಗತಿಯಲ್ಲಿ ದುರಸ್ತಿಯಾಗುತ್ತಿದೆ ಎಂಬುದು ಮೀನುಗಾರರ ದೂರು.

‘ಮೀನುಗಾರಿಕೆಗೆ ತೆರಳಿದ ವೇಳೆ ಸಮುದ್ರದಲ್ಲಿ ಸಮಸ್ಯೆ ಉಂಟಾದರೆ ರಕ್ಷಣೆಗೆ ಕರಾವಳಿ ಕಾವಲು ಪಡೆಯ ಸಹಾಯವಾಣಿ ‘1093’ ಸಂಖ್ಯೆಗೆ ಕರೆ ಮಾಡುತ್ತೇವೆ. ಅವರಿಂದ ಸೂಕ್ತ ಸ್ಪಂದನೆ ಸಿಗುತ್ತದೆ. ಗಸ್ತು ದೋಣಿಯೇ ಇಲ್ಲದಿದ್ದರೆ ಅವರಿಂದ ಕಾರ್ಯಾಚರಣೆ ನಡೆಸಲು, ಸಹಾಯಕ್ಕೆ ಧಾವಿಸಲು ಸಾಧ್ಯವಾಗದು. ತಟರಕ್ಷಕ ಪಡೆ, ನೌಕಾದಳವಿದ್ದರೂ ಅವರು ಸೌಜನ್ಯದಿಂದ ವರ್ತಿಸುವುದು ಅಪರೂಪ. ಹೀಗಾಗಿ ಕರಾವಳಿ ಕಾವಲು ಪಡೆಯ ಗಸ್ತು ಬೋಟ್ ಇದ್ದರೆ ಸ್ಥಳೀಯ ಮೀನುಗಾರರ ರಕ್ಷಣೆಗೆ ಅನುಕೂಲ’ ಎನ್ನುತ್ತಾರೆ ಮೀನುಗಾರ ಮುಖಂಡರೊಬ್ಬರು.

‘ಗಸ್ತು ಬೋಟ್ ವರ್ಷದ ಬಹುತೇಕ ದಿನ ನಿರ್ವಹಣೆ ನೆಪದಲ್ಲಿ ದಡದಲ್ಲೇ ಇರುವುದು ಹೆಚ್ಚು. ಮೀನುಗಾರಿಕೆ ದೋಣಿಗಳು ಅಪಾಯಕ್ಕೆ ಸಿಲುಕಿದ್ದ ವೇಳೆ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಮೀನುಗಾರಿಕೆ ದೋಣಿ ಬಳಸಿ ಕಾರ್ಯಾಚರಣೆಗೆ ಧಾವಿಸಿದ್ದ ಪ್ರಸಂಗ ಕೆಲ ತಿಂಗಳ ಹಿಂದೆ ನಡೆದಿತ್ತು. ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಳ್ಳುವ ಮೊದಲೇ ಅವರು ಗಸ್ತು ಬೋಟ್ ಸಿದ್ಧವಿಟ್ಟುಕೊಳ್ಳುವ ಅಗತ್ಯವಿತ್ತು’ ಎಂದರು.

ಕಾರವಾರದ ಬೈತಕೋಲದಲ್ಲಿರುವ ಕರಾವಳಿ ಕಾವಲು ಪಡೆಯ ಇಳಿದಾಣದ ಶೆಡ್‍ನಲ್ಲಿ ಗಸ್ತು ಬೋಟ್‍ನ್ನು ನಿರ್ವಹಣಾ ಕಾರ್ಯದ ಸಲವಾಗಿ ಇರಿಸಲಾಗಿದೆ.
ಒಂದು ಗಸ್ತು ಬೋಟ್ ಸನ್ನದ್ಧ ಸ್ಥಿತಿಯಲ್ಲಿಯೇ ಇದೆ. ಇನ್ನೊಂದನ್ನು ನಿರ್ವಹಣೆ ಸಲುವಾಗಿ ದಡದಲ್ಲಿಟ್ಟಿದ್ದು ಎರಡು ವಾರದೊಳಗೆ ಸಮುದ್ರಕ್ಕೆ ಇಳಿಯಲಿದೆ. ಸಮುದ್ರ ಬಿರುಸುಗೊಂಡಿರುವ ಕಾರಣ ಕಾರ್ಯಾಚರಣೆಗೆ ಅನುಕೂಲವಾಗುತ್ತಿಲ್ಲ.
–ನಿಶ್ಚಲಕುಮಾರ್

ನಿಧಾನಗತಿಯಲ್ಲಿ ನಿರ್ವಹಣೆ?

‘ಗಸ್ತು ಬೋಟ್‍ಗಳ ನಿರ್ವಹಣೆಯ ಹೊಣೆಯನ್ನು ಕೇರಳ ಮೂಲದ ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಲಾಗಿದೆ. ಸರಿಯಾದ ಸಮಯಕ್ಕೆ ಬೋಟ್‍ಗಳನ್ನು ನಿರ್ವಹಣೆಗೆ ಸಿದ್ಧ ಇಡಲಾಗುತ್ತಿದೆ. ಅವುಗಳನ್ನು ಪರಿಶೀಲಿಸಿ ಅಗತ್ಯ ದುರಸ್ತಿ ಕಾರ್ಯ ನಡೆಸಲು ಸಂಸ್ಥೆಯಿಂದ ತಡವಾಗುತ್ತಿದೆ. ಪ್ರತಿ ವರ್ಷವೂ ಇಂತಹ ಸಮಸ್ಯೆ ಎದುರಾಗುತ್ತಿದೆ’ ಎಂದು ಕರಾವಳಿ ಕಾವಲು ಪಡೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.