ADVERTISEMENT

ಮೊದಲ ಸುತ್ತಿನ ಮನೆ–ಮನೆ ಪ್ರಚಾರ 24ರಿಂದ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 12:46 IST
Last Updated 1 ಡಿಸೆಂಬರ್ 2019, 12:46 IST
ಯಲ್ಲಾಪುರ ವಿಧಾನ ಸಬಾ ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿ ಕಾರ್ಕಳದ ಶಾಸಕ ಸುನೀಲಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಯಲ್ಲಾಪುರ ವಿಧಾನ ಸಬಾ ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿ ಕಾರ್ಕಳದ ಶಾಸಕ ಸುನೀಲಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.   

ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮೊದಲ ಸುತ್ತಿನ ಮನೆ–ಮನೆ ಪ್ರಚಾರ ನ.24ರಿಂದ ಆರಂಭವಾಗಲಿದೆ ಎಂದು ಕಾರ್ಕಳ ಶಾಸಕ ಸುನೀಲಕುಮಾರ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ‘ಇತ್ತೀಚೆಗೆ ಪತನಗೊಂಡ ಸಮ್ಮಿಶ್ರ ಸರ್ಕಾರ ಮತ್ತು ಇದಕ್ಕಿಂತ ಪೂರ್ವದ ಕಾಂಗ್ರೆಸ್ ಸರ್ಕಾರಗಳು ರಾಜ್ಯದ ಅಭಿವೃದ್ಧಿಯನ್ನು ನಿರ್ಲಕ್ಷಿಸಿ, ಜನರನ್ನು ಗೋಳಾಡಿಸಿದ್ದವು. ಉಪಚುನಾವಣೆಯಲ್ಲಿ ‘ಬಿಜೆಪಿ ಬೆಂಬಲಿಸುವುದೆಂದರೆ ಅಭಿವೃದ್ಧಿಗೆ ಬೆಂಬಲ ನೀಡಿದಂತೆ’ ಎಂಬ ಮಾನದಂಡದೊಂದಿಗೆ ಪ್ರಚಾರ ನಡೆಸಲಾಗುವುದು. ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಲು ಮುಖ್ಯಮಂತ್ರಿ ಕ್ಷೇತ್ರಕ್ಕೆ ಭೇಟಿ ನೀಡುವರು’ ಎಂದರು.

ಬಿಜೆಪಿಯೇತರ ಸರ್ಕಾರಗಳು ಯಾವುದೇ ಜನಪರ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದ ಉದಾಹರಣೆಗಳಿಲ್ಲ. ಆದರೆ, ಕೇಂದ್ರ ಸರ್ಕಾರದ ಯೋಜನೆಗಳು ಜನರಲ್ಲಿ ವಿಶ್ವಾಸ ಮೂಡಿಸಿವೆ. ರಾಜ್ಯ ಮತ್ತು ಕೇಂದ್ರಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಆಂತರಿಕ ಕಚ್ಚಾಟ ನಡೆಸಿದ್ದು, ಅಲ್ಲಿ ನಾಯಕತ್ವದ ಕೊರತೆಯಿಂದ ಪಕ್ಷ ಕ್ಷೀಣವಾಗುತ್ತಿದೆ ಎಂದರು.

ADVERTISEMENT

ಬೆಳೆ ಹಾನಿ ಪರಿಹಾರವಾಗಿ ಜಿಲ್ಲೆಗೆ ₹ 1200 ಕೋಟಿ ನೀಡಿದ್ದರೂ, ಫಲಾನುಭವಿಗಳಿಗೆ ದೊರೆತಿಲ್ಲ ಯಾಕೆ ಎಂಬ ಪ್ರಶ್ನೆಗೆ, ‘ಈ ಕುರಿತಂತೆ ನನಗೆ ಖಚಿತ ಮಾಹಿತಿ ಇಲ್ಲ. ಜಿಲ್ಲಾಧಿಕಾರಿಯಿಂದ ತಿಳಿದುಕೊಳ್ಳಲಾಗುವುದು’ ಎಂದರು. ಬಿಜೆಪಿ ಪ್ರಮುಖರಾದ ಪ್ರಮೋದ ಹೆಗಡೆ, ಭಾಸ್ಕರ ನಾರ್ವೇಕರ್, ವೆಂಕಟೇಶ ನಾಯ್ಕ, ಪ್ರೇಮಾನಂದ ನಾಯ್ಕ, ರಾಮು ನಾಯ್ಕ, ವಿಶ್ವೇಶ್ವರ ಜೋಷಿ, ವನಜಾಕ್ಷಿ ಹೆಬ್ಬಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.