ADVERTISEMENT

ಶಿರಸಿ: ಕೆನರಾ ಬೆಟ್ಟ ಪ್ರಿವಿಲೇಜ್ ಕಾಯಿದೆ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 13:12 IST
Last Updated 2 ಜೂನ್ 2025, 13:12 IST
ಶಿರಸಿಯ ಯಡಳ್ಳಿಯಲ್ಲಿ ಆಯೋಜಿಸಿದ್ದ ಬೆಟ್ಟದ‌ ಸುಸ್ಥಿರ ಅಭಿವೃದ್ಧಿ ಅಭಿಯಾನ ಚಾಲನಾ ಕಾರ್ಯಕ್ರಮದಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿದರು
ಶಿರಸಿಯ ಯಡಳ್ಳಿಯಲ್ಲಿ ಆಯೋಜಿಸಿದ್ದ ಬೆಟ್ಟದ‌ ಸುಸ್ಥಿರ ಅಭಿವೃದ್ಧಿ ಅಭಿಯಾನ ಚಾಲನಾ ಕಾರ್ಯಕ್ರಮದಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿದರು   

ಶಿರಸಿ: ರೈತರಿಗೆ ಆರ್ಥಿಕ ಭದ್ರತೆ ಜತೆ ಕೃಷಿಯೆಡೆ ಬದ್ಧತೆಗೆ ಪೂರಕವಾಗಿ ಸರ್ಕಾರವು ಕೆನರಾ ಬೆಟ್ಟ ಪ್ರಿವಿಲೇಜ್ ಕಾಯಿದೆ ಜಾರಿಗೆ ತರಬೇಕು ಎಂದು ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ‌ ಆಗ್ರಹಿಸಿದರು.

ವೃಕ್ಷ ಲಕ್ಷ ಅಂದೋಲನ, ಯಡಳ್ಳಿ ಸಹಕಾರಿ ಸಂಘ, ಜಿಲ್ಲಾ ಅಡಿಕೆ ಬೆಳೆಗಾರರ ಸಂಘ, ಅರಣ್ಯ ಇಲಾಖೆ ಸಹಕಾರದಲ್ಲಿ ಯಡಳ್ಳಿಯಲ್ಲಿ ಆಯೋಜಿಸಿದ್ದ ಬೆಟ್ಟದ‌ ಸುಸ್ಥಿರ ಅಭಿವೃದ್ಧಿ ಅಭಿಯಾನಕ್ಕೆ ಸೋಮವಾರ ಚಾಲನೆ‌ ನೀಡಿ ಆಶೀರ್ವದಿಸಿದರು. ಜಿಲ್ಲೆಯಲ್ಲಿ ಬಹುಭಾಗ ಇರುವ ಬೆಟ್ಟಗಳ ಅಭಿವೃದ್ದಿ ಆಗಬೇಕು. ಬೆಟ್ಟ ಹಾಗೂ ತೋಟದ ವ್ಯವಸ್ಥೆ ಆಪತ್ತಿನಲ್ಲಿದೆ. ಹಿಂದಿನಿಂದ ತೋಟಕ್ಕೆ ಇಂಥ ಬೆಟ್ಟ ವ್ಯವಸ್ಥೆ ಇದ್ದರೂ ದಾಖಲೆ ಸರಿಯಾಗಿ ಇರದ ಕಾರಣ ಸಮಸ್ಯೆ ಎದುರಾಗಿದೆ. ಒಂದು ಬೆಟ್ಟದಲ್ಲಿ ಹತ್ತಾರು ರೈತರ ಹೆಸರಿರುವುದೂ ಸಮಸ್ಯೆಗೆ ಕಾರಣವಾಗುತ್ತದೆ ಎಂದರು.

ಬೆಟ್ಟದ ‘ಬ’ ಕರಾಬು ಸಮಸ್ಯೆ ಬಗ್ಗೆ ಸ್ಥಳೀಯ ಶಾಸಕರ ಗಮನಕ್ಕೆ‌ ತರಲಾಗಿದೆ ಎಂದ ಶ್ರೀಗಳು, ಉತ್ತರ ಕನ್ನಡದ ನಿಜವಾದ ಅಭಿವೃದ್ಧಿ ಎಂದರೆ ಬೆಟ್ಟಗಳ ಅಭಿವೃದ್ಧಿಯೂ ಆಗಿದೆ. ಈ ಕಾರಣ ಬೆಟ್ಟ ಭೂಮಿಯ ಸಂರಕ್ಷಣೆ ಆಗಬೇಕು. ಬೆಟ್ಟದಲ್ಲಿನ ಉತ್ಪನ್ನಗಳ ಲಾಭ ಕೂಡ ರೈತರಿಗೆ ಸಿಗಲಿದೆ ಎಂದು ಹೇಳಿದರು. 

ADVERTISEMENT

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಬೆಟ್ಟ ಭೂಮಿ ಅಭಿವೃದ್ದಿಯ ವಿಚಾರದಲ್ಲಿ ಎಲ್ಲ‌ ರೈತರು ಮುಂದಾಗಬೇಕು. ಸವಾಲುಗಳ ಮಧ್ಯೆ ಸಾಧನೆ ಮಾಡಬೇಕು. ಏನೂ ಆಗುವುದಿಲ್ಲ ಎಂಬುದಕ್ಕಿಂತ ಏನಾದರೂ ಸಾಧಿಸಬೇಕು‌ ಎಂಬ ವಿಶ್ವಾಸದಿಂದ ಚಟುವಟಿಕೆ ನಡೆಯಬೇಕು ಎಂದರು‌.

ವೃಕ್ಷಲಕ್ಷ ಆಂದೋಲನದ ಸಂಚಾಲಕ ಅನಂತ ಅಶೀಸರ ಮಾತನಾಡಿ, ಸ್ವರ್ಣವಲ್ಲೀ ಮಠದಿಂದ 22 ಜನರಿಗೆ ಬೆಟ್ಟ ಅಭಿವೃದ್ದಿ ಪ್ರಶಸ್ತಿ ನೀಡಲಾಗಿದೆ ಎಂದರು. ಬೆಟ್ಟ ಹಕ್ಕು ಬಳಕೆದಾರರಿಗೆ ಬಿಟ್ಟುಕೊಡುವಂತಾಗಬೇಕು, ಬೆಟ್ಟಕ್ಕೆ ಸರ್ವೆ ನಂಬರ್ ಪ್ರತ್ಯೇಕ ಕೊಡವೇಕು, ಬ ಕರಾಬು ತೆಗೆದುಹಾಕಬೇಕು ಎಂದರು.

ಇದೇ ವೇಳೆ ಶ್ರೀಧರ ಕೆರೆಕೊಪ್ಪ ಅವರನ್ನು ಗೌರವಿಸಲಾಯಿತು. ಡಿಎಫ್ಒ ಜಿ.ಆರ್.ಅಜ್ಜಯ್ಯ, ಇದ್ದರು. ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್.ಬೆಳ್ಳೇಕೇರಿ ಅಧ್ಯಕ್ಷತೆವಹಿಸಿದ್ದರು. ಅನಂತ ಭಟ್‌ ಕರಸುಳ್ಳಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.