ADVERTISEMENT

ಭರವಸೆಗೆ ಸೀಮಿತವಾದ ಕೋವಿಡ್ ಲ್ಯಾಬ್

ಶಿರಸಿಗೆ ಬಾರದ ಆರ್.ಟಿ.ಪಿ.ಸಿ.ಆರ್. ಯಂತ್ರೋಪಕರಣ, ತೆರೆಯದ ಪ್ರಯೋಗಾಲಯ

ಗಣಪತಿ ಹೆಗಡೆ
Published 12 ಆಗಸ್ಟ್ 2021, 16:38 IST
Last Updated 12 ಆಗಸ್ಟ್ 2021, 16:38 IST
ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸಿವಿಲ್ ಕಾಮಗಾರಿ ಪೂರ್ಣಗೊಂಡಿರುವ ಕೋವಿಡ್ ಲ್ಯಾಬ್
ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸಿವಿಲ್ ಕಾಮಗಾರಿ ಪೂರ್ಣಗೊಂಡಿರುವ ಕೋವಿಡ್ ಲ್ಯಾಬ್   

ಶಿರಸಿ: ಹನ್ನೆರಡು ತಾಲ್ಲೂಕುಗಳನ್ನೊಳಗೊಂಡ ಉತ್ತರ ಕನ್ನಡಕ್ಕೆ ಆರ್.ಟಿ.ಪಿ.ಸಿ.ಆರ್. ಯಂತ್ರವನ್ನು ಒಳಗೊಂಡ ಎರಡು ಕೋವಿಡ್ ಪ್ರಯೋಗಾಲಯದ ಅಗತ್ಯವಿದೆ ಎಂಬುದು ಈ ಮೊದಲಿನಿಂದಲೂ ಇದ್ದ ಬೇಡಿಕೆ. ಹೆಚ್ಚುವರಿ ಪ್ರಯೋಗಾಲಯ ಸ್ಥಾಪಿಸುವ ಜನಪ್ರತಿನಿಧಿಗಳ ಭರವಸೆ ಮೂರನೇ ಅಲೆಯನ್ನೂ ದಾಟುವ ಲಕ್ಷಣ ಗೋಚರಿಸಿದೆ!

ಮೊದಲ ಎರಡು ಅಲೆಗಳ ವೇಳೆ ಜಿಲ್ಲೆಯ ವಿವಿಧ ಭಾಗಗಳಿಂದ ಸಂಗ್ರಹವಾದ ಗಂಟಲುದ್ರವ ತಪಾಸಣೆಗೆ ಕಾರವಾರದ ಕ್ರಿಮ್ಸ್‌ಗೆ ರವಾನೆಯಾಗುತ್ತಿತ್ತು. ಎರಡನೇ ಅಲೆಯ ಅಂತ್ಯದ ಹೊತ್ತಿಗೆ(ಜೂನ್ ಮಧ್ಯಂತರದಲ್ಲಿ) ಶಿರಸಿಯಲ್ಲಿ ಪ್ರಯೋಗಾಲಯ ಸ್ಥಾಪನೆಯ ಕೆಲಸ ಕೈಗೆತ್ತಿಕೊಳ್ಳಲಾಯಿತು. ಸಿವಿಲ್ ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ಬಂದು ತಲುಪಿದೆ ಎಂಬುದು ಅಧಿಕಾರಿಗಳ ಉತ್ತರ.

ಆದರೆ, ಅಗತ್ಯ ಯಂತ್ರೋಪಕರಣ ಈವರೆಗೆ ಪೂರೈಕೆಯಾಗಿಲ್ಲ. ಪ್ರಯೋಗಾಲಯಕ್ಕೆ ಅವಶ್ಯಕವಿರುವ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಕುರಿತಂತೆ ಆರೋಗ್ಯ ಇಲಾಖೆ ಗಮನಹರಿಸಿಲ್ಲ ಎಂಬುದು ಸಾರ್ವಜನಿಕರ ದೂರು.

ADVERTISEMENT

ಘಟ್ಟದ ಮೇಲಿನ ಏಳು ತಾಲ್ಲೂಕುಗಳಿಗೆ ಅನುಕೂಲವಾಗುವಂತೆ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಎರಡನೇ ಕೋವಿಡ್ ಪತ್ತೆ ಪ್ರಯೋಗಾಲಯ ಸ್ಥಾಪಿಸುತ್ತೇವೆ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ಮತ್ತಷ್ಟು ದಿನ ಹೀಗೆಯೆ ಮುಂದುವರಿಯಬಹುದು ಎಂಬುದು ಘಟ್ಟದ ಮೇಲಿನ ತಾಲ್ಲೂಕುಗಳ ಜನರ ಅಭಿಪ್ರಾಯ.

