ಸಿದ್ದಾಪುರ: ಮದ್ಯವರ್ಜನ ಶಿಬಿರದಿಂದ ಮನಪರಿವರ್ತನೆಗೊಂಡು ಇಂದು ಅನೇಕರು ಸಮಾಜದ ವಿವಿಧ ಸ್ಥರಗಳಲ್ಲಿ ತಮ್ಮನ್ನು ಗುರುತಿಸಿಕೊಂಡು ಗಣ್ಯ ವ್ಯಕ್ತಿಗಳಾಗಿದ್ದಾರೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯ ಸಂಘಟನೆ ಅಧ್ಯಕ್ಷ ನಟರಾಜ ಬಾದಾಮಿ ಹೇಳಿದರು.
ಪಟ್ಟಣದ ಶಂಕರಮಠದ ಸಭಾಂಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಶಿರಸಿ ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ನಡೆದ 1966ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೆಗ್ಗಡೆ ಅವರ ಮೇಲೆ ಕೆಲವು ದುಷ್ಕರ್ಮಿಗಳು ಅಪವಾದ ಮಾಡುತ್ತಿದ್ದು, ಅಂಥವರ ಮೇಲೆ ಸೂಕ್ತ ಕ್ರಮ ಆಗಬೇಕು. ಗ್ರಾಮಾಭಿವೃದ್ಧಿ ಯೋಜನೆಯ ಪ್ರಯೋಜನ ಪಡೆದುಕೊಂಡವರು ಹಾಗೂ ಭಕ್ತರು ಹೆಗ್ಗಡೆ ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ಹೇಳಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ ವಿನ್ಸಂಟ್ ಪಾಯಸ್ ಮಾತನಾಡಿ, ಮದ್ಯವ್ಯವಸನದಿಂದ ಪುರಷರನ್ನು ದೂರಮಾಡುವುದಕ್ಕೆ ಮಹಿಳೆಯ ಜವಾಬ್ದಾರಿ ಹೆಚ್ಚಿದೆ. ಮದ್ಯ ತ್ಯಜಿಸಿ ಜೀವನ ನಡೆಸಿದರೆ ಸಮಾಜದಲ್ಲಿ ಗೌರವ ಹೆಚ್ಚುತ್ತದೆ ಎಂದರು.
ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಮಾತನಾಡಿದರು. ಪ.ಪಂ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ, ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಳಿಂಗರಾಜ್ ಎಂ.ಎಸ್, ಉಪಾಧ್ಯಕ್ಷೆ ಗೌರಿ ನಾಯ್ಕ, ಉಪೇಂದ್ರ ಪೈ, ವಸಂತ ನಾಯ್ಕ ಮನಮನೆ, ಮಹಾಬಲೇಶ್ವರ ಭಟ್ಟ, ರಾಮು ಕಿಣಿ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟೇಶ ಗೌಡ, ಜಿಲ್ಲಾ ನಿರ್ದೇಶಕ ದಿನೇಶ ಎಂ., ವಿನಾಯಕ ಕೆ.ಆರ್ ಇದ್ದರು.
ತಾಲ್ಲೂಕು ಯೋಜನಾಧಿಕಾರಿ ಗಿರೀಶ ಜಿ.ಪಿ. ಸ್ವಾಗತಿಸಿದರು. ಮೇಲ್ವಿಚಾರಿಕಿ ಪೂರ್ಣಿಮಾ ವಂದಿಸಿದರು. ಗಣೇಶ ಆಚಾರ್ಯ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.