ADVERTISEMENT

ಗುತ್ತಿಗೆ ಸೌಲಭ್ಯ ಕೇಂದ್ರ ತೆರೆಯಲು ಸೂಚನೆ

ಎಲ್ಲ ಅಂಗಡಿಗಳ ಪರವಾನಗಿ ಪರಿಶೀಲನೆಗೆ ಜಿಲ್ಲಾಧಿಕಾರಿ ತಾಕೀತು

​ಪ್ರಜಾವಾಣಿ ವಾರ್ತೆ
Published 24 ಮೇ 2019, 15:42 IST
Last Updated 24 ಮೇ 2019, 15:42 IST
ಕಾರವಾರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾತನಾಡಿದರು
ಕಾರವಾರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾತನಾಡಿದರು   

ಕಾರವಾರ:ಕುಡಿಯುವ ನೀರು ಸರಬರಾಜು ಸೇರಿದಂತೆವಿವಿಧಅಗತ್ಯ ವಿಷಯಗಳ ಟೆಂಡರ್‌ಗೆಯಾವುದೇ ಕೊರತೆ ಇಲ್ಲದೆ ಅನುಮೋದನೆ ಸಿಗಬೇಕು. ಈ ನಿಟ್ಟಿನಲ್ಲಿ ಅನುಕೂಲವಾಗಲು ನಗರಸಭೆಯಲ್ಲಿ ಗುತ್ತಿಗೆದಾರರಿಗಾಗಿ ಗುತ್ತಿಗೆ ಸೌಲಭ್ಯ ಕೇಂದ್ರ (ಟೆಂಡರ್ ಫೆಸಿಲಿಟೇಷನ್ ಸೆಂಟರ್) ತೆರೆಯುವಂತೆ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ನಗರಸಭೆ ಆಯುಕ್ತರಿಗೆ ಸೂಚಿಸಿದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಇತರ ವಿಷಯಗಳ ಕುರಿತುಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಟೆಂಡರ್ ನಿಯಮಗಳನ್ನು ಸರಿಯಾಗಿ ಪೂರೈಸದ ಕಾರಣ ಗುತ್ತಿಗೆ ಅನುಮೋದನೆ ಸಿಗುತ್ತಿಲ್ಲ. ಇದರಿಂದ ಕಾಮಗಾರಿಗಳು ವಿಳಂಬವಾಗುತ್ತವೆ ಎಂಬುದನ್ನು ಅರಿತ ಅವರು, ‘ಗುತ್ತಿಗೆ ಸೌಲಭ್ಯ ಕೇಂದ್ರವನ್ನು ಆರಂಭಿಸಬೇಕು. ಇದರಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಹೇಗೆ ಭಾಗವಹಿಸಬೇಕುಎಂದು ಗುತ್ತಿಗೆದಾರರಿಗೆ ಗೊತ್ತಾಗುತ್ತದೆ. ಗುತ್ತಿಗೆಗೆ ಅನುಮೋದನೆ ಸಿಗುವುದರಿಂದ ಕಾಮಗಾರಿಗಳು ತೀವ್ರಗೊಳ್ಳುತ್ತವೆ’ ಎಂದರು.

ADVERTISEMENT

ಬೈತಕೋಲ್ ಸೇರಿದಂತೆ ನಗರ ಪ್ರದೇಶದ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರದ ಅಗತ್ಯವಿದೆ. ಆದ್ದರಿಂದ ಮತ್ತಷ್ಟು ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡುವಂತೆತಿಳಿಸಿದರು.

ನಗರಸಭೆ ಪರಿಸರ ಎಂಜಿನಿಯರ್ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಪ್ರಸ್ತುತ ಕಸ ಬೇರ್ಪಡಿಸುವ ವ್ಯವಸ್ಥೆ ಮತ್ತಷ್ಟು ಸರಿಯಾಗಬೇಕಿದೆ. ಸಂಗ್ರಹಣಾಗಾರದಲ್ಲಿ ಒಣಕಸ, ಹಸಿಕಸ ಮಿಶ್ರಣವಾಗಿ ಬೀಳುತ್ತಿದೆ ಎಂದರು.

ಬೀದಿದೀಪ ವೆಚ್ಚ ದುಬಾರಿಯಾಗುತ್ತಿದೆ. ಈ ಬಗ್ಗೆ ಎಚ್ಚರ ವಹಿಸಬೇಕು. ಸಂಬಂಧಿಸಿದ ಕಡತಗಳಿಗೆ ಅನುಮೋದನೆ ಪಡೆಯಬೇಕುಎಂದು ಸೂಚಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ಕಂದಾಯ ವಸೂಲಾತಿ ₹ 7.30 ಕೋಟಿಗೂಹೆಚ್ಚು ಇರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ನಗರದಲ್ಲಿ 1,684 ಅಂಗಡಿಗಳುಪರವಾನಗಿಹೊಂದಿವೆ ಎಂದು ದಾಖಲೆಯಲ್ಲಿದೆ. ಆದರೆ, ಅದಕ್ಕೂ ಹೆಚ್ಚು ಅಂಗಡಿಗಳಿವೆ. ಈ ಬಗ್ಗೆ ಎಲ್ಲ ಅಂಗಡಿಗಳಿಗೂ ಭೇಟಿ ನೀಡಿ ಪರಿಶೀಲಿಸಬೇಕು.ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶವನ್ನು ಆನ್‌ಲೈನ್ ವ್ಯವಸ್ಥೆಗೆ ಒಳಪಡಿಸಬೇಕು ಎಂದು ತಾಕೀತು ಮಾಡಿದರು.

ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಲ್ಲಿ ನಿರ್ಮಿಸಲಾಗಿರುವ ಮನೆಗಳ ಗುಣಮಟ್ಟದ ಬಗ್ಗೆ ಉತ್ತಮ ಪ್ರತಿಕ್ರಿಯೆ ಇದೆ. ಮುಂದಿನ ದಿನದಲ್ಲಿ ಖುದ್ದು ಭೇಟಿಯಾಗುವುದಾಗಿ ಅವರು ತಿಳಿಸಿದರು.

ನಗರಸಭೆ ಆಯುಕ್ತ ಯೋಗೇಶ್ವರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲನ್ಕರ್, ಎಂಜಿನಿಯರ್‌ಗಳಾದ ವಿರಕ್ತಿಮಠ, ಮೋಹನ್ ರಾಜ್, ಮಲ್ಲಿಕಾರ್ಜುನ್, ಯಾಕೂಬ್ ಶೇಖ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.