‘ಪ್ರಯೋಗಾಲಯ ಸ್ಥಾಪನೆಗೆ ಬೇಕಿರುವ ಸಿದ್ಧತೆಗಳು ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ಮುಖ್ಯವಾಗಿ ಬೇಕಿರುವ ಆರ್.ಟಿ.ಪಿ.ಸಿ.ಆರ್. ಹಾಗೂ ಆರ್.ಎನ್.ಎ. ಎಕ್ಸ್‌ಟ್ರಾಕ್ಟರ್ ಯಂತ್ರಗಳು ಇನ್ನಷ್ಟೆ ಬರಬೇಕಿದೆ. ಇದಕ್ಕಾಗಿ ಇಲಾಖೆಯ ನಿರ್ದೇಶಕರಿಗೂ ಪತ್ರ ಬರೆದು ತಿಳಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಐ.ಸಿ.ಎಂ.ಆರ್. ಮಾರ್ಗಸೂಚಿ ಪ್ರಕಾರ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸಲು ತಜ್ಞ ವೈದ್ಯರು, ಸಿಬ್ಬಂದಿ ನೇಮಕವಾಗಬೇಕಿದೆ. ಈ ಬಗ್ಗೆಯೂ ಹಿರಿಯ ಅಧಿಕಾರಿಗಳ ಜತೆ ಸಂವಹನ ನಡೆಸುತ್ತಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

‘ಶಿರಸಿಯಲ್ಲಿ ಆರ್.ಟಿ.ಪಿ.ಸಿ.ಆರ್. ಯಂತ್ರವನ್ನೊಳಗೊಂಡ ಕೋವಿಡ್ ಲ್ಯಾಬ್ ಆರಂಭಿಸಲು ಅಗತ್ಯವಿರುವ ಎಲ್ಲ ಸೌಲಭ್ಯ ಒದಗಿಸುವಂತೆ ಈಗಾಗಲೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ದಾಖಲೆಯ ಐದು ಲಕ್ಷ ಪರೀಕ್ಷೆ:

ಹದಿನೈದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆವುಳ್ಳ ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ 5.03 ಲಕ್ಷದಷ್ಟು ಗಂಟಲುದ್ರವ ತಪಾಸಣೆ ನಡೆದಿದೆ. ಅವೆಲ್ಲವನ್ನೂ ಕಾರವಾರದ ಕ್ರಿಮ್ಸ್‌ನಲ್ಲಿರುವ ಕೋವಿಡ್ ಪ್ರಯೋಗಾಲಯದಲ್ಲಿ ನಡೆಸಲಾಗಿದೆ. ಕೋವಿಡ್ ಪರೀಕ್ಷೆಯಲ್ಲಿ ಸದ್ಯ 9ನೇ ಸ್ಥಾನದಲ್ಲಿರುವ ಕ್ರಿಮ್ಸ್ ವೈದ್ಯಕೀಯ ಸೌಕರ್ಯಗಳು ಹೆಚ್ಚಿರುವ ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗವನ್ನೂ ಮೀರಿಸಿದೆ.

ಸತತವಾಗಿ ಪ್ರತಿದಿನ ಸರಾಸರಿ ಎರಡೂವರೆ ಸಾವಿರ ಗಂಟಲುದ್ರವ ತಪಾಸಣೆ ನಡೆಸುವುದರಿಂದ ಒತ್ತಡ ಹೆಚ್ಚುತ್ತಿದೆ. ಪರೀಕ್ಷೆ ವರದಿ ಸಿಗಲು ವಿಳಂಬವಾಗುತ್ತದೆ ಎಂಬುದು ವೈದ್ಯಕೀಯ ಸಿಬ್ಬಂದಿ ಅಭಿಪ್ರಾಯ. ಹೀಗಾಗಿ ಶಿರಸಿಯಲ್ಲಿ ಕೋವಿಡ್ ಪ್ರಯೋಗಾಲಯ ಶೀಘ್ರ ಆರಂಭಿಸಿದರೆ ಒತ್ತಡ ತಗ್ಗಿಸುವ ಜತೆಗೆ ಹೆಚ್ಚಿನ ಪ್ರಮಾಣದ ಕೋವಿಡ್ ಪರೀಕ್ಷೆ ಕೈಗೊಳ್ಳಬಹುದು. ಆ ಮೂಲಕ ಸೋಂಕು ನಿಯಂತ್ರಣಕ್ಕೂ ಅನುಕೂಲವಾಗಬಹುದು ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.