ಕುಮಟಾ:‘ಕೋವಿಡ್ ಸಂದರ್ಭದಲ್ಲಿ ಹೆಚ್ಚಿನ ಗ್ರಾಮೀಣ ಭಾಗದ ಜನತೆ ಅಮೃತ ಬಳ್ಳಿಯಂಥ ಔಷಧಿ ಸಸ್ಯಗಳ ಕಷಾಯ ಬಳಿಸಿದ್ದರಿಂದ ವೈರಾಣು ಎದುರಿಸಿ ಆರೋಗ್ಯ ಕಪಾಡಿಕೊಂಡ ಎಷ್ಟೋ ಉದಾಹರಣೆಗಳಿವೆ. ಔಷಧಿ ಸಸ್ಯ ಕೃಷಿ ಮಾಡುವವರಿಗೆ ಸಹಕಾರಿ ಸಂಘಗಳ ಮೂಲಕ ಕೃಷಿ ಸಾಲ ನೀಡುವ ಸಾಧ್ಯತೆಗಳ ಬಗ್ಗೆ ಬ್ಯಾಂಕ್ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ ಹೇಳಿದರು.
ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಜೀವ ವೈವಿಧ್ಯ ಮಂಡಳಿ ಹಾಗೂ ಕುಮಟಾದ ‘ಐಕ್ಯ’ ಎನ್.ಜಿ.ಒ ಶುಕ್ರವಾರ ತಾಲ್ಲೂಕಿನ ಕತಗಾಲ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ರೈತರಿಗಾಗಿ ಹಮ್ಮಿಕೊಂಡಿದ್ದ ಔಷಧಿ ಸಸ್ಯಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಔಷಧ ಗಿಡಮೂಲಿಕಾ ಪ್ರಾಧಿಕಾರದ ವಿಜ್ಞಾನಿ ಡಾ.ಎಂ.ಜಿ. ಪ್ರಭು ಮಾತನಾಡಿ, ‘ಔಷಧಿ ಸಸ್ಯಗಳನ್ನು ನಿತ್ಯ ಜೀವನದಲ್ಲಿ ವ್ಯಾಪಕವಾಗಿ ಬಳಕೆ ಮಾಡಿದರೆ ಅದಕ್ಕೆ ಸಹಜವಾಗಿ ಬೇಡಿಕೆ ಹೆಚ್ಚುತ್ತದೆ. ಕೇವಲ ಅವುಗಳನ್ನು ಮಾರಾಟ ಮಾಡುವುದಕ್ಕೆ ಮಾತ್ರ ಬೆಳೆದರೆ ಅವುಗಳನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳಲು ಮುಂದೆ ಬರುತ್ತಾರೆ. ಆಯರ್ವೇದದಲ್ಲಿ 2,351, ನಾಟಿ ವೈದ್ಯ ಪದ್ಧತಿಯಲ್ಲಿ 5,137 ಹಾಗೂ ಹೋಮೊಯೋಪಥಿ ವೈದ್ಯ ಪದ್ಧತಿಯಲ್ಲಿ 506 ಬಗೆಯ ಗಿಡಮೂಲಿಕೆಯನ್ನು ಔಷಧಿ ತಯಾರಿಗೆ ಬಳಕೆ ಮಾಡಲಾಗುತ್ತದೆ. ಔಷಧ ಸಸ್ಯಗಳ ಬೇಡಿಕೆಗನುಗುಣವಾಗಿ ಅವುಗಳನ್ನು ರೈತರು ಎಚ್ಚರಿಕೆಯಿಂದ ಬೆಳೆಯಬೇಕು’ ಎಂದರು.
ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಎಂ.ಡಿ ಸುಭಾಶ್ಚಂದ್ರನ್ ಕರಾವಳಿ ಪ್ರದೇಶಗಳಲ್ಲಿ ಬೆಳೆಯುವ ಔಷಧಿ ಸಸ್ಯಗಳ ಬಗ್ಗೆ ಮಾಹಿತಿ ನೀಡಿದರು. ಔಷಧಿ ಗಿಡಮೂಲಿಕಾ ಪ್ರಾಧಿಕಾರದ ವಿಜ್ಞಾನಿ ಡಾ. ಕೆ.ಎಂ. ಪ್ರಭು, ಔಷಧಿ ಸಸ್ಯಗಳ ಕೃಷಿ, ನಿರ್ವಣೆಯ ಬಗ್ಗೆ ಮಾಹಿತಿ ನೀಡಿದರು.
ಜೀವ ವೈವಿದ್ಯ ಮಂಡಳಿ ವಿಜ್ಞಾನಿ ಪ್ರಸನ್ನ ಔಷಧಿ ಸಸ್ಯ ಹಾಗೂ ಜೀವ ವೈವಿಧ್ಯ ಸಂಬಂಧಗಳ ಬಗ್ಗೆ ತಿಳಿಸಿದರು. ಸಂಘದ ಅಧ್ಯಕ್ಷ ವಿ.ಪಿ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕರಾದ ರಾಜೀವ ಭಟ್ಟ, ಉದಯ ಭಟ್ಟ, ಶ್ರೀಧರ ಹೆಬ್ಬಾರ, ಪ್ರದೀಪ ಹೆಗಡೆ ಅನಿಸಿಕೆ ವ್ಯಕ್ತಪಡಿಸಿದರು. ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಜಾನ್ ಫರ್ನಾಂಡೀಸ್ ಕೃಷಿಕರಾದ ವಿ.ಎಂ.ಜಾಲಿಸತ್ಗಿ, ಕೆ.ಪಿ. ಭಟ್ಟ, ಜಗದೀಶ ನಾಯ್ಕ, ಐಕ್ಯ ಎನ್.ಜಿ.ಒ ಅಧ್ಯಕ್ಷ ಎಂ.ಜಿ. ನಾಯ್ಕ ಸಂಹವನದಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.