ADVERTISEMENT

‘ತರಬೇತಿ ವೈದ್ಯರ ಕರ್ತವ್ಯ ಬಳಸಿಕೊಳ್ಳಿ’

ವೈದ್ಯಾಧಿಕಾರಿಗಳ ಜೊತೆ ವಿಡಿಯೊ ಸಂವಾದ ನಡೆಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 3 ಮೇ 2021, 16:31 IST
Last Updated 3 ಮೇ 2021, 16:31 IST
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಕಾರವಾರದಲ್ಲಿ ಸೋಮವಾರ ಸಭೆ ನಡೆಯಿತು
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಕಾರವಾರದಲ್ಲಿ ಸೋಮವಾರ ಸಭೆ ನಡೆಯಿತು   

ಕಾರವಾರ: ‘ಕೋವಿಡ್ ಎರಡನೇ ಅಲೆಯಿಂದ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅವರ ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜಿನಲ್ಲಿರುವ ತರಬೇತಿ ವೈದ್ಯರನ್ನು ಸಮರ್ಪಕವಾಗಿ ಬಳಸಿಕೊಳ್ಳಿ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್.ಎಂ.ಪಿ. ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ ಅವರು ಮಾತನಾಡಿದರು.

‘ಅಗತ್ಯವಿರುವ ನರ್ಸ್ ಹಾಗೂ ಡಿ ಗ್ರೂಪ್ ನೌಕರರನ್ನು ಅನುಮತಿ ಪಡದುಕೊಂಡು ಕರ್ತವ್ಯಕ್ಕೆ ನಿಯೋಜಿಸಿ. ಇನ್ನೊಂದೆರಡು ದಿನಗಳಲ್ಲಿ ತರಬೇತಿ ವೈದ್ಯರು ಲಭ್ಯವಾಗುತ್ತಾರೆ. ಅವರನ್ನು ಕಳುಹಿಸಿ ಕೊಡಲಾಗುವುದು. ಅಗತ್ಯವಿರುವ ವಾಹನ ಚಾಲಕರನ್ನು ಇತರ ಇಲಾಖೆಗಳಿಂದ ಪಡೆದುಕೊಳ್ಳಿ’ ಎಂದೂ ನಿರ್ದೇಶನ ನೀಡಿದರು.

ADVERTISEMENT

‘ಮಂಗಳೂರು, ಉಡುಪಿ, ಹುಬ್ಬಳ್ಳಿ, ಧಾರವಾಡದಂಥ ನಗರಗಳಿಗೆ ಸೋಂಕಿತರನ್ನು ಕಳಿಸದಿರಿ. ಈಗಾಗಲೇ ಅಲ್ಲಿನ ಆಸ್ಪತ್ರೆಗಳು ಕೂಡ ನಿರಾಕರಿಸುತ್ತಿರುವ ಸನ್ನಿವೇಶ ಕಂಡುಬರುತ್ತಿದೆ. ಆದ್ದರಿಂದ ನಮ್ಮ ಜಿಲ್ಲೆಯ ಸೊಂಕೀತರನ್ನು ನಾವೇ ನಿಭಾಯಿಸಬೇಕು’ ಎಂದರು.

‘ಔಷಧಿ, ಆಮ್ಲಜನಕದ ಸಿಲಿಂಡರ್ ಸೇರಿದಂತೆ ಯಾವುದೇ ವೈದ್ಯಕೀಯ ಉಪಕರಣಗಳ ಕೊರತೆ ಉಂಟಾದರೆ ತಕ್ಷಣ ತಿಳಿಸಿ. ಅವುಗಳನ್ನು ಒದಗಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ, ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಲತಾ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಸ್.ಪುರುಷೋತ್ತಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.