ADVERTISEMENT

ಉಡುಪಿ | ದೇವರ ಸನ್ನಿಧಾನದಲ್ಲಿ ‘ದೇವರಕಾಡು’

ಮಂಜುಗುಣಿಯಲ್ಲಿ ₹ 78 ಲಕ್ಷ ವೆಚ್ಚದಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 14:17 IST
Last Updated 1 ಜೂನ್ 2020, 14:17 IST
ಶಿರಸಿ ತಾಲ್ಲೂಕಿನ ಮಂಜುಗುಣಿ ದೇವರಕಾಡಿನಲ್ಲಿ ಅಳವಡಿಸಿರುವ ಮಕ್ಕಳ ಆಟಿಕೆಗಳು
ಶಿರಸಿ ತಾಲ್ಲೂಕಿನ ಮಂಜುಗುಣಿ ದೇವರಕಾಡಿನಲ್ಲಿ ಅಳವಡಿಸಿರುವ ಮಕ್ಕಳ ಆಟಿಕೆಗಳು   

ಶಿರಸಿ: ವೆಂಕಟರಮಣನ ಸಾನ್ನಿಧ್ಯಕ್ಕೆ ಹೋಗುವ ಭಕ್ತರು, ಪ್ರಕೃತಿಯ ನಡುವೆ ಕೆರೆಯ ತಡಿಯಲ್ಲಿ ರಾಧೆಯೊಂದಿಗೆ ಕುಳಿತ ಕೃಷ್ಣನ ಮುರಳಿನಾದವನ್ನು ಕೇಳಬಹುದು! ಇಂತಹುದೊಂದು ಅಪರೂಪದ ಸನ್ನಿವೇಶವನ್ನು ಅರಣ್ಯ ಇಲಾಖೆ ಸೃಷ್ಟಿಸಿದೆ.

ತಾಲ್ಲೂಕಿನ ಜಾನ್ಮನೆ ವಲಯ ಅರಣ್ಯ ವ್ಯಾಪ್ತಿಯ ಮಂಜುಗುಣಿಯಲ್ಲಿ ವಿಶಿಷ್ಟವಾದ ದೇವರಕಾಡು ರೂಪುಗೊಂಡಿದೆ. ಧಾರ್ಮಿಕ ಮಹತ್ವ ಹೊಂದಿರುವ ಇಲ್ಲಿನ ಒಂದೊಂದು ಸಸ್ಯವೂ ದೇವರ ಕಾಡಿನ ದೇವರಂತೆ ಕಾಣುತ್ತದೆ. ಅರಣ್ಯ ಇಲಾಖೆಯ ದೇವರಕಾಡು ಅನುದಾನದ ಅಡಿಯಲ್ಲಿ ₹ 78 ಲಕ್ಷ ವೆಚ್ಚದಲ್ಲಿ ಈ ಉದ್ಯಾನ ನಿರ್ಮಾಣವಾಗಿದೆ. ಮಂಜುಗುಣಿ ದೇಗುಲಕ್ಕೆ ಬರುವ ಭಕ್ತರಿಗೆ ಇದು ಇನ್ನೊಂದು ನೆಮ್ಮದಿಯ ತಾಣ.

ಆರು ಹೆಕ್ಟೇರ್ ವಿಸ್ತೀರ್ಣದಲ್ಲಿರುವ ದೇವರ ಕಾಡಿನಲ್ಲಿ ಕೃತಕ ಕೊಳ, ವಿಶ್ರಾಂತಿಧಾಮ ನಿರ್ಮಿಸಲಾಗಿದೆ. ಪ್ರಾಕೃತಿಕವಾಗಿರುವ ಕಲ್ಲುಬಂಡೆಗಳಿಗೆ ಸುಂದರ ರೂಪ ನೀಡಿದ್ದು, ಅವುಗಳ ಮೇಲೆ ಕುಂಚದ ಕೈಚಳಕ ಮೂಡಿದೆ. ಮುದ ನೀಡುವ ಜೋಕಾಲಿ, ಜಾರುಬಂಡಿ, ತಿರುಗುಚಕ್ರಗಳು ಮಕ್ಕಳನ್ನು ಸೆಳೆಯುತ್ತವೆ. 1,406 ಮೀಟರ್ ಉದ್ದದ ವಾಕಿಂಗ್ ಪಾತ್‌, ಅದರ ಇಕ್ಕೆಲಗಳಲ್ಲಿ ಕುಳಿತುಕೊಳ್ಳಲು ಆಸನಗಳನ್ನು ಇಡಲಾಗಿದೆ. ಇವೆಲ್ಲಕ್ಕೆ ಸಾಕ್ಷಿಯಾಗಿ ನಟ್ಟನಡುವೆ ಮರದ ಆಸರೆಯಲ್ಲಿ ರಾಧೆ–ಕೃಷ್ಣರು ಕುಳಿತಿದ್ದಾರೆ. ಪ್ರವೇಶ ದ್ವಾರದಲ್ಲಿ ಆಕರ್ಷಕ ಕಮಾನು ರಚಿಸಲಾಗಿದೆ.

ADVERTISEMENT

ಮುಂಬರುವ ದಿನಗಳಲ್ಲಿ ಸ್ಥಳೀಯವಾಗಿ ಬೆಳೆಯುವ ಹಣ್ಣು-ಹಂಪಲು ಹಾಗೂ ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಆಲ, ಅರಳಿ, ಅತ್ತಿ, ಬಸರಿ, ಮುತ್ತುಗ, ರುದ್ರಾಕ್ಷಿ, ಸೀತಾಅಶೋಕ, ನೆಲ್ಲಿ, ಬಿಲ್ವಪತ್ರೆ, ಶಮೀಪತ್ರೆ, ಹೂಸಂಪಿಗೆ, ನಾಗಸಂಪಿಗೆ, ಕಾಯಿದೂಪ, ಹಾಲಮಡ್ಡಿ ಮುಂತಾದ ಸಸಿಗಳನ್ನು ನಾಟಿ ಮಾಡಲು ನೀಲನಕ್ಷೆ ಸಿದ್ಧವಾಗಿದೆ.

ಮಂಜುಗುಣಿಗೆ ಬರುವ ಭಕ್ತರಿಗೆ ಮನರಂಜನೆ ಜೊತೆಗೆ ಪರಿಸರದ ಮಹತ್ವ ತಿಳಿಸಲು ಕ್ಷೀಣಿತ ಅರಣ್ಯದಲ್ಲಿ ದೇವರಕಾಡು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ದೇವರಕಾಡಿನ ನಿರ್ವಹಣೆಯನ್ನು ಗ್ರಾಮ ಅರಣ್ಯ ಸಮಿತಿಗೆ ವಹಿಸಿಕೊಡುವ ಯೋಚನೆಯಿದೆ ಎಂದು ಡಿಸಿಎಫ್ ಎಸ್.ಜಿ.ಹೆಗಡೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.