ಗೋಕರ್ಣ: ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ದಿಲೀಶ ಶಶಿ ಪ್ರಥಮ ಬಾರಿಗೆ ಮಂಗಳವಾರ ಗೋಕರ್ಣಕ್ಕೆ ದಿಢೀರ್ ಭೇಟಿ ನೀಡಿ, ಪಟ್ಟಣದ ಪ್ರಮುಖ ಸ್ಥಳಗಳ ವೀಕ್ಷಿಸಿದರು.
ನಂತರ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಪ್ರಯತ್ನ ನಡೆಸಲಾಗುವುದು. ಈ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ವಿನಂತಿಸಲಾಗುವುದು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಈಗಿದ್ದ ಕಾರ್ಮಿಕರ ಸಂಖ್ಯೆ ಸಾಲದಾಗಿದ್ದು, ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಿಸಿ, ಕ್ಷೇತ್ರದ ಹಿತದೃಷ್ಟಿಯಿಂದ ಸ್ವಚ್ಛತೆಗೆ ಅವಶ್ಯವಿರುವ ಎಲ್ಲಾ ಸಲಕರಣೆಗಳನ್ನೂ ಒದಗಿಸಲು ಪ್ರಯತ್ನಿಸುತ್ತೇನೆ. ಸ್ಥಳೀಯ ಆಡಳಿತ ಕ್ಷೇತ್ರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು.
ಮಹಾಬಲೇಶ್ವರ ಮಂದಿರದ ಮುಂದಿರುವ ಮುಖ್ಯ ಸಂಗಮ ನಾಲೆ ನೈರ್ಮಲ್ಯದಿಂದ ತುಂಬಿದೆ. ಅದರ ಸಂಪೂರ್ಣ ಅಭಿವೃದ್ಧಿಗೆ ವಿಶ್ವಬ್ಯಾಂಕ್‌ನಿಂದ ಈಗಾಗಲೇ ಅನುದಾನ ಲಭಿಸಿದೆ. ನಾಲೆಯ ಅಭಿವೃದ್ಧಿ ಕಾಮಗಾರಿ ಆದಷ್ಟು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದರು.
ಗ್ರಾಮ ಪಂಚಾಯ್ತಿಯಿಂದ ನಿರ್ಮಿಸಲಾದ ನೂತನ ಮಲ ಸಂಸ್ಕರಣಾ ಘಟಕಕ್ಕೂ ಭೇಟಿ ನೀಡಿ ಪರಿಶೀಲಿಸಿದ್ದೇನೆ. ನೂತನ ಘಟಕಕ್ಕೆ ಕಾಂಪೌಂಡ್ ಹಾಕುವ ಅವಶ್ಯತೆಯಿದ್ದು ಮತ್ತು ಘಟಕಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮನಾ ಗೌಡ, ತಾಲ್ಲೂಕು ಪಂಚಾಯ್ತಿ ಇ.ಒ. ಉದಯ ನಾಯ್ಕ, ನೈರ್ಮಲ್ಯ ನಿರ್ವಹಣಾಧಿಕಾರಿ ಸೂರ್ಯನಾರಾಯಣ ಭಟ್, ಪಿ.ಡಿ.ಒ. ವೆಂಕಟ್ರಮಣ ಪಟಗಾರ, ಕಾರ್ಯದರ್ಶಿ ಮಂಜುನಾಥ ಕೆ. ಹಾಗೂ ವಿನಾಯಕ ಸಿದ್ದಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.