ADVERTISEMENT

ಸೋತವರಿಗೆ ಪರಿಷತ್ ಟಿಕೆಟ್: ಮುಖ್ಯಮಂತ್ರಿಗೆ ಮತ್ತೊಮ್ಮೆ ಮನವಿ -ಸಚಿವ ಹೆಬ್ಬಾರ್‌

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 10:46 IST
Last Updated 5 ಜೂನ್ 2020, 10:46 IST

ಕಾರವಾರ: 'ಎಸ್.ವಿಶ್ವನಾಥ್ ಮತ್ತು ಎಂ.ಟಿ.ಬಿ.ನಾಗರಾಜ್ ಅವರಿಗೆ ವಿಧಾನಪರಿಷತ್ ಟಿಕೆಟ್ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಮನವಿ ಮಾಡಲಿದ್ದೇವೆ. ಈ ಸರ್ಕಾರ ರಚನೆಗಾಗಿ ಅವರೂ ಶಾಸಕ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಿರ್ಣಾಯಕ ಪಾತ್ರ ವಹಿಸಿದ್ದಾರೆ' ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ನಗರದಲ್ಲಿ ಶುಕ್ರವಾರ ಇಂದಿರಾ ಕ್ಯಾಂಟೀನ್ ಉ‌ದ್ಘಾಟಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

'ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ರಾಜೀನಾಮೆ ಕೊಟ್ಟ ಎಲ್ಲ 17 ಮಂದಿಯೂ ಜೊತೆಗಿದ್ದೇವೆ. ನಾವು ರಾಜೀನಾಮೆ ಕೊಟ್ಟ ಬಳಿಕ, ನಮ್ಮ ನಾಯಕರಾದ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಮ್ಮ ಜೊತೆ ಚುನಾವಣೆ ಎದುರಿಸಿದ ಮೂವರಿಗೆ ಸೋಲಾಗಿದೆ. ಅವರ ಪರವಾಗಿ ನಾವಿದ್ದೇವೆ. ಅವರ ಪರವಾಗಿ ಮತ್ತೊಮ್ಮೆ ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇವೆ' ಎಂದು ತಿಳಿಸಿದರು.

ADVERTISEMENT

'ಹೊಸ ಸರ್ಕಾರ ರಚನೆಗೆ ಅವರು ಮಂತ್ರಿ ಸ್ಥಾನ ಬಿಟ್ಟು ಬಂದಿದ್ದಾರೆ. ಹಾಗಾಗಿ ಅವರಿಗೆ ನ್ಯಾಯ ಸಿಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ತಮ್ಮ ಜೊತೆಗಿದ್ದವರು ಬಿಟ್ಟುಹೋಗಿದ್ದಾರೆ ಎಂದುಕೊಂಡಿದ್ದಾರೆ. ನಾವ್ಯಾರೂ ಅವರನ್ನು ಬಿಟ್ಟುಹೋಗಿಲ್ಲ' ಎಂದು ಸ್ಪಷ್ಟಪಡಿಸಿದರು.

'ನಮ್ಮನ್ನು ಮೂರು ತಿಂಗಳು ಬೆಟ್ಟದಲ್ಲಿ ತೋರಿಸಿದೀರಿ, ಓಡೋದನ್ನ ತೋರಿಸಿದೀರಿ. ಎಲ್ಲರೂ ಜೊತೆಗಿದ್ದೇವೆ' ಎಂದು ತಮಾಷೆಯಾಗಿ ಉತ್ತರಿಸಿದರು.

ಅವರಿಗೆ ಅವಕಾಶ ಸಿಗದೇ ಇದ್ದರೆ ಮುಂದೇನು ಹಾಗೂ ಬಿಜೆಪಿ ಶಾಸಕರು ತಮ್ಮ ಜೊತೆ ಸಂಪರ್ಕದಲ್ಲಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಪ್ರಶ್ನಿಸಿದಾಗ, 'ಅಷ್ಟು ದೊಡ್ಡವರ ಬಗ್ಗರ ನಾನ್ಯಾಕೆ ವಿಚಾರ ಮಾಡಲಿ? ದೊಡ್ಡವರೇ ನೋಡಿಕೊಳ್ತಾರೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.