ADVERTISEMENT

ಡೀಮ್ಡ್ ಅರಣ್ಯ ಅಭಿವೃದ್ಧಿಗೆ ಯೋಜನೆ ರೂಪಿಸಿ: ಬೊಮ್ಮಾಯಿಗೆ ಮನವಿ

ವೃಕ್ಷ ಲಕ್ಷ ಆಂದೋಲದಿಂದ ಮುಖ್ಯಮಂತ್ರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 12:46 IST
Last Updated 23 ಜುಲೈ 2022, 12:46 IST
ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದರು
ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದರು   

ಶಿರಸಿ: ರಾಜ್ಯದಲ್ಲಿ ಡೀಮ್ಡ್ ಅರಣ್ಯ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುವಂತೆ ವೃಕ್ಷ ಲಕ್ಷ ಆಂದೋಲನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ.

ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನೇತೃತ್ವದ ನಿಯೋಗ ಈಚೆಗೆ ಮುಖ್ಯಮಂತ್ರಿ ಅವರಿಗೆ ಯೋಜನೆಯ ರೂಪುರೇಷೆ ಕುರಿತು ಕೆಲ ಸಲಹೆಗಳನ್ನು ನೀಡಿ ಒತ್ತಾಯಿಸಲಾಯಿತು.

‘ರಾಜ್ಯ ಸರ್ಕಾರ ಘೋಷಣೆ ಮಾಡಿರುವ 3,30,186 ಹೆಕ್ಟೇರ್ ಡೀಮ್ಡ್ ಅರಣ್ಯ ಸಂರಕ್ಷಣೆ ಮಾಡಲು ತಳಮಟ್ಟದಲ್ಲಿ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಬೇಕು. ಕಂದಾಯ ಇಲಾಖೆ ಸಹಕಾರದೊಂದಿಗೆ ಬೇಲಿ, ಕಂದಕ ನಿರ್ಮಿಸಿ ಮಲೆನಾಡಿನ ದಟ್ಟ ಕಾನುಗಳನ್ನು ರಕ್ಷಿಸಲು ವನೀಕರಣ ಕೈಗೊಳ್ಳಬೇಕು’ ಎಂದು ಒತ್ತಾಯಿಸಲಾಗಿದೆ.

ADVERTISEMENT

‘ಡೀಮ್ಡ್ ಅರಣ್ಯ ಸಂರಕ್ಷಣೆ ಅಭಿವೃದ್ಧಿ ಜವಾಬ್ದಾರಿ ಅರಣ್ಯ ಇಲಾಖೆಗೆ ನೀಡಬೇಕು. ಗ್ರಾಮ ಅರಣ್ಯ ಸಮಿತಿ ರಚನೆಗಳ ಮೂಲಕ ಈ ಅರಣ್ಯ ಅಭಿವೃದ್ಧಿಯಲ್ಲಿ ಗ್ರಾಮ ಜನರ ಸಹಭಾಗಿತ್ವ ಪಡೆಯಬೇಕು. 1,65,905 ಹೆಕ್ಟೇರ್ ‍ನಷ್ಟು ಡೀಮ್ಡ್ ಅರಣ್ಯ ಪಶ್ಚಿಮ ಘಟ್ಟದ ಜಿಲ್ಲೆಗಳ ವ್ಯಾಪ್ತಿಯಲ್ಲಿದೆ. ಇಲ್ಲಿ ಜೇನು ಕಾಡು, ರಾಂಪತ್ರೆ ಜಡ್ಡಿಗಳಂತ ಸೂಕ್ಷ್ಮ ಪ್ರದೇಶಗಳಿದ್ದು, ಈ ಡೀಮ್ಡ್ ಅರಣ್ಯ ಪ್ರದೇಶಗಳಿಗೆ ಸರ್ಕಾರ ಮೊದಲ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಲಾಗಿದೆ.

‘ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಡೀಮ್ಡ್ ಅರಣ್ಯ ಅಭಿವೃದ್ಧಿ ಸಮಾಲೋಚನಾ ಸಭೆ ಏರ್ಪಡಿಸಬೇಕು. ನಿಸರ್ಗ ಸಂಪತ್ತಿನ ಉಳಿವಿಗೆ ದೇಶದಲ್ಲೇ ಮಾದರಿ ಎನ್ನಬಹುದಾದ ಡೀಮ್ಡ್ ಅರಣ್ಯ ಅಭಿವೃದ್ಧಿ ಯೋಜನೆ ರೂಪಿಸಿ ಜಾರಿ ಮಾಡಬೇಕು’ ಎಂದು ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.