ಶಿರಸಿ: ಶಿರಸಿಗೆ ತಕ್ಷಣ ಪೂರ್ಣಪ್ರಮಾಣದ ತಹಶೀಲ್ದಾರ್ ಅವರನ್ನು ನೇಮಿಸಬೇಕು. ಇಲ್ಲವಾದರೆ ಜೂನ್ 23ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ‘ತಹಶೀಲ್ದಾರ್ ಇಡೀ ತಾಲ್ಲೂಕಿನ ದಂಡಾಧಿಕಾರಿ. ಅತಿವೃಷ್ಟಿ, ಅಪಾಯ, ಮನೆ ಕುಸಿತ ಏನೇ ಆದರೂ ತಹಶೀಲ್ದಾರರು ಸಮಸ್ಯೆ ಪರಿಹರಿಸಲು ಮುಂದಾಗಬೇಕು. ತಹಶೀಲ್ದಾರರು ವರ್ಗಾವಣೆಯಾದರೆ ತಕ್ಷಣ ಮತ್ತೊಬ್ಬರನ್ನು ನೇಮಿಸಬೇಕು. ಆದರೆ ಮುಂಡಗೋಡದಲ್ಲಿ ಪ್ರಭಾರ ತಹಶೀಲ್ದಾರರನ್ನು ನೇಮಿಸಿ ಕೈತೊಳೆದುಕೊಳ್ಳಲಾಗಿದೆ. ಇದರಿಂದ ತಾಲ್ಲೂಕಿನ ಸಾರ್ವಜನಿಕರು ವಿವಿಧ ಕೆಲಸ ಮಾಡಿಕೊಳ್ಳಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಗಮನ ಸೆಳೆಯುವ ಪ್ರಯತ್ನ ಮಾಡಿದರೂ ಪ್ರಯೋಜನವಾಗದ ಕಾರಣ ಹೋರಾಟ ಅನಿವಾರ್ಯ’ ಎಂದರು.
ಬಿಜೆಪಿ ಶಿರಸಿ ಗ್ರಾಮೀಣ ಘಟಕದ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ‘ಇಡೀ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳ ಹುದ್ದೆ ಖಾಲಿಯಿದೆ. ತಹಶೀಲ್ದಾರ್, ಉಪವಿಭಾಗಾಧಿಕಾರಿ, ಪೌರಾಯುಕ್ತರನ್ನು ಪೂರ್ಣಪ್ರಮಾಣದಲ್ಲಿ ನೇಮಿಸಲು ಸರ್ಕಾರ ಕ್ರಮವಹಿಸುವ ಅಗತ್ಯವಿದೆ’ ಎಂದರು.
ಬಿಜೆಪಿ ಪದಾಧಿಕಾರಿಗಳಾದ ರಮೇಶ ನಾಯ್ಕ, ನಾರಾಯಣ ಹೆಗಡೆ, ರಾಘವೇಂದ್ರ ನಾಯ್ಕ, ಶೋಭಾ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